
‘ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾ ಬಿಡುಗಡೆ ಆಗಿ 14 ದಿನಗಳಾಗಿವೆ. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭಾರಿ ಕಲೆಕ್ಷನ್ ಮಾಡುತ್ತಿದೆ. ಈಗಾಗಲೇ ಸಿನಿಮಾ ವಿಶ್ವದಾದ್ಯಂತ 700 ಕೋಟಿ ರೂಪಾಯಿ ಕಲೆಕ್ಷನ್ ದಾಟಿದೆ. ಸಿನಿಮಾ ಕರ್ನಾಟಕದಲ್ಲಿ ಮಾತ್ರವಲ್ಲದೆ ಪರ ಭಾಷೆಗಳಲ್ಲಿಯೂ ಭರ್ಜರಿ ಗಳಿಕೆ ಮಾಡುತ್ತಿದೆ. ತಮಿಳುನಾಡು, ಆಂಧ್ರ, ತೆಲಂಗಾಣಗಳಲ್ಲಿ 100 ಕೋಟಿಯ ಗಡಿಯತ್ತ ಸಿನಿಮಾ ದಾಪುಗಾಲು ಹಾಕಿದ್ದು ಆಯಾ ರಾಜ್ಯಗಳಲ್ಲಿ ಕೆಲ ಹೊಸ ದಾಖಲೆಗಳನ್ನು ಸಹ ಬರೆದಿದೆ. ಉತ್ತರ ಭಾರತದಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ಈಗಾಗಲೇ ಆಮಿರ್ ಖಾನ್, ಅಜಯ್ ದೇವಗನ್, ಅಕ್ಷಯ್ ಕುಮಾರ್ ಅವರ ಹಿಟ್ ಸಿನಿಮಾಗಳ ಗಳಿಕೆಯ ದಾಖಲೆಗಳನ್ನೇ ಮುರಿದು ಹಾಕಿದೆ.
ಉತ್ತರ ಭಾರತದಲ್ಲಿ ಕೇವಲ 14 ದಿನಗಳಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ 150 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ದೊಡ್ಡ ಮೊತ್ತವನ್ನು ಬಾಲಿವುಡ್ನ ಸ್ಟಾರ್ ನಟರ ಸಿನಿಮಾಗಳೇ ಗಳಿಕೆ ಮಾಡಿಲ್ಲ ಎಂಬುದು ವಿಶೇಷ. ಅಜಯ್ ದೇವಗನ್ ಅವರ ‘ರೈಡ್ 2’, ಅಕ್ಷಯ್ ಕುಮಾರ್ ಅವರ ‘ಹೌಸ್ಫುಲ್ 5’ ಲೈಫ್ ಟೈಮ್ ಗಳಿಕೆ ದಾಖಲೆಯನ್ನು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮುರಿಯುವುದು ಖಾತ್ರಿ. ಇನ್ನು ಆಮಿರ್ ಖಾನ್ ಅವರ ಸೂಪರ್ ಹಿಟ್ ಸಿನಿಮಾ ‘ಸಿತಾರೆ ಜಮೀನ್ ಪರ್’ ಸಿನಿಮಾದ ಲೈಫ್ ಟೈಂ ಕಲೆಕ್ಷನ್ ದಾಖಲೆಯನ್ನು ಇನ್ನೆರಡು ವಾರಗಳಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮುರಿಯಲಿದೆ ಎಂದು ಬಾಲಿವುಡ್ ಟ್ರೇಡ್ ಅನಲಿಸ್ಟ್ಗಳು ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ:‘ಕಾಂತಾರ ಚಾಪ್ಟರ್ 1’ ಯಶಸ್ಸು: ಚಾಮುಂಡೇಶ್ವರಿ ದರ್ಶನ ಪಡೆದ ರಿಷಬ್ ಶೆಟ್ಟಿ
