ನಟ ಆಮಿರ್ ಖಾನ್ (Aamir Khan) ಅವರು ಬಾಲಿವುಡ್ನಲ್ಲಿ ಸ್ಟಾರ್ ಹೀರೋ ಆಗಿ ಮಿಂಚಿದ್ದಾರೆ. ಅವರ ಅಭಿಮಾನಿ ಬಳಗ ದೊಡ್ಡದು. ಹಲವು ಬಗೆಯ ಪಾತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ಈಗ ಅವರು ಒಂದು ಪೋಷಕ ಪಾತ್ರಕ್ಕೆ ಆಡಿಷನ್ ನೀಡುತ್ತಾರೆ ಎಂದರೆ ಎಂಥವರಿಗಾದರೂ ಅಚ್ಚರಿ ಆಗುತ್ತದೆ. ಈ ಮಾಹಿತಿಯನ್ನು ಆಮಿರ್ ಖಾನ್ ಅವರ ಮಾಜಿ ಪತ್ನಿ ಕಿರಣ್ ರಾವ್ (Kiran Rao) ಬಹಿರಂಗಪಡಿಸಿದ್ದಾರೆ. ‘ಲಾಪತಾ ಲೇಡೀಸ್’ (Laapataa Ladies) ಸಿನಿಮಾದಲ್ಲಿನ ಒಂದು ಪಾತ್ರಕ್ಕೆ ಆಮಿರ್ ಖಾನ್ ಅವರು ಆಡಿಷನ್ ನೀಡಿದ್ದರು. ಆದರೆ ಅವರನ್ನು ಆಯ್ಕೆ ಮಾಡಿಕೊಳ್ಳಲಿಲ್ಲ. ಆಮಿರ್ ಖಾನ್ಗೆ ಸಿಗದ ಆ ಪಾತ್ರವು ಕಡೆಗೆ ರವಿ ಕಿಶನ್ ಅವರ ಪಾಲಾಯಿತು. ಈ ಸಿನಿಮಾ ಮಾರ್ಚ್ 1ರಂದು ಬಿಡುಗಡೆ ಆಗಲಿದೆ.
ಆಮಿರ್ ಖಾನ್ ಅವರೇ ‘ಲಾಪತಾ ಲೇಡೀಸ್’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಅವರ ಮಾಜಿ ಪತ್ನಿ ಕಿರಣ್ ರಾವ್ ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಣದಲ್ಲೂ ಪಾಲುದಾರಿಕೆ ಹೊಂದಿದ್ದಾರೆ. ಮಧುಮಗಳು ಕಾಣೆಯಾಗುವ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ಬರುವ ಪೊಲೀಸ್ ಪಾತ್ರವನ್ನು ಆಮಿರ್ ಖಾನ್ ಮಾಡಬೇಕು ಎಂದು ಬಯಸಿದ್ದರು. ಹಾಗಂತ ಅದು ಮುಖ್ಯ ಪಾತ್ರವಲ್ಲ. ಆದರೂ ಅವರು ಆ ಪಾತ್ರಕ್ಕೆ ಆಡಿಷನ್ ನೀಡಿದ್ದರು. ಒಂದು ವೇಳೆ ಅವರು ನಟಿಸಿದ್ದರೆ ಆ ಒಂದೇ ಪಾತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚುತ್ತಿತ್ತು. ಆ ರೀತಿ ಆಗಬಾರದು ಎಂಬ ಕಾರಣಕ್ಕೆ ಕಿರಣ್ ರಾವ್ ಅವರು ಆ ಪಾತ್ರವನ್ನು ರವಿ ಕಿಶನ್ಗೆ ನೀಡಿದರು.
