ಸಂಭಾವನೆ ಜೊತೆಗೆ ಏರುತ್ತಲೇ ಸಾಗುತ್ತಿದೆ ಕಾರ್ತಿಕ್ ಆರ್ಯನ್ ರಿಯಲ್ ಎಸ್ಟೇಟ್ ಹೂಡಿಕೆ

|

Updated on: Dec 31, 2024 | 3:39 PM

Karthik Aryan: ಕಾರ್ತಿಕ್ ಆರ್ಯನ್ ಬಾಲಿವುಡ್​ನ ಬಲು ಬೇಡಿಕೆಯ ಯುವನಟ ಸತತ ಹಿಟ್ ಸಿನಿಮಾಗಳನ್ನು ನೀಡಿರುವ ಕಾರ್ತಿಕ್ ಆರ್ಯನ್ ತಮ್ಮ ಸಂಭಾವನೆ ಹೆಚ್ಚು ಮಾಡಿಕೊಂಡಿದ್ದಾರೆ. ಅದರ ಬೆನ್ನಲ್ಲೆ ಇದೀಗ ಕಾರ್ತಿಕ್ ಆರ್ಯನ್ ರಿಯಲ್ ಎಸ್ಟೇಟ್ ಹೂಡಿಕೆಯನ್ನೂ ಹೆಚ್ಚು ಮಾಡಿದ್ದಾರೆ. ಕಾರ್ತಿಕ್ ಆರ್ಯನ್ ಈಗ ಪಡೆಯುತ್ತಿರುವ ಸಂಭಾವನೆ ಎಷ್ಟು? ಇಲ್ಲಿದೆ ಮಾಹಿತಿ.

ಸಂಭಾವನೆ ಜೊತೆಗೆ ಏರುತ್ತಲೇ ಸಾಗುತ್ತಿದೆ ಕಾರ್ತಿಕ್ ಆರ್ಯನ್ ರಿಯಲ್ ಎಸ್ಟೇಟ್ ಹೂಡಿಕೆ
Karthik Aryan
Follow us on

ಬಾಲಿವುಡ್​ ನಟರೆಂದರೆ ಅದು ಶಾರುಖ್, ಸಲ್ಮಾನ್, ಆಮಿರ್, ಅಕ್ಷಯ್ ಕುಮಾರ್, ಹೃತಿಕ್ ರೋಷನ್, ರಣ್ಬೀರ್ ಕಪೂರ್ ಮತ್ತು ರಣ್ವೀರ್ ಕಪೂರ್ ಮಾತ್ರ ಎಂಬ ಮಾತಿತ್ತು. ಆದರೆ ಕಾರ್ತಿಕ್ ಆರ್ಯನ್ ನಿಧಾನಕ್ಕೆ ಈ ಸ್ಟಾರ್ ನಟರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುವ ಹಾದಿಯಲ್ಲಿದ್ದಾರೆ. ತಮಗೆ ಒಂದು ಪ್ರತ್ಯೇಕ ಅಭಿಮಾನಿ ವರ್ಗ ಸೃಷ್ಟಿಸಿಕೊಳ್ಳುತ್ತಿರುವ ಕಾರ್ತಿಕ್ ಆರ್ಯನ್, ‘ಬಾಲಿವುಡ್ ಬರಗಾಲ’ದಲ್ಲಿಯೂ ಹಿಟ್ ಮೇಲೆ ಹಿಟ್ ನೀಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಸಂಭಾವನೆಯನ್ನೂ ಏರಿಸಿಕೊಂಡೇ ಸಾಗುತ್ತಿದ್ದಾರೆ. ರಿಯಲ್ ಎಸ್ಟೇಟ್ ಹೂಡಿಕೆಯನ್ನು ದುಪ್ಪಟ್ಟುಗೊಳಿಸಿದ್ದಾರೆ.

ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವ ಕಾರ್ತಿಕ್ ಆರ್ಯನ್, ಹೂಡಿಕೆ ಮೇಲೆ ಬಹಳ ವಿಶ್ವಾಸವನ್ನು ಹೊಂದಿದ್ದು, ಪ್ರತಿ ಸಿನಿಮಾದ ಬಳಿಕ ಸಂಭಾವನೆಯ ದೊಡ್ಡ ಮೊತ್ತವನ್ನು ರಿಯಲ್ ಎಸ್ಟೇಟ್ ಅಥವಾ ಇನ್ಯಾವುದಾದರೂ ಮೂಲದ ಮೇಲೆ ಹೂಡಿಕೆ ಮಾಡುವ ಅಭ್ಯಾಸ ಇಟ್ಟುಕೊಂಡಿದ್ದಾರಂತೆ. ಇತ್ತೀಚೆಗಿನ ವರ್ಷಗಳಲ್ಲಿ ಕಾರ್ತಿಕ್ ಆರ್ಯನ್ ಸಂಭಾವನೆ ಹೆಚ್ಚಾಗಿದ್ದು, ಅದಕ್ಕೆ ತಕ್ಕಂತೆ ತಮ್ಮ ಹೂಡಿಕೆ, ವಿಶೇಷವಾಗಿ ರಿಯಲ್ ಎಸ್ಟೇಟ್ ಹೂಡಿಕೆಯನ್ನು ಹೆಚ್ಚು ಮಾಡಿದ್ದಾರೆ ಕಾರ್ತಿಕ್ ಆರ್ಯನ್.