‘ಕಾಂತಾರ: ಚಾಪ್ಟರ್ 1’ ಸಿನಿಮಾ ಹಿಂದಿ ಪ್ರಾಂತ್ಯದಲ್ಲಿ ಮೊದಲಿಗೆ ಸಾಧಾರಣ ಓಪನಿಂಗ್ ಅನ್ನು ಪಡೆದುಕೊಂಡಿತ್ತು. ಆದರೆ ಮೊದಲೆರಡು ದಿನಗಳ ಬಳಿಕ ಗಳಿಕೆಯಲ್ಲಿ ವೇಗ ಹೆಚ್ಚಿಸಿಕೊಂಡಿತು. ಕೌಟುಂಬಿಕ ಪ್ರೇಕ್ಷಕರು ಚಿತ್ರಮಂದಿರಗಳ ಕಡೆ ಬರಲಾರಂಭಿಸಿದ ಬಳಿಕ ಸಿನಿಮಾದ ಕಲೆಕ್ಷನ್ ದೊಡ್ಡ ಮಟ್ಟದಲ್ಲಿ ಹೆಚ್ಚಾಯ್ತು. ಹಿಂದಿ ರೀಜನ್ನಲ್ಲಿ ಕೇವಲ 14 ದಿನಕ್ಕೆ 150 ಕೋಟಿ ಗಳಿಸಿರುವುದು ಸಾಮಾನ್ಯ ಸಾಧನೆಯಲ್ಲ. ಪರ ಭಾಷೆಯ ಸಿನಿಮಾಗಳು ಹಿಂದಿ ರೀಜನ್ನಲ್ಲಿ ಕಡಿಮೆ ಅವಧಿಯಲ್ಲಿ 150 ಕೋಟಿ ಗಳಿಸಿರುವ ಉದಾಹರಣೆ ತುಸು ಕಡಿಮೆಯೇ.
2022 ರ ‘ಕಾಂತಾರ’ ಸಿನಿಮಾಕ್ಕೂ ಸಹ ಹಿಂದಿ ಪ್ರೇಕ್ಷಕರು ಭರಪೂರ ಪ್ರೀತಿ ತೋರಿಸಿದ್ದರು. ಕರ್ನಾಟಕ ಹೊರತುಪಡಿಸಿ ಹಿಂದಿ ಪ್ರಾಂತ್ಯದಲ್ಲಿಯೇ 2022ರ ‘ಕಾಂತಾರ’ ಹೆಚ್ಚಿನ ಮೊತ್ತ ಗಳಿಕೆ ಮಾಡಿತ್ತು. ಈಗಲೂ ಸಹ ಅದು ಮುಂದುವರೆದಿದೆ. ಇದೇ ಕಾರಣಕ್ಕೆ ರಿಷಬ್ ಶೆಟ್ಟಿ ತೆಲುಗು, ತಮಿಳಿಗಿಂತಲೂ ಹಿಂದಿ ಪ್ರಾಂತ್ಯದಲ್ಲಿಯೇ ಸಿನಿಮಾದ ಪ್ರಚಾರ ಹೆಚ್ಚು ಮಾಡಿದ್ದರು. ಅದರ ಫಲ ಈಗ ಬಾಕ್ಸ್ ಆಫೀಸ್ನಲ್ಲಿ ಕಾಣುತ್ತಿದೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾ ವಿಶ್ವದಾದ್ಯಂತ ಬಾಕ್ಸ್ ಆಫೀಸ್ನಲ್ಲಿ 700 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಈಗ ಮತ್ತೊಂದು ವೀಕೆಂಡ್ ಮುಂದಿದ್ದು, ದೀಪಾವಳಿ ರಜೆ ಸಹ ಇರುವ ಕಾರಣ ಸಿನಿಮಾದ ಕಲೆಕ್ಷನ್ ಮತ್ತೆ ಹೆಚ್ಚಾಗುವ ಸಕಲ ಸಾಧ್ಯತೆಗಳೂ ಸಹ ಇವೆ. ಸಿನಿಮಾದ ಒಟ್ಟಾರೆ ಗಳಿಕೆ 1000 ಕೋಟಿ ದಾಟುವ ನಿರೀಕ್ಷೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