‘ರಾಮಾಯಣ’ದಲ್ಲಿ ಸೀತೆ ಆ್ಯಕ್ಷನ್ ದೃಶ್ಯ ಮಾಡಿದ್ದನ್ನು ಸಮರ್ಥಿಸಿಕೊಂಡ ಲಾರಾ ದತ್ತ
‘ರಾಮಾಯಣ’ ಸಿನಿಮಾದಲ್ಲಿ ಸಾಯಿ ಪಲ್ಲವಿ ನಿರ್ವಹಿಸಿರುವ ಯೋಧೆ ಸೀತೆಯ ಪಾತ್ರಕ್ಕೆ ವ್ಯಕ್ತವಾಗುತ್ತಿರುವ ಟೀಕೆಗಳಿಗೆ ನಟಿ ಲಾರಾ ದತ್ತಾ ತಿರುಗೇಟು ನೀಡಿದ್ದಾರೆ. ಸಂಕುಚಿತ ಮನೋಭಾವ ಬಿಟ್ಟು ಸಿನಿಮಾವನ್ನು ಸಿನಿಮಾದಂತೆ ನೋಡಿ ಎಂದು ಅವರು ಕಿವಿಮಾತು ಹೇಳಿದ್ದಾರೆ. ರಾಜಮನೆತನದ ಹೆಣ್ಣುಮಕ್ಕಳಿಗೆ ಅಂದು ಶಸ್ತ್ರಾಸ್ತ್ರ ವಿದ್ಯೆ ಕಲಿಸಲಾಗುತ್ತಿತ್ತು ಎಂದಿದ್ದಾರೆ.

ಮುಖ್ಯಾಂಶಗಳು
- ಯೋಧೆ ಸೀತೆಯ ಪಾತ್ರದ ವಿವಾದಕ್ಕೆ ನಟಿ ಲಾರಾ ದತ್ತಾ ಖಡಕ್ ಪ್ರತಿಕ್ರಿಯೆ
- ಸಿನಿಮೀಯ ಅನುಭವವನ್ನು ಆನಂದಿಸಿ ಎಂದ ಕೈಕೇಯಿ ಪಾತ್ರಧಾರಿ
- ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ
ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ‘ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದೆ. ಆದರೆ ಈ ಚಿತ್ರದಲ್ಲಿ ಸಾಯಿ ಪಲ್ಲವಿ ನಿರ್ವಹಿಸಿರುವ ಸೀತೆಯ ಪಾತ್ರದ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸೀತೆಯನ್ನು ಯೋಧೆಯಂತೆ ತೋರಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಟೀಕೆಗಳಿಗೆ ಚಿತ್ರದಲ್ಲಿ ಕೈಕೇಯಿ ಪಾತ್ರ ಮಾಡಿರುವ ನಟಿ ಲಾರಾ ದತ್ತಾ ಈಗ ಖಡಕ್ ಉತ್ತರ ನೀಡಿದ್ದಾರೆ.
ಎನ್‌ಡಿಟಿವಿ ಜೊತೆಗಿನ ಸಂದರ್ಶನದಲ್ಲಿ ಲಾರಾ ದತ್ತಾ ಈ ವಿವಾದದ ಬಗ್ಗೆ ಮಾತನಾಡಿದ್ದಾರೆ. ಪ್ರೇಕ್ಷಕರು ಸಿನಿಮಾವನ್ನು ಕೇವಲ ಸಿನಿಮೀಯ ಅನುಭವವಾಗಿ ನೋಡಬೇಕು ಎಂದು ಅವರು ಸಲಹೆ ನೀಡಿದ್ದಾರೆ. ರಾಮಾಯಣದಲ್ಲಿ ಹಲವಾರು ವಿಭಿನ್ನ ಆವೃತ್ತಿಗಳಿವೆ ಎಂಬುದನ್ನು ಅವರು ನೆನಪಿಸಿದ್ದಾರೆ. ಅಂದಿನ ಕಾಲದ ರಾಜಮನೆತನಗಳಲ್ಲಿ ಹುಟ್ಟಿದ ಹೆಣ್ಣುಮಕ್ಕಳಿಗೂ ಕಲೆ ಹಾಗೂ ಶಸ್ತ್ರಾಸ್ತ್ರ ವಿದ್ಯೆಗಳನ್ನು ಕಲಿಸಲಾಗುತ್ತಿತ್ತು ಎಂದು ಲಾರಾ ದತ್ತಾ ವಿವರಿಸಿದ್ದಾರೆ.
