
ಬಾಲಿವುಡ್‌ನ ‘ಧಕ್ ಧಕ್ ಗರ್ಲ್’ ಮಾಧುರಿ ದೀಕ್ಷಿತ್ ಅವರಿಗೆ (Madhuri Dixit) ಇಂದು (ಮೇ 15) 59ನೇ ಜನ್ಮದಿನದ ಸಂಭ್ರಮ. ದಶಕಗಳ ಕಾಲ ತಮ್ಮ ನಟನೆ ಮತ್ತು ನೃತ್ಯದ ಮೂಲಕ ಭಾರತೀಯ ಚಿತ್ರರಂಗವನ್ನು ಆಳಿದ ಮಾಧುರಿ, ಇಂದಿಗೂ ಸೌಂದರ್ಯ ಮತ್ತು ಪ್ರತಿಭೆಯ ವಿಷಯದಲ್ಲಿ ಹೊಸ ತಲೆಮಾರಿನ ನಟಿಯರಿಗೆ ಸ್ಫೂರ್ತಿಯಾಗಿದ್ದಾರೆ. ಮಾಧುರಿ ಅವರ ಜನ್ಮದಿನದ ಈ ಸಂದರ್ಭದಲ್ಲಿ ಅವರ ಹಳೆಯ ಸಂದರ್ಶನವೊಂದು ಸಖತ್ ಸುದ್ದಿಯಾಗುತ್ತಿದೆ. ಈ ಹಿಂದೆ ನೀಡಿದ್ದ ಸಂದರ್ಶನವೊಂದರಲ್ಲಿ ಮಾಧುರಿ ಅವರು ತಮಗೆ ಭಾರತೀಯ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಅವರ ಮೇಲೆ ಕ್ರಶ್ ಇತ್ತು ಎಂಬ ವಿಷಯವನ್ನು ಬಹಿರಂಗಪಡಿಸಿದ್ದರು.
ಮಾಧುರಿಗಿಂತ ಗವಾಸ್ಕರ್ ಸುಮಾರು 17 ವರ್ಷ ದೊಡ್ಡವರಾಗಿದ್ದರೂ, ಅವರ ಆಟ ಮತ್ತು ವ್ಯಕ್ತಿತ್ವಕ್ಕೆ ಮಾಧುರಿ ಫಿದಾ ಆಗಿದ್ದರು. ‘ನಾನು ಸುನಿಲ್ ಗವಾಸ್ಕರ್ ಅವರ ಮೇಲೆ ಕ್ರೇಜ್ -ಇದೆ. ಅವರು ತುಂಬಾ ಸುಂದರವಾಗಿದ್ದಾರೆ, ಅವರ ಹಿಂದೆ ಓಡಬೇಕು ಎನಿಸುತ್ತದೆ. ಅವರು ನನ್ನ ಕನಸಿನಲ್ಲೂ ಬರುತ್ತಾರೆ’ ಎಂದು ನಟಿ ಅಂದು ಮುಕ್ತವಾಗಿ ಹೇಳಿಕೊಂಡಿದ್ದರು.
90ರ ದಶಕದಲ್ಲಿ ಮಾಧುರಿ ದೀಕ್ಷಿತ್ ಅವರ ಕ್ರೇಜ್ ಎಷ್ಟಿತ್ತೆಂದರೆ, ಅವರು ಸಂಭಾವನೆ ವಿಷಯದಲ್ಲಿ ಸೂಪರ್‌ಸ್ಟಾರ್ ನಟರನ್ನೇ ಹಿಂದಿಕ್ಕಿದ್ದರು. ಇದಕ್ಕೆ ಅತ್ಯುತ್ತಮ ಉದಾಹರಣೆ ‘ಹಮ್ ಆಪ್ಕೆ ಹೈ ಕೌನ್’ ಸಿನಿಮಾ. 1994ರ ಈ ಬ್ಲಾಕ್‌ಬಸ್ಟರ್ ಚಿತ್ರಕ್ಕಾಗಿ ಮಾಧುರಿ ಬರೋಬ್ಬರಿ 2.7 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು. ವರದಿಗಳ ಪ್ರಕಾರ, ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಸಲ್ಮಾನ್ ಖಾನ್ ಅವರಿಗಿಂತಲೂ ಮಾಧುರಿ ಅವರೇ ಹೆಚ್ಚು ಹಣ ಪಡೆದಿದ್ದರು. ಆ ಕಾಲಕ್ಕೆ ಈ ಮೊತ್ತವು ಬಾಲಿವುಡ್‌ನಲ್ಲಿ ಅತಿ ದೊಡ್ಡ ದಾಖಲೆಯಾಗಿತ್ತು.
ಇದನ್ನೂ ಓದಿ: ಸೀರಿಯಲ್ ಕಿಲ್ಲರ್ ಆದ ಮಾಧುರಿ ದೀಕ್ಷಿತ್; ಹೊಸ ಅವತಾರದಲ್ಲಿ ಧಕ್ ಧಕ್ ಗರ್ಲ್
ಸದ್ಯ ಮಾಧುರಿ ಬೆಳ್ಳಿತೆರೆಯಿಂದ ಸ್ವಲ್ಪ ದೂರವಿದ್ದರೂ, ರಿಯಾಲಿಟಿ ಶೋಗಳು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. 59ರ ಪ್ರಾಯದಲ್ಲೂ ಅವರ ಫಿಟ್‌ನೆಸ್ ಮತ್ತು ನಗು ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:10 pm, Fri, 15 May 26