ಅರ್ಜುನ್ ರೆಡ್ಡಿ ಖ್ಯಾತಿಯ ನಟ ವಿಜಯ್ ದೇವರಕೊಂಡ ಟಾಲಿವುಡ್ನ ಬೇಡಿಕೆಯ ನಟ. ಅವರು ‘ಲೈಗರ್’ ಸಿನಿಮಾ ಮೂಲಕ ಬಾಲಿವುಡ್ಗೂ ಕಾಲಿಡುತ್ತಿದ್ದಾರೆ. ಈ ಸಿನಿಮಾ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟು ಹಾಕಿದೆ. ಇತ್ತೀಚೆಗೆ ಚಿತ್ರತಂಡ ವಿಶ್ಚ ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್ ಅವರು ಎಂಟ್ರಿ ನೀಡುತ್ತಿದ್ದಾರೆ ಎನ್ನುವುದನ್ನು ಘೋಷಣೆ ಮಾಡಿತ್ತು. ಇದಾದ ನಂತರ ಸಿನಿಮಾ ಬಗ್ಗೆ ಇದ್ದ ನಿರೀಕ್ಷೆ ದುಪ್ಪಟ್ಟಾಗಿತ್ತು. ಈಗ ಚಿತ್ರತಂಡ ಇಕ್ಕಟ್ಟಿಗೆ ಸಿಲುಕಿದೆ. ಈ ಸಮಸ್ಯೆಯಿಂದ ಸಿನಿಮಾ ಶೂಟಿಂಗ್ ವಿಳಂಬವಾಗುವ ಸಾಧ್ಯತೆ ಇದೆ.
ಬಾಕ್ಸಿಂಗ್ ಜಗತ್ತಿನಲ್ಲಿ ಅಮೆರಿಕದ ಮೈಕ್ ಟೈಸನ್ ಅವರದ್ದು ದೊಡ್ಡ ಹೆಸರು. ಎದುರಾಳಿಗಳಿಗೆ ನಡುಕ ಹುಟ್ಟಿಸುವ ಅವರ ಬಾಕ್ಸಿಂಗ್ ಪರಾಕ್ರಮಕ್ಕೆ ಸರಿಸಾಟಿ ಆಗಬಲ್ಲ ಮತ್ತೊಬ್ಬ ವ್ಯಕ್ತಿಯೇ ಇಲ್ಲ. ಅಂಥ ದಿಗ್ಗಜನನ್ನು ‘ಲೈಗರ್’ ಸಿನಿಮಾ ತಂಡ ಭಾರತಕ್ಕೆ ಸ್ವಾಗತಿಸೋಕೆ ಆಹ್ವಾನ ನೀಡಿತ್ತು. ಆದರೆ, ಈ ವಿಚಾರದಲ್ಲಿ ಅವರು ಷರತ್ತೊಂದನ್ನು ಹಾಕಿದ್ದರು. ತಮ್ಮ ಭಾಗದ ಶೂಟ್ಅನ್ನು ಅಮೆರಿಕದಲ್ಲೇ ಮಾಡಬೇಕು ಎಂದು ಹೇಳಿದ್ದರು. ಇದಕ್ಕಾಗಿ ಚಿತ್ರತಂಡ ಅಮೆರಿಕಕ್ಕೆ ಪ್ರಯಾಣ ಬೆಳೆಸಬೇಕಿತ್ತು. ಆದರೆ, ಚಿತ್ರತಂಡಕ್ಕೆ ವೀಸಾ ಸಿಗುತ್ತಿಲ್ಲ.
ಭಾರತದಲ್ಲಿ ಕೊವಿಡ್ ಅಧಿಕವಾಗಿತ್ತು. ಹೀಗಾಗಿ, ಭಾರತದಿಂದ ಬರುವ ಪ್ರಯಾಣಿಕರಿಗೆ ಅಮೆರಿಕ ಬ್ರೇಕ್ ಹಾಕಿತ್ತು. ಈಗ ಕೊವಿಡ್ ಕಡಿಮೆ ಆದರೂ, ವಿದ್ಯಾರ್ಥಿಗಳು ಹಾಗೂ ಉದ್ಯಮಿಗಳು ಮತ್ತು ಅಮೆರಿಕದಲ್ಲಿ ಕೆಲಸದ ಉದ್ದೇಶ ಇಟ್ಟುಕೊಂಡು ಬರುವವರಿಗೆ ಮಾತ್ರ ವೀಸಾ ನೀಡಲಾಗುತ್ತಿದೆ. ಸಿನಿಮಾ ತಂಡದವರು ತೆರಳಿದರೆ ಗುಂಪಿನಲ್ಲಿ ಹೋಗಬೇಕು. ಇವರ ಸಂಖ್ಯೆ ಕೂಡ ಅಧಿಕವಾಗಿರುತ್ತದೆ. ಇಂಥವರಿಗೆ ವಿಸಾ ನೀಡಲು ಯುಎಸ್ಎ ಹಿಂದೇಟು ಹಾಕುತ್ತಿದೆ.
ಈ ಚಿತ್ರದಲ್ಲಿ ಮೈಕ್ ಟೈಸನ್ ಮಾಡುತ್ತಿರುವುದು ಒಂದು ಅತಿಥಿ ಪಾತ್ರ ಅಷ್ಟೇ. ಕ್ಲೈಮ್ಯಾಕ್ಸ್ಗಿಂತಲೂ ಮುನ್ನ ಬರುವ ದೃಶ್ಯದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅಷ್ಟಕ್ಕಾಗಿ ಅವರು ದುಬಾರಿ ಸಂಭಾವನೆಯನ್ನು ಜೇಬಿಗೆ ಇಳಿಸಿಕೊಳ್ಳಲಿದ್ದಾರೆ. ಅದು ವಿಜಯ್ ದೇವರಕೊಂಡ ಅವರ ಸಂಬಳಕ್ಕಿಂತಲೂ ದೊಡ್ಡ ಮೊತ್ತ ಎಂಬ ಸುದ್ದಿ ಇತ್ತೀಚೆಗೆ ಕೇಳಿ ಬಂದಿತ್ತು.
‘ಕಿಂಗ್ ಆಫ್ ದಿ ರಿಂಗ್ ಎನಿಸಿಕೊಂಡ ಮೈಕ್ ಟೈಸನ್ ಅವರು ಇದೇ ಮೊದಲ ಬಾರಿಗೆ ಭಾರತೀಯ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರಿಗೆ ನಮ್ಮ ಲೈಗರ್ ತಂಡದಿಂದ ಸ್ವಾಗತ’ ಎಂದು ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾದ ಕರಣ್ ಜೋಹರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ: ‘ಲೈಗರ್’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡುವ ಮೈಕ್ ಟೈಸನ್ಗೆ ಹೀರೋಗಿಂತಲೂ ಹೆಚ್ಚು ಸಂಬಳ