ಸೀತೆಯೂ ಕೂಡ ಯುದ್ಧಕಲೆಯಲ್ಲಿ ಪರಿಣತಿ ಹೊಂದಿದ್ದಳು ಎಂದು ಭಾವಿಸುವುದರಲ್ಲಿ ತಪ್ಪೇನಿಲ್ಲ ಎಂದು ಲಾರಾ ಹೇಳಿದ್ದಾರೆ. 14 ವರ್ಷಗಳ ಕಾಲ ವನವಾಸಕ್ಕೆ ತೆರಳುವ ನಿರ್ಧಾರ ಮಾಡಿದ ಸೀತೆ ಅತ್ಯಂತ ಗಟ್ಟಿಗಿತ್ತಿಯಾಗಿರಲೇಬೇಕು. ಅಂತಹ ಕಠಿಣ ಪರಿಸ್ಥಿತಿಯಲ್ಲಿ ತನ್ನ ರಕ್ಷಣೆಗಾಗಿ ಆಕೆ ಖಂಡಿತವಾಗಿಯೂ ಆಯುಧ ಕೈಗೆತ್ತಿಕೊಳ್ಳುತ್ತಾಳೆ. ಹೀಗಾಗಿ ಜನರು ಸಂಕುಚಿತ ಮನೋಭಾವ ಬಿಟ್ಟು ಸಿನಿಮಾವನ್ನು ಸ್ವೀಕರಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ರಾಮಾಯಣ’ ಚಿತ್ರದಲ್ಲಿ ಸೀತೆ ಶ್ರೀರಾಮನ ಜೊತೆಗೂಡಿ ರಾಕ್ಷಸರ ವಿರುದ್ಧ ಖಡ್ಗ ಹಿಡಿದು ಹೋರಾಡುವ ದೃಶ್ಯಗಳಿವೆ. ಅಲ್ಲದೆ ಮಕ್ಕಳು ಹಾಗೂ ಯುವಕರಿಗೆ ಯುದ್ಧ ತರಬೇತಿ ನೀಡುವಂತೆಯೂ ತೋರಿಸಲಾಗಿದೆ. ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗುವಂತೆ ಸಿನಿಮಾದಲ್ಲಿ ಸ್ವಾತಂತ್ರ್ಯ ತೆಗೆದುಕೊಳ್ಳಲಾಗಿದೆ ಎಂದು ಕೆಲವು ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದರು.
ಇದನ್ನೂ ಓದಿ: ‘ರಾಮಾಯಣಕ್ಕೆ ಬೆಲೆ ಕಟ್ಟಲಾಗದು, ನಾವು ಲಾಭ-ನಷ್ಟ ನೋಡಲ್ಲ’; ನಮಿತ್ ಮಲ್ಹೋತ್ರ
ಈ ವಿವಾದದ ಕುರಿತು ಚಿತ್ರತಂಡವು ಈಗಾಗಲೇ ಸ್ಪಷ್ಟನೆ ನೀಡಿದೆ. ‘ಅದ್ಭುತ ರಾಮಾಯಣ’ ಗ್ರಂಥದಿಂದ ಪ್ರೇರಣೆ ಪಡೆದು ಸೀತೆಯ ಈ ರೌದ್ರ ಹಾಗೂ ಯೋಧೆಯ ರೂಪವನ್ನು ಸೃಷ್ಟಿಸಲಾಗಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಅದ್ಭುತ ರಾಮಾಯಣದಲ್ಲಿ ಸೀತೆಯು ಕಾಳಿಯ ರೂಪ ತಾಳಿ ಸಹಸ್ರ ರಾವಣನನ್ನು ಸಂಹರಿಸಿದ ಉಲ್ಲೇಖವಿದೆ. ಆದರೆ ಬಹುತೇಕರು ವಾಲ್ಮೀಕಿ ರಾಮಾಯಣವನ್ನಷ್ಟೇ ನೋಡಿರುವುದರಿಂದ ಈ ಹೊಸ ಪ್ರಯತ್ನಕ್ಕೆ ವಿರೋಧ ವ್ಯಕ್ತವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




