ಸಂಸದೆ, ನಟಿ ಕಂಗನಾ ರನೌತ್ ನಟಿಸಿ ನಿರ್ದೇಶನ ಮಾಡಿ ನಿರ್ಮಾಣವೂ ಮಾಡಿರುವ ‘ಎಮರ್ಜೆನ್ಸಿ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಆದರೆ ಸಿನಿಮಾ ಬಿಡುಗಡೆಗೆ ಮುಂಚೆಯೇ ಸಿನಿಮಾಕ್ಕೆ ನಿಷೇಧದ ಭೀತಿ ಎದುರಾಗಿದೆ. ಕಂಗನಾ ರನೌತ್ ನಟನೆಯ ‘ಎಮರ್ಜೆನ್ಸಿ’ ಸಿನಿಮಾವನ್ನು ನಿಷೇಧ ಮಾಡಲು ತೆಲಂಗಾಣ ರಾಜ್ಯ ಯೋಜಿಸಿದೆ. ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯಲು ಮುಂದಾಗುವುದಾಗಿ ಸರ್ಕಾರದ ಸಲಹೆಗಾರ ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.
ಬಿಜೆಪಿ ಸಂಸದೆ ಹಾಗೂ ಮೊದಲಿನಿಂದಲೂ ತೀವ್ರ ಕಾಂಗ್ರೆಸ್ ವಿರೋಧಿಯಾಗಿ ಗುರುತಿಸಿಕೊಂಡಿರುವ ಕಂಗನಾ ರನೌತ್, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜೀವನ ಕುರಿತ ‘ಎಮರ್ಜೆನ್ಸಿ’ ಸಿನಿಮಾ ಮಾಡಿದ್ದಾರೆ. ಸಿನಿಮಾದಲ್ಲಿ ಕಂಗನಾ ರನೌತ್, ಇಂದಿರಾ ಗಾಂಧಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಇಂದಿರಾ ಗಾಂಧಿಯನ್ನು ವಿಲನ್ ರೀತಿ ಬಿಂಬಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರ ಜೊತೆಗೆ ಸಿಖ್ ಸಮಯದಾಯವನ್ನು ಭಯೋತ್ಪಾದಕರ ರೀತಿ ತೋರಿಸಲಾಗಿದೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ತೆಲಂಗಾಣದ ಕಾಂಗ್ರೆಸ್ ಸರ್ಕಾರ ಆ ಸಿನಿಮಾವನ್ನು ರಾಜ್ಯದಲ್ಲಿ ನಿಷೇಧ ಮಾಡುವ ಬಗ್ಗೆ ಯೋಜಿಸಿದೆ.
ಇದನ್ನೂ ಓದಿ:ಆಕೆಗೆ ಅತ್ಯಾಚಾರದ ಅನುಭವವಿದೆ ಎಂದ ಪಂಜಾಬ್ ನಾಯಕನಿಗೆ ಕಂಗನಾ ರಣಾವತ್ ಖಡಕ್ ತಿರುಗೇಟು
ತೆಲಂಗಾಣದ ಸಿಖ್ ಸಮುದಾಯವು, ‘ಎಮರ್ಜೆನ್ಸಿ’ ಸಿನಿಮಾ ರಾಜ್ಯದಲ್ಲಿ ಬಿಡುಗಡೆ ಆಗದಂತೆ ತಡೆಯಬೇಕೆಂದು ಸಿಎಂಗೆ ಮನವಿ ಸಲ್ಲಿಸಿದ್ದು, ಸಿಖ್ ಸಮುದಾಯಕ್ಕೆ ಭರವಸೆ ನೀಡಿರುವ ರೇವಂತ್ ರೆಡ್ಡಿ, ಸಿನಿಮಾದ ಬಿಡುಗಡೆ ತಡೆಯಲು ಇರಬಹುದಾದ ಕಾನೂನು ಅವಕಾಶಗಳ ಬಗ್ಗೆ ಚರ್ಚಿಸುವುದಾಗಿ ಹೇಳಿದ್ದಾರೆಂದು ಸಲಹಾ ಸಮಿತಿಯ ಮೊಹಮ್ಮದ್ ಅಲಿ ಶಬ್ಬೀರ್ ಹೇಳಿದ್ದಾರೆ. ತೆಲಂಗಾಣ ಸಿಖ್ ಸಮುದಾಯವು, ಮಾಜಿ ಐಪಿಎಸ್ ಅಧಿಕಾರಿ ತೇಜದೀಪ್ ಕೌರ್ ಮೆನನ್ ಅವರ ನೇತೃತ್ವದಲ್ಲಿ ಸಿಎಂ ಕಚೇರಿಗೆ ಭೇಟಿ ನೀಡಿದ್ದು, ಸಿಎಂ ಸಲಹೆಗಾರರಾದ ಮೊಹಮ್ಮದ್ ಅಲಿ ಶಬ್ಬೀರ್ ಅವರನ್ನು ಭೇಟಿಯಾಗಿ ‘ಎಮರ್ಜೆನ್ಸಿ’ ಸಿನಿಮಾ ಬಿಡುಗಡೆ ತಡೆಯುವಂತೆ ಮನವಿ ಪತ್ರ ಸಲ್ಲಿಸಿದ್ದಾರೆ.
‘ಎಮರ್ಜೆನ್ಸಿ’ ಸಿನಿಮಾದ ವಿರುದ್ಧ ಸಿಖ್ ಸಮುದಾಯ ಆಕ್ರೋಶ ಹೊರಹಾಕಿದೆ. ಇತ್ತೀಚೆಗೆ ವೈರಲ್ ಆಗಿದ್ದ ವಿಡಿಯೋ ಒಂದರಲ್ಲಿ ಇಬ್ಬರು ಸಿಖ್ ಸಮುದಾಯದ ವ್ಯಕ್ತಿಗಳು ಸಿನಿಮಾ ನಿಷೇಧ ಆಗಬೇಕೆಂದು ಒತ್ತಾಯಿಸಿದ್ದಲ್ಲದೆ, ಸಿನಿಮಾ ಬಿಡುಗಡೆ ಆದಲ್ಲಿ, ಹಾಗೂ ಸಿನಿಮಾದಲ್ಲಿ ಸಿಖ್ ಸಮುದಾಯ ನಾಯಕರನ್ನು ಆತಂಕವಾದಿ, ಭಯೋತ್ಪಾದಕ ಎಂದು ತೋರಿಸಿದ್ದಲ್ಲಿ ತಲೆ ಕಡಿಯುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. ವಿಡಿಯೋ ಹಂಚಿಕೊಂಡಿದ್ದ ನಟಿ ಕಂಗನಾ ರನೌತ್, ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಅಂದಹಾಗೆ ‘ಎಮರ್ಜೆನ್ಸಿ’ ಸಿನಿಮಾ ಸೆಪ್ಟೆಂಬರ್ 06 ರಂದು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