ಶೀರ್ಷಿಕೆ ವಿವಾದ: ಕೊನೆಗೂ ಭಂಡಾರ್ಕರ್ ಕ್ಷಮೆಯಾಚಿಸಿದ ಕರಣ್ ಜೋಹರ್
ಪ್ರಸಿದ್ಧ ನಿರ್ದೇಶಕ ಮಧುರ್ ಭಂಡಾರ್ಕರ್ ಅವರ ಶೀರ್ಷಿಕೆಯೊಂದನ್ನು ತಿರುಚಿ ಉಪಯೋಗಿಸಿದ ಆರೋಪ ಎದುರಿಸುತ್ತಿದ್ದ ಧರ್ಮಾ ಪ್ರೊಡಕ್ಷನ್ಸ್ ಸಂಸ್ಥೆಯ ಮಾಲೀಕ ಕರಣ್ ಜೋಹರ್ ಬಹಿರಂಗ ಪತ್ರವೊಂದನ್ನು ಬರೆದು ‘ಚಾಂದನಿ ಬಾರ್’ ನಿರ್ದೇಶಕನ ಕ್ಷಮೆಯಾಚಿಸಿದ್ದಾರೆ.

ಪ್ರಸಿದ್ಧ ಮತ್ತು ವಿವಾದಾತ್ಮಕ ನಿರ್ದೇಶಕ ಮಧುರ್ ಭಂಡಾರ್ಕರ್ ಒಡೆತನದಲ್ಲಿದ್ದ ಶೀರ್ಷಿಕೆಯೊಂದನ್ನು ಕದ್ದು ತನ್ನ ಒಂದು ವೆಬ್ ಶೋವೊಂದಕ್ಕೆ ಬಳಸಿಕೊಂಡಿದ್ದ ಆರೋಪ ಎದುರಿಸುತ್ತಿದ್ದ ಬಾಲಿವುಡ್ ಪಸಿದ್ಧ ನಿರ್ಮಾಪಕ, ನಿರ್ದೇಶಕ ಮತ್ತು ಧರ್ಮಾ ಪ್ರೊಡಕ್ಷನ್ಸ್ ಸಂಸ್ಥೆಯ ಒಡೆಯ ಕರಣ್ ಜೋಹರ್ ಕೊನೆಗೂ ಕ್ಷಮೆಯಾಚಿಸಿದ್ದಾರೆ.
ಬಾಲಿವುಡ್ ಮೂಲಗಳ ಪ್ರಕಾರ ಕರಣ್ ತಮ್ಮ ‘ದಿ ಫ್ಯಾಬುಲಸ್ ಲೈವ್ಸ್ ಆಫ್ ಬಾಲಿವುಡ್ ವೈವ್ಸ್’ ರಿಯಾಲಿಟಿ ವೆಬ್ ಶೋಗೆ ಭಂಡಾರ್ಕರ್ ಅವರ ಶೀರ್ಷಿಕೆಯನ್ನು ತಿರುಚಿ ಬಳಸಿಕೊಂಡಿದ್ದರಂತೆ. ಸದರಿ ಶೋ ಶುಕ್ರರವಾರದಿಂದ ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗಲಿದೆ.
