ನಟಿ ಶಿಲ್ಪಾ ಶೆಟ್ಟಿ ಕುಟುಂಬಕ್ಕೆ ಸಂಕಷ್ಟಗಳ ಸರಣಿ ಮುಂದುವರಿದಿದೆ. ಒಂದೆಡೆ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರು ಅಶ್ಲೀಲ ಸಿನಿಮಾ ದಂಧೆಯಲ್ಲಿ ಪ್ರಮುಖ ಆರೋಪಿಯಾಗಿ ಪೊಲೀಸರ ಅತಿಥಿ ಆಗಿದ್ದಾರೆ. ಇನ್ನೊಂದೆಡೆ ಶಿಲ್ಪಾ ಶೆಟ್ಟಿ ಹಾಗೂ ಅವರ ತಾಯಿ ಸುನಂದಾ ಶೆಟ್ಟಿ ಮೇಲೆ ಚೀಟಿಂಗ್ ಕೇಸ್ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ಶಿಲ್ಪಾಗೆ ನೋಟಿಸ್ ನೀಡಿದ್ದಾರೆ. ಇಬ್ಬರು ವ್ಯಕ್ತಿಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದಲ್ಲಿ ಶಿಲ್ಪಾ ಶೆಟ್ಟಿ ಮತ್ತು ಸುನಂದಾ ಶೆಟ್ಟಿ ಈಗ ವಿಚಾರಣೆ ಎದುರಿಸಬೇಕಾಗಿದೆ.
ನಟನೆ ಜೊತೆಗೆ ಶಿಲ್ಪಾ ಶೆಟ್ಟಿ ಅವರು ಫಿನ್ನೆಟ್ ಕೇಂದ್ರವನ್ನೂ ನಡೆಸುತ್ತಾರೆ. ಇವೋಸಿಸ್ ವೆಲ್ನೆಸ್ ಎಂಬ ಫಿಟ್ನೆಸ್ ಕೇಂದ್ರವನ್ನು ಅವರು ಹೊಂದಿದ್ದಾರೆ. ಅದಕ್ಕೆ ಶಿಲ್ಪಾ ಶೆಟ್ಟಿ ಮುಖ್ಯಸ್ಥೆಯಾಗಿದ್ದರೆ, ಅವರ ತಾಯಿ ಸುನಂದಾ ನಿರ್ದೇಶಕಿ ಆಗಿದ್ದಾರೆ. ಅದರ ಶಾಖೆಯನ್ನು ಬೇರೆ ಬೇರೆ ನಗರಗಳಲ್ಲಿ ಆರಂಭ ಮಾಡುವುದು ಅವರ ಪ್ಲ್ಯಾನ್. ಹೊಸ ಶಾಖೆ ಆರಂಭಿಸುವುದಾಗಿ ಭರವಸೆ ನೀಡಿ, ಇಬ್ಬರು ವ್ಯಕ್ತಿಗಳಿಂದ ಕೋಟ್ಯಂತರ ರೂಪಾಯಿ ಪಡೆದಿರುವ ಶಿಲ್ಪಾ ಮತ್ತು ಸುನಂದಾ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಸಂಬಂಧ ಜೋಸ್ನಾ ಚೌಹಾಣ್ ಮತ್ತು ರೋಹಿತ್ ವೀರ್ ಸಿಂಗ್ ಎಂಬುವವರು ದೂರು ದಾಖಲಿಸಿದ್ದರು. ಲಖನೌನ ಹಜರತ್ಗಂಜ್ ಮತ್ತು ವಿಭೂತಿ ಖಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಲು ಲಖನೌ ಪೊಲೀಸರು ಮುಂಬೈಗೆ ಆಗಮಿಸಿದ್ದಾರೆ ಎಂಬ ಮಾಹಿತಿ ಕೇಳಿಬಂದಿತ್ತು. ಈಗ ಲಖನೌ ಪೊಲೀಸರು ಶಿಲ್ಪಾಗೆ ನೋಟಿಸ್ ನೀಡಿದ್ದಾರೆ.
ಪತಿ ರಾಜ್ ಕುಂದ್ರಾ ನೀಲಿ ಚಿತ್ರಗಳ ಹಗರಣದಲ್ಲಿ ಸಿಕ್ಕಿ ಬಿದ್ದಿದ್ದರಿಂದ ಶಿಲ್ಪಾ ಶೆಟ್ಟಿಗೆ ಸಾರ್ವಜನಿಕವಾಗಿ ತೀವ್ರ ಮುಜುಗರ ಆಗಿದೆ. ಎಷ್ಟೋ ಪ್ರತಿಷ್ಠಿತ ಕಂಪನಿಗಳಿಗೆ ರಾಯಭಾರಿ ಆಗಿದ್ದ ಅವರು ಈಗ ನಷ್ಟ ಅನುಭವಿಸುವಂತಾಗಿದೆ. ಅದರ ಜೊತೆಗೆ ಇಂಥ ಚೀಟಿಂಗ್ ಕೇಸ್ ಆರೋಪ ಕೂಡ ಕೇಳಿಬಂದಿರುವುದು ಅವರ ವೃತ್ತಿಜೀವನಕ್ಕೆ ಮುಳುವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಚೀರಾಟ, ಹಾರಾಟ; ಇಂಥ ಪರಿಸ್ಥಿತಿಗೆ ಕಾರಣ ಏನು?
Published On - 2:23 pm, Fri, 13 August 21