ಕಾರ್ತಿಕ್ ಆರ್ಯನ್ ಮುಂಬೈನಲ್ಲಿ ಎರಡು ಹೊಸ ಪ್ರಾಪರ್ಟಿ ಖರೀದಿ ಮಾಡಿದ್ದಾರೆ. ಕೆಲ ತಿಂಗಳ ಹಿಂದೆ ಸಹ ಕಾರ್ತಿಕ್ ಆರ್ಯನ್ ಮುಂಬೈನಲ್ಲಿ ಕೆಲವು ಆಫೀಸ್ ಪ್ರಾಪರ್ಟಿ ಖರೀದಿ ಮಾಡಿ ಬಾಡಿಗೆಗೆ ನೀಡಿದ್ದರು. ಈಗ ಮತ್ತೆ ಎರಡು ಪ್ರಾಪರ್ಟಿ ಖರೀದಿ ಮಾಡಿದ್ದಾರೆ. ಈ ಬಾರಿ ಮುಂಬೈನ ಪ್ರಮುಖ ಏರಿಯಾ ಆಗಿರುವ ಅಂಧೇರಿಯಲ್ಲಿ ಎರಡು ಪ್ರಾಪರ್ಟಿ ಖರೀದಿ ಮಾಡಿದ್ದು, ಒಂದು ರೆಸಿಡೆನ್ಸಿಯನ್ ಪ್ರಾಪರ್ಟಿ ಆಗಿದ್ದರೆ ಮತ್ತೊಂದು ಕಮರ್ಷಿಯಲ್ ಪ್ರಾಪರ್ಟಿ ಖರೀದಿ ಮಾಡಿದ್ದಾರೆ ಕಾರ್ತಿಕ್ ಆರ್ಯನ್. ಇದೀಗ ಖರೀದಿ ಮಾಡಿರುವ ಎರಡು ಪ್ರಾಪರ್ಟಿಗಳಿಗೆ ಸೇರಿ ಕಾರ್ತಿಕ್ ಆರ್ಯನ್ ಬರೋಬ್ಬರಿ 42 ಕೋಟಿ ರೂಪಾಯಿ ವ್ಯಯಿಸಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:‘ಕಾರ್ತಿಕ್ ಆರ್ಯನ್​ಗೂ ಇದೇ ಗತಿ ಬರುತ್ತದೆ’; ಸುಶಾಂತ್ ಸಾವಿನ ಬಳಿಕ ಮೂಡಿತ್ತು ಆತಂಕ

ಕೆಲ ತಿಂಗಳ ಹಿಂದೆ ಇದೇ ಕಾರ್ತಿಕ್ ಆರ್ಯನ್ ಅವರು ಮುಂಬೈನ ಜುಹು ಏರಿಯಾನಲ್ಲಿ ಎರಡು ದೊಡ್ಡ ಪ್ರಾಪರ್ಟಿ ಖರೀದಿ ಮಾಡಿದ್ದರು. ಎರಡಕ್ಕೆ ತಲಾ 17 ಕೋಟಿಗೂ ಹೆಚ್ಚು ಹಣ ನೀಡಿದ್ದರು. ಆ ಎರಡೂ ಪ್ರಾಪರ್ಟಿಗಳನ್ನು ಬಾಡಿಗೆಗೆ ನೀಡಿದ್ದಾರೆ ಕಾರ್ತಿಕ್ ಆರ್ಯನ್, ನೊಂದಾವಣೆ ದಾಖಲೆಗಳ ಪ್ರಕಾರ ಜುಹುವಿನ ಒಂದು ಪ್ರಾಪರ್ಟಿಯಿಂದ ತಿಂಗಳಿಗೆ 4.50 ಲಕ್ಷ ರೂಪಾಯಿ ಬಾಡಿಗೆ ಕಾರ್ತಿಕ್​ಗೆ ಬರುತ್ತಿದೆ. ಮತ್ತೊಂದು ಪ್ರಾಪರ್ಟಿಯಿಂದಲೇ ಬಹುತೇಕ ಇಷ್ಟೇ ಮೊತ್ತದ ಬಾಡಿಗೆ ಸಿಗುತ್ತಿದೆ. ಇವುಗಳ ಜೊತೆಗೆ ಕಾರ್ತಿಕ್ ಆರ್ಯನ್ ಸ್ವಂತ ಮನೆ ಸಹ ಖರೀದಿ ಮಾಡಿದ್ದು, ಇದಕ್ಕಾಗಿ ಸುಮಾರು 45 ಕೋಟಿ ರೂಪಾಯಿ ಹಣ ವ್ಯಯಿಸಿದ್ದಾರೆ.

ಕಾರ್ತಿಕ್ ಆರ್ಯನ್ ನಟನೆಯ ‘ಭೂಲ್ ಭುಲಯ್ಯ 3’ ಸಿನಿಮಾ ತಿಂಗಳ ಹಿಂದಷ್ಟೆ ಬಿಡುಗಡೆ ಆಗಿದ್ದು, ಭರ್ಜರಿ ಹಿಟ್ ಎನಿಸಿಕೊಂಡಿದೆ. ‘ಭೂಲ್ ಭುಲಯ್ಯ 3’ ಸಿನಿಮಾ ಹಿಟ್ ಆದ ಬೆನ್ನಲ್ಲೆ ಕಾರ್ತಿಕ್ ಆರ್ಯನ್ ಸಂಭಾವನೆ ಹೆಚ್ಚಿಸಿಕೊಂಡಿದ್ದು, ಈಗ ಕಾರ್ತಿಕ್ ಆರ್ಯನ್ ಸಂಭಾವನೆ ಬರೋಬ್ಬರಿ 50 ಕೋಟಿ ರೂಪಾಯಿಗಳಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:37 pm, Tue, 31 December 24