ಇದನ್ನೂ ಓದಿ: ‘ನಾನು ನಿಮ್ಮ ಸಿನಿಮಾಗಳನ್ನು ನೋಡಿಯೇ ಇಲ್ಲ’; ‘ಅನಿಮಲ್’ ನಿರ್ದೇಶಕನ ಟೀಕೆಗೆ ಆಮಿರ್ ಪತ್ನಿಯ ಉತ್ತರ
ಕಳೆದ ವರ್ಷ ನಡೆದ ಟೊರಾಂಟೋ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ‘ಲಾಪತಾ ಲೇಡೀಸ್’ ಸಿನಿಮಾ ಪ್ರದರ್ಶನ ಕಂಡಿತ್ತು. ಅಲ್ಲಿ ಈ ಚಿತ್ರಕ್ಕೆ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿತ್ತು. ಕಾಮಿಡಿ ಶೈಲಿಯಲ್ಲಿ ಈ ಚಿತ್ರ ಮೂಡಿಬಂದಿದೆ. ಚಿತ್ರಮಂದಿರದಲ್ಲಿ ಈ ಸಿನಿಮಾಗೆ ಯಾವ ರೀತಿ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಅನೇಕ ಪ್ರತಿಭಾವಂತ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಕಿರಣ್ ರಾವ್ ಮತ್ತು ಆಮಿರ್ ಖಾನ್ ಅವರು 2021ರಲ್ಲಿ ವಿಚ್ಛೇದನ ಪಡೆದರು. ಆದರೂ ಕೂಡ ಅವರು ಪರಸ್ಪರ ಮುನಿಸಿಕೊಂಡಿಲ್ಲ. ಇಬ್ಬರೂ ಒಟ್ಟಾಗಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಇಬ್ಬರ ನಡುವೆ ಉತ್ತಮ ಹೊಂದಾಣಿಕೆ ಇದೆ. ಇತ್ತೀಚೆಗೆ ಆಮಿರ್ ಖಾನ್ ಮೊದಲ ಪತ್ನಿಯ ಮಗಳು ಇರಾ ಖಾನ್ ಮದುವೆ ನೆರವೇರಿತ್ತು. ಅದರಲ್ಲಿ ಕಿರಣ್ ರಾವ್ ಕೂಡ ಭಾಗಿ ಆಗಿದ್ದರು.
ಇದನ್ನೂ ಓದಿ: ವಿಚ್ಛೇದನದ ಬಳಿಕವೂ ಪತ್ನಿ ಕಿರಣ್ ಜೊತೆ ಕೆಲಸ ಮಾಡೋದೇಕೆ? ಆಮಿರ್ ಖಾನ್ ಕೊಟ್ಟರು ಉತ್ತರ
ಆಮಿರ್ ಖಾನ್ ಅವರು ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಬಾಲಿವುಡ್ನಲ್ಲಿ ಹೆಸರು ಮಾಡಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರು ಮಾಡಿದ ಸಿನಿಮಾಗಳು ನಿರೀಕ್ಷಿತ ಪ್ರಮಾಣದಲ್ಲಿ ಫಲ ನೀಡುತ್ತಿಲ್ಲ. ‘ಥಗ್ಸ್ ಆಫ್ ಹಿಂದುಸ್ತಾನ್’, ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾಗಳು ಗೆಲುವ ಕಂಡಿಲ್ಲ. ಮುಂಬರುವ ಸಿನಿಮಾಗಳಲ್ಲಿ ಅವರು ಎಚ್ಚರಿಕೆಯಿಂದ ಸ್ಕ್ರಿಪ್ಟ್ ಆಯ್ಕೆ ಮಾಡಿಕೊಳ್ಳಬೇಕಿದೆ. ಇತ್ತೀಚೆಗೆ ಅವರು ಹೊಸ ಸಿನಿಮಾ ಒಪ್ಪಿಕೊಳ್ಳುವಲ್ಲಿ ಅವಸರ ತೋರಿಸಿಲ್ಲ. ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಸೋಲಿನ ಬಳಿಕ ಫ್ಯಾಮಿಲಿ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:22 pm, Wed, 7 February 24