
ಕಪೂರ್ (Kapoor) ಕುಟುಂಬ ಭಾರತದ ಅತಿದೊಡ್ಡ ಸಿನಿಮಾ ಕುಟುಂಬ. ಈ ಕುಟುಂಬದ ಐದನೇ ತಲೆಮಾರಿನವರು ಚಿತ್ರರಂಗ ಪ್ರವೇಶಿಸಲು ಸಜ್ಜಾಗಿದ್ದಾರೆ. ನಾಲ್ಕನೇ ತಲೆಮಾರಿನ ರಣ್ಬೀರ್ ಕಪೂರ್, ಕರೀನಾ ಕಪೂರ್ ಇನ್ನೂ ಕೆಲವರು ಸ್ಟಾರ್ ನಟ-ನಟಿಯರಾಗಿ ಬಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ. ಈ ಕುಟುಂಬ ಭಾರತೀಯ ಚಿತ್ರರಂಗಕ್ಕೆ ಹಲವಾರು ಸ್ಟಾರ್ ನಟ, ನಟಿಯರನ್ನು ನೀಡಿದೆ. ಅದರಲ್ಲಿ ಕರಿಶ್ಮಾ ಕಪೂರ್ ಸಹ ಒಬ್ಬರು. 90-2000 ದಶಕದಲ್ಲಿ ಬಾಲಿವುಡ್ ಅನ್ನೇ ಆಳಿದ ನಟಿ ಅವರು. ಆದರೆ ಈಗ ಅವರಿಗೆ ಮಗಳ ಶಾಲೆಯ ಶುಲ್ಕ ಕಟ್ಟಲು ಸಹ ಹಣವಿಲ್ಲವಂತೆ.
ಕಪೂರ್ ಕುಟುಂಬ ಭಾರತೀಯ ಚಿತ್ರರಂಗದ ಶ್ರೀಮಂತ ಕುಟುಂಬಗಳಲ್ಲಿ ಒಂದು. ಆದರೆ ಅದೇ ಕುಟುಂಬದ ಕರಿಶ್ಮಾ ಕಪೂರ್ ಅವರು ‘ನಾನು ಮಗಳ ಶಾಲೆಯ ಶುಲ್ಕವನ್ನು ಎರಡು ತಿಂಗಳಿಂದಲೂ ಕಟ್ಟಲು ಆಗಿಲ್ಲ ನನ್ನ ಬಳಿ ಹಣವಿಲ್ಲ’ ಎಂದಿದ್ದಾರೆ. ಕರಿಶ್ಮಾ ಅವರ ಈ ಹೇಳಿಕೆ ಕಪೂರ್ ಕುಟುಂಬದ ಅಭಿಮಾನಿಗಳಿಗೆ ಆಶ್ಚರ್ಯ ತಂದಿದೆ.
ಕರಿಶ್ಮಾ ಕಪೂರ್, ಉದ್ಯಮಿ ಸಂಜಯ್ ಕಪೂರ್ ಅವರನ್ನು ಮದುವೆ ಆಗಿದ್ದು ದಂಪತಿಗೆ ಒಬ್ಬ ಮಗ ಹಾಗೂ ಮಗಳು ಇದ್ದಾರೆ. ಈ ಜೋಡಿ 2016 ರಲ್ಲಿ ವಿಚ್ಛೇದನ ಪಡೆದು ದೂರಾದರು. ಸಂಜಯ್ ಕಪೂರ್ ಕೆಟ್ಟ ಮನುಷ್ಯ, ಸಾಕಷ್ಟು ವಿಕೃತಿಗಳನ್ನು ನನ್ನ ಮೇಲೆ ತೋರಿದ್ದಾರೆ ಎಂದೆಲ್ಲ ಕರಿಶ್ಮಾ ಕಪೂರ್ ಆರೋಪಿಸಿದ್ದರು. ಸಂಜಯ್ ಕಪೂರ್ 2025ರಲ್ಲಿ ಆಕಸ್ಮಿಕವಾಗಿ ನಿಧನ ಹೊಂದಿದರು.
ಇದನ್ನೂ ಓದಿ:252 ಕೋಟಿ ರೂ. ಡ್ರಗ್ ಕೇಸ್ನಲ್ಲಿ ಶ್ರದ್ಧಾ ಕಪೂರ್ ಹೆಸರು; ಇದೆ ದಾವೂದ್ ಲಿಂಕ್
ಆದರೆ ಈಗ ಸಂಜಯ್ ಅವರ ಮೂರನೇ ಪತ್ನಿ ಪ್ರಿಯಾ ಸಚ್ದೇವ್ ಮತ್ತು ಕರಿಶ್ಮಾ ಕಪೂರ್ ನಡುವೆ ಆಸ್ತಿಗಾಗಿ ವಿವಾದ ಚಾಲ್ತಿಯಲ್ಲಿದ್ದು, ಅಲ್ಲದೆ, ವಿಚ್ಛೇದನದ ಬಳಿಕ ನೀಡಲಾಗುವ ಜೀವನಾಂಶದ ಬಗ್ಗೆಯೂ ಪ್ರಕರಣ ನ್ಯಾಯಾಲಯದಲ್ಲಿದೆ. ದೆಹಲಿ ಹೈಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಕರಿಶ್ಮಾ ಕಪೂರ್ ಅವರು ಪ್ರಕರಣದ ಶೀಘ್ರ ಇತ್ಯರ್ಥಕ್ಕೆ ಆಗ್ರಹಿಸಿ, ಅಮೆರಿಕದಲ್ಲಿ ಓದುತ್ತಿರುವ ಮಗಳ ಶುಲ್ಕವನ್ನು ಎರಡು ತಿಂಗಳಿನಿಂದಲೂ ಪಾವತಿಸಿಲ್ಲ ಎಂದಿದ್ದಾರೆ. ಇದು ನ್ಯಾಯಮೂರ್ತಿಗಳಿಗೆ ಸಿಟ್ಟು ತರಿಸಿದ್ದು, ಈ ರೀತಿಯ ‘ಮೆಲೊಡ್ರಾಮಾ’ಗೆ ನ್ಯಾಯಾಲಯದಲ್ಲಿ ಅವಕಾಶ ಇಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಅಲ್ಲದೆ ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 19ಕ್ಕೆ ಮುಂದೂಡಿದ್ದಾರೆ.
ಸಂಜಯ್ ಕಪೂರ್, ಮರಣಾನಂತರ ಅವರ ಸಂಪೂರ್ಣ ಆಸ್ತಿಯ ಹಕ್ಕುದಾರರಾಗಿದ್ದಾ ಪ್ರಿಯಾ ಸಚ್ದೇವ್. ಆದರೆ ಸಂಜಯ್ ಅವರ ವಿಲ್ ಅನ್ನು ಪ್ರಿಯಾ ತಿದ್ದುಪಡಿ ಮಾಡಿದ್ದಾರೆ ಎಂದು ಕರಿಶ್ಮಾ ಸೇರಿದಂತೆ ಇನ್ನೂ ಕೆಲವರು ಆರೋಪ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