
ಶಾರುಖ್ ಖಾನ್ಗೆ (Shah Rukh Khan) ನಮ್ಮ ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಅಭಿಮಾನಿಗಳಿದ್ದಾರೆ. ರಾಜ್ಯ, ಭಾಷೆಗಳನ್ನೂ ಮೀರಿ ಅವರನ್ನು ಪ್ರೀತಿಸುತ್ತಾರೆ, ಗೌರವಿಸುತ್ತಾರೆ. ಅವರು ಚಿತ್ರರಂಗದಲ್ಲಿ ಈಗ 30 ವರ್ಷ ಪೂರೈಸಿದ್ದಾರೆ. ಶಾರುಖ್ ಅವರ ಈ ಸುದೀರ್ಘ ಪಯಣ ಅಷ್ಟು ಸುಲಭದ್ದಾಗಿರಲಿಲ್ಲ. ಈ ಅವಧಿಯಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಜತೆಗೆ ಕೆಲ ವಿವಾದಗಳನ್ನು ಅವರು ಮಾಡಿಕೊಂಡಿದ್ದಾರೆ. ಕೆಲವು ಕಣ್ತಿಪ್ಪಿನಿಂದ ಆದರೆ, ಕೆಲವು ಗೊತ್ತಿದ್ದೂ ಮಾಡಿದ ತಪ್ಪುಗಳು. ಈಗ ಶಾರುಖ್ ಕನ್ನಡವನ್ನು (Kannada) ಕಡೆಗಣಿಸಿ ತಪ್ಪು ಮಾಡಿದ್ದಾರೆ. ಇದಕ್ಕೆ ಕನ್ನಡಿಗರು ಕ್ಷಣಮಾತ್ರದಲ್ಲಿ ತಿರುಗೇಟು ನೀಡಿದ್ದಾರೆ.
ಶಾರುಖ್ ಖಾನ್ ಅವರು ಬಾಲಿವುಡ್ನ ಬೇಡಿಕೆಯ ನಟ ನಿಜ. ಆದರೆ, ಅವರು ತಪ್ಪು ಮಾಡಿದಾಗ ಅನೇಕರು ತಿದ್ದಿ ಹೇಳಿದ್ದಾರೆ. ಈ ಬಾರಿ ಕನ್ನಡಿಗರು ಕಿಂಗ್ ಖಾನ್ಗೆ ಬುದ್ಧಿವಾದ ಹೇಳಿದ್ದಾರೆ. ಎಲ್ಲಾ ಭಾಷೆಯನ್ನು ಗೌರವಿಸುವಂತೆ ಕನ್ನಡಿಗರು ಅವರನ್ನು ತಿವಿದಿದ್ದಾರೆ. ಅಷ್ಟಕ್ಕೂ ಶಾರುಖ್ ಮಾಡಿದ ತಪ್ಪೇನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ಶಾರುಖ್ ಖಾನ್ ಅವರು ಇಂದು (ಜೂನ್ 25) ಚಿತ್ರತರಂಗದಲ್ಲಿ 30 ವರ್ಷ ಪೂರೈಸಿದ್ದಾರೆ. ಈ ವಿಶೇಷ ದಿನದ ಅಂಗವಾಗಿ ಶಾರುಖ್ ನಟನೆಯ ‘ಪಠಾಣ್’ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಇದರಲ್ಲಿ ಒಂದು ವಿಚಾರ ಸ್ಪಷ್ಟವಾಗಿದೆ. ಈ ಸಿನಿಮಾ ಹಿಂದಿ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಮಾತ್ರ ರಿಲೀಸ್ ಆಗುತ್ತಿದೆ. ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಚಿತ್ರ ತೆರೆಗೆ ಬರುತ್ತಿಲ್ಲ. ಇದಕ್ಕೆ ಕನ್ನಡಿಗರಿಂದ ವಿರೋಧ ವ್ಯಕ್ತವಾಗಿದೆ.
ಇತ್ತೀಚೆಗೆ ‘ನೋ ಕನ್ನಡ ನೋ ಬಿಸ್ನೆಸ್’ ಎನ್ನುವ ಹ್ಯಾಶ್ಟ್ಯಾಗ್ ವೈರಲ್ ಆಗಿತ್ತು. ಕಮಲ್ ಹಾಸನ್ ನಟನೆಯ ‘ವಿಕ್ರಮ್’ ಸಿನಿಮಾ ಕನ್ನಡದಲ್ಲಿ ರಿಲೀಸ್ ಆಗಿರಲಿಲ್ಲ. ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ಅನೇಕರಿಂದ ಈ ಚಿತ್ರಕ್ಕೆ ವಿರೋಧ ವ್ಯಕ್ತವಾಗಿತ್ತು. ಈಗ ‘ಪಠಾಣ್’ ಚಿತ್ರದ ಹೊಸ ಪೋಸ್ಟರ್ಗೂ ಅನೇಕರು ವಿರೋಧ ತೋರಿದ್ದಾರೆ. ಸಿನಿಮಾ ರಿಲೀಸ್ ಸಂದರ್ಭದಲ್ಲಿ ಈ ಕಾವು ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
‘ಕನ್ನಡ ಹಾಗೂ ಮಲಯಾಳಂ ಭಾಷೆಯನ್ನು ನೀವು ಕಡೆಗಣಿಸುತ್ತಿರುವುದು ಏಕೆ?’ ಎಂದು ಕೆಲವರು ಶಾರುಖ್ ಖಾನ್ ಹಾಗೂ ಚಿತ್ರತಂಡವನ್ನು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ‘ನಿಮ್ಮ ಸಿನಿಮಾ ನಮ್ಮ ನಾಡಲ್ಲಿ ರಿಲೀಸ್ ಮಾಡುವುದೇ ಬೇಡ’ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಶಾರುಖ್ ಖಾನ್ ಮಗಳು ಸುಹಾನಾ ಖಾನ್ಗೆ ಏನು ಚಿಂತೆ? ಗಡಿಬಿಡಿಯಲ್ಲಿ ಹೊರಟ ಸ್ಟಾರ್ ಕಿಡ್
ಶಾರುಖ್ ಖಾನ್-ಅಟ್ಲೀ ಹೊಸ ಸಿನಿಮಾ ಅನೌನ್ಸ್; ಟೈಟಲ್ ಘೋಷಣೆ ಮಾಡಿದ ಕಿಂಗ್ ಖಾನ್