AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರೋತ್ಸವದಲ್ಲಿ ಮೆಚ್ಚುಗೆ ಪಡೆದ ‘ಬ್ರಹ್ಮ ಕಮಲ’ ಶೀಘ್ರವೇ ಬಿಡುಗಡೆ; ಬಂತು ಟ್ರೇಲರ್

‘ದಾರಿ ಯಾವುದಯ್ಯ ವೈಕುಂಠಕೆ’ ಖ್ಯಾತಿಯ ಸಿದ್ದು ಪೂರ್ಣಚಂದ್ರ ಅವರು ‘ಬ್ರಹ್ಮ ಕಮಲ’ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಅದ್ವಿತಿ ಶೆಟ್ಟಿ, ಋತು ಚೈತ್ರಾ, ಲೋಕೇಂದ್ರ ಸೂರ್ಯ ಮುಂತಾದವರು ನಟಿಸಿರುವ ಈ ಸಿನಿಮಾದ ಟ್ರೇಲರ್ ರಿಲೀಸ್ ಮಾಡಲಾಗಿದ್ದು, ಕಥೆ ಬಗ್ಗೆ ಸುಳಿವು ನೀಡಲಾಗಿದೆ. ಸಿನಿಮಾ ಕುರಿತು ಇಲ್ಲಿದೆ ಮಾಹಿತಿ..

ಚಿತ್ರೋತ್ಸವದಲ್ಲಿ ಮೆಚ್ಚುಗೆ ಪಡೆದ ‘ಬ್ರಹ್ಮ ಕಮಲ’ ಶೀಘ್ರವೇ ಬಿಡುಗಡೆ; ಬಂತು ಟ್ರೇಲರ್
Brahma Kamala Movie Poster
ಮದನ್​ ಕುಮಾರ್​
|

Updated on: Aug 02, 2026 | 11:10 AM

Share

ಅದ್ವಿತಿ ಶೆಟ್ಟಿ (Advithi Shetty) ಅವರು ಪ್ರಮುಖ ಪಾತ್ರ ಮಾಡಿರುವ ‘ಬ್ರಹ್ಮ ಕಮಲ’ (Brahma Kamala) ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಈ ಸಿನಿಮಾಗೆ ಸಿದ್ದು ಪೂರ್ಣಚಂದ್ರ ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಹಿಂದೆ ‘ದಾರಿ ಯಾವುದಯ್ಯ ವೈಕುಂಠಕೆ’ ಸಿನಿಮಾದ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡ ಅವರು, ತಾವು ಆಯ್ಕೆ ಮಾಡಿಕೊಳ್ಳುವ ಕಥೆಗಳು ಭಿನ್ನವಾಗಿರುತ್ತವೆ ಎಂಬುದನ್ನು ತಿಳಿಸಿದ್ದರು. ಈಗ ಸಿದ್ದು ಪೂರ್ಣಚಂದ್ರ ಅವರು ಮತ್ತೊಂದು ಸೂಕ್ಷ್ಮ ಕಥನಕ್ಕೆ ದೃಶ್ಯರೂಪ ನೀಡಿದ್ದಾರೆ.

ನಮ್ಮ ನಡುವಿನ ಕೌಟುಂಬಿಕ ವ್ಯವಸ್ಥೆಯೊಳಗಿನ ಹೆಣ್ಣೊಬ್ಬಳ ತಳಮಳಕ್ಕೆ ಕಣ್ಣಾದ ಕಥೆ ‘ಬ್ರಹ್ಮ ಕಮಲ’ ಸಿನಿಮಾದಲ್ಲಿದೆ. ಈ ಚಿತ್ರದ ಶೀರ್ಷಿಕೆಯೇ ಗಮನ ಸೆಳೆಯುತ್ತಿದೆ. ಸಿನಿಮಾದ ಕಥೆ ಏನು ಎಂಬುದನ್ನು ಟ್ರೇಲರ್ ಮೂಲಕ ತಿಳಿಸಲಾಗಿದೆ. ಇತ್ತೀಚೆಗಷ್ಟೇ ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಕೌಟುಂಬಿಕ ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟ ಆಗಲಿದೆ ಎಂಬ ಸುಳಿವು ಸಿಕ್ಕಿದೆ.