ಭಂಡಾರ್ಕರ್ ಅವರಿಗೆ ಒಂದು ಬಹಿರಂಗ ಪತ್ರ ಬರೆದಿರುವ ಕರಣ್ ಅದನ್ನು ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಂಡಿದ್ದಾರೆ. ಪತ್ರದ ಸಾರಾಂಶ ಹೀಗಿದೆ:
‘‘ಪ್ರೀತಿಯ ಮಧುರ್, ಒಂದು ಅನೋನ್ಯ ಕುಟುಂಬದಂತಿರುವ ಈ ಬಾಲಿವುಡ್ ಸಿನಿಮಾ ಉದ್ಯಮದಲ್ಲಿ ನಾವು ಹಲವಾರು ವರ್ಷಗಳಿಂದ ಜೊತೆಯಾಗಿ ಕೆಲಸ ಮಾಡುತ್ತಿದ್ದೇವೆ. ಈ ಎಲ್ಲ ವರ್ಷಗಳಲ್ಲಿ ನಾನು ನಿಮ್ಮ ಕೆಲಸದ ಬಗ್ಗೆ ಅತೀವ ಅಭಿಮಾನವಿಟ್ಟಕೊಂಡಿದ್ದೇನೆ ಮತ್ತು ಅದನ್ನು ಗೌರವಿಸುತ್ತೇನೆ. ನಾನು ಯಾವಾಗಲೂ ನಿಮ್ಮ ಶುಭವನ್ನೇ ಬಯಸಿದ್ದೇನೆ ಮತ್ತು ಹಾರೈಸಿದ್ದೇನೆ.’’
‘‘ನಮ್ಮ ಬಗ್ಗೆ ನೀವು ಅಸಮಾಧಾನ ತಳೆದಿರುವ ವಿಷಯ ನನಗೆ ಗೊತ್ತಿದೆ. ಕಳೆದ ಕೆಲವು ವಾರಗಳಲ್ಲಿ ನೀವು ಅನುಭವಿಸಿರುವ ಮಾನಸಿಕ ಕ್ಷೋಭೆ ಮತ್ತು ಯಾತನೆಗಾಗಿ ವಿನಯಪೂರ್ವಕವಾಗಿ ಕ್ಷಮೆ ಯಾಚಿಸುತ್ತೇನೆ. ಆದರೆ ಇದೇ ಸಂದರ್ಭದಲ್ಲಿ ಒಂದು ಮಾತನ್ನು ನಾನು ನಿಮಗೆ ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ಅದೇನೆಂದರೆ, ‘ದಿ ಫ್ಯಾಬುಲಸ್ ಲೈವ್ಸ್ ಆಫ್ ಬಾಲಿವುಡ್ ವೈವ್ಸ್’ ನಾವು ಹೊಸದಾಗಿ ಆಯ್ಕೆ ಮಾಡಿಕೊಂಡಿರುವ ಶೀರ್ಷಿಕೆಯಾಗಿದೆ. ನಮ್ಮ ಶೀರ್ಷಿಕೆಯು ಬೇರೆಯಾಗಿರಿವುದರಿಂದ ನಿಮಗೆ ನಮ್ಮ ಬಗ್ಗೆಯಿದ್ದ ಅಸಾಮಾಧಾನ ದೂರವಾಗಿದೆಯೆಂದು ಭಾವಿಸುತ್ತಾ ನೀವು ಅನುಭವಿಸಿರುವ ನೋವಿಗೆ ಮತ್ತೊಮ್ಮೆ ಕ್ಷಮೆ ಕೇಳುತ್ತೇನೆ.’’
‘‘ಮುಂದಿನ ದಿನಗಳಲ್ಲಿ ನಾವು ವಿಷಯವನ್ನು ಬದಿಗಿಟ್ಟು, ನಮ್ಮ ಪ್ರೇಕ್ಷಕರಿಗೆ, ವೀಕ್ಷಕರಿಗೆ ಅತ್ಯುತ್ತಮವಾದ ಕತೆಗಳನ್ನು ನೀಡಲು ಪ್ರಯತ್ನಿಸೋಣ, ನಿಮಗೆ ಮತ್ತು ನಿಮ್ಮ ಎಲ್ಲ ಪ್ರಾಜೆಕ್ಟ್ಗಳಿಗೆ ಶುಭ ಹಾರೈಸುತ್ತಾ ಪತ್ರವನ್ನು ಮುಗಿಸುತ್ತೇನೆ’’ ಎಂದು ಕರಣ್ ಬರೆದಿದ್ದಾರೆ.