ಚಿತ್ರರಂಗದಲ್ಲಿ ಸಾಮಾನ್ಯವಾಗಿ ಜನಪ್ರಿಯವಾದ ಕಮರ್ಷಿಯಲ್ ಕಥಾಹಂದರದ ಸಿನಿಮಾಗಳನ್ನೇ ಬಹುತೇಕ ನಿರ್ಮಾಪಕರು ಆಯ್ಕೆ ಮಾಡಿಕೊಳ್ಳುತ್ತಾರೆ. ಅವುಗಳ ನಡುವೆ ಭಿನ್ನ ಕಥಾಹಂದರ ಸಿನಿಮಾಗಳು ಕೂಡ ಚಿತ್ರರಂಗಕ್ಕೆ ಅವಶ್ಯಕ. ಆ ನಿಟ್ಟಿನಲ್ಲಿ ‘ಬ್ರಹ್ಮ ಕಮಲ’ ಮೂಡಿಬಂದಿದೆ ಎಂದು ಚಿತ್ರತಂಡ ಹೇಳಿದೆ. ಸಾಮಾಜಿಕ ಒತ್ತಡಗಳಿಗೆ ಸಿಲುಕಿದ ಮಹಿಳೆಯ ನೋವಿನ ಕಥೆಯನ್ನು ಈ ಸಿನಿಮಾ ತೆರೆದಿಡಲಿದೆ.

‘ಬ್ರಹ್ಮ ಕಮಲ’ ಸಿನಿಮಾ ಟ್ರೇಲರ್:

‘ಬ್ರಹ್ಮ ಕಮಲ’ ಸಿನಿಮಾ ಈಗ ಬಿಡುಗಡೆಗೆ ಸಿದ್ಧವಿದೆ. ಈಗಾಗಲೇ ಬೆಂಗಳೂರು ಅಂತಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಈ ಸಿನಿಮಾಗೆ ಭರಪೂರ ಮೆಚ್ಚುಗೆ ಸಿಕ್ಕಿತ್ತು. ಪ್ರೇಕ್ಷಕರ ಒತ್ತಾಯದ ಮೇರೆಗೆ ಮೂರು ಪ್ರದರ್ಶನಗಳನ್ನು ಕಂಡಿತ್ತು ಎಂದು ಚಿತ್ರತಂಡ ಹೇಳಿದೆ. ಸದ್ಯದಲ್ಲೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿರುವ ಈ ಸಿನಿಮಾಗೆ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇದನ್ನೂ ಓದಿ: ‘ಮದರ್ ಪ್ರಾಮಿಸ್’ ಬಳಿಕ ‘ಅಣ್ಣ ಫ್ರಮ್‌ ಮೆಕ್ಸಿಕೋ’ ಸಿನಿಮಾ ರಿಲೀಸ್​​ಗೆ ರೆಡಿ ಆದ ಡಾಲಿ ಧನಂಜಯ್

ನಿರ್ದೇಶನದ ಜೊತೆಗೆ ಸಿದ್ದು ಪೂರ್ಣಚಂದ್ರ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ‘ಪೂರ್ಣ ಚಂದ್ರ ಫಿಲ್ಮ್ಸ್’ ಬ್ಯಾನರ್ ಮೂಲಕ ಈ ಚಿತ್ರ ನಿರ್ಮಾಣಗೊಂಡಿದೆ. ಅದ್ವಿತಿ ಶೆಟ್ಟಿ, ಋತು ಚೈತ್ರಾ, ಲೋಕೇಂದ್ರ ಸೂರ್ಯ, ಬಾಲ ರಾಜ್ವಾಡಿ, ಮಮತಾ ರಾವುತ್, ಪ್ರಮೀಳಾ ಸುಬ್ರಮಣ್ಯ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಲೋಕೇಂದ್ರ ಸೂರ್ಯ ಅವರ ಛಾಯಾಗ್ರಹಣ, ಅನಂತ್ ಆರ್ಯನ್ ಅವರ ಸಂಗೀತ ನಿರ್ದೇಶನ, ದೀಪು ಅವರ ಸಂಕಲನ ಈ ಸಿನಿಮಾಗಿದೆ. ನಾಗರತ್ನ ಕೆ.ಹೆಚ್. ಅವರು ನಿರ್ಮಾಣ ನಿರ್ವಹಣೆ ಮಾಡಿದ್ದಾರೆ. ಪುಟ್ಟರಾಜು ಮತ್ತು ಪ್ರಮೀಳಾ ಸುಬ್ರಮಣ್ಯ ಅವರು ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us