ಸಲ್ಮಾನ್​ ಖಾನ್​ ವಿರೋಧಿಗಳಿಗೆ ಖಡಕ್​ ಎಚ್ಚರಿಕೆ ನೀಡಿದ ಮಹಾರಾಷ್ಟ್ರ ಸಿಎಂ ಏಕನಾಥ್​ ಶಿಂಧೆ

‘ಸಲ್ಮಾನ್​ ಖಾನ್​ ಮತ್ತು ಅವರ ಕುಟುಂಬದವರಿಗೆ ಪೂರ್ತಿ ಭದ್ರತೆ ನೀಡಬೇಕು ಎಂದು ನಾನು ಪೊಲೀಸ್​ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ಚಿಂತೆ ಮಾಡುವ ಅಗತ್ಯ ಇಲ್ಲ ಎಂದು ಸಲ್ಮಾನ್​ ಖಾನ್​ಗೆ ಹೇಳಿದ್ದೇನೆ. ಸರ್ಕಾರ ಅವರ ಜೊತೆ ಇದೆ. ಇದು ಜನರ ಸರ್ಕಾರ. ಜನರ ರಕ್ಷಣೆ ಮಾಡುವುದು ನಮ್ಮ ಕೆಲಸ. ಅದನ್ನು ನಾವು ಮಾಡುತ್ತೇವೆ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.

ಸಲ್ಮಾನ್​ ಖಾನ್​ ವಿರೋಧಿಗಳಿಗೆ ಖಡಕ್​ ಎಚ್ಚರಿಕೆ ನೀಡಿದ ಮಹಾರಾಷ್ಟ್ರ ಸಿಎಂ ಏಕನಾಥ್​ ಶಿಂಧೆ
ಸಲೀಂ ಖಾನ್​, ಏಕನಾಥ್​ ಶಿಂಧೆ, ಸಲ್ಮಾನ್​ ಖಾನ್​

Updated on: Apr 16, 2024 | 7:57 PM

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಅವರು ಮಂಗಳವಾರ (ಏಪ್ರಿಲ್​ 16) ಮುಂಬೈನ ಬಾಂದ್ರಾ ನಿವಾಸದಲ್ಲಿ ಬಾಲಿವುಡ್ ಸೂಪರ್‌ ಸ್ಟಾರ್ ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಿದ್ದಾರೆ. ಭಾನುವಾರ (ಏಪ್ರಿಲ್​ 14) ಸಲ್ಮಾನ್​ ಖಾನ್​ ಅವರ ಮನೆಯ (Salman Khan House) ಹೊರಗೆ ನಡೆದ ಗುಂಡಿನ ದಾಳಿಯ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಏಕನಾಥ್ ಶಿಂಧೆ ಭರವಸೆ ನೀಡಿದ್ದಾರೆ. ಈ ವೇಳೆ ಸಲ್ಮಾನ್​ ಖಾನ್​ ತಂದೆ ಸಲೀಂ ಖಾನ್​ ಜೊತೆ ಏಕನಾಥ್​ ಶಿಂಧೆ ಅವರು ಮಾತುಕಥೆ ನಡೆಸಿದ್ದಾರೆ. ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಸಲ್ಮಾನ್​ ಖಾನ್​ (Salman Khan) ವಿರೋಧಿಗಳಿಗೆ ಖಡಕ್​ ಎಚ್ಚರಿಗೆ ನೀಡಿದ್ದಾರೆ. ಸಲ್ಮಾನ್​ ಖಾನ್​ ನಿವಾಸಕ್ಕೆ ಮಹಾರಾಷ್ಟ್ರ ಸಿಎಂ ಭೇಟಿ ನೀಡಿದ ವಿಡಿಯೋ ವೈರಲ್​ ಆಗಿದೆ.

‘ನಾನು ಸಲ್ಮಾನ್​ ಖಾನ್​ ಅವರನ್ನು ಭೇಟಿ ಮಾಡಿದ್ದೇವೆ. ಅವರ ಜೊತೆ ನಮ್ಮ ಸರ್ಕಾರ ಇದೆ ಎಂದು ಭರವಸೆ ನೀಡಿದ್ದೇನೆ. ಈ ಘಟನೆಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ತಿಳಿಸಿದ್ದೆ. ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇದು ಮಹಾರಾಷ್ಟ್ರ. ಇಲ್ಲಿ ಯಾವುದೇ ಗ್ಯಾಂಗ್​ ಉಳಿದುಕೊಂಡಿಲ್ಲ. ಎಲ್ಲ ಗ್ಯಾಂಗ್​ ಮತ್ತು ಗೂಂಡಾಗಳನ್ನು ಕಿತ್ತು ಹಾಕುತ್ತೇವೆ. ಇಲ್ಲಿ ಯಾವುದೇ ರೌಡಿಸಂ ಮುಂದುವರಿಯಲು ಬಿಡುವುದಿಲ್ಲ’ ಎಂದು ಏಕನಾಥ್​ ಶಿಂಧೆ ಹೇಳಿದ್ದಾರೆ.

ಸಲ್ಮಾನ್​ ಖಾನ್​ ಅವರಿಗೆ ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯ್​ ಬೆದರಿಕೆ ಹಾಕಿದ್ದ. ಆತನನ್ನು ಮಟ್ಟಹಾಕುವುದಾಗಿ ಏಕನಾಥ್​ ಶಿಂಧೆ ಹೇಳಿದ್ದಾರೆ.

‘ಮುಂಬೈನಲ್ಲಿ ಭೂಗತ ಲೋಕ ಅಂತ್ಯವಾಗಿದೆ. ಈ ಬಿಷ್ಣೋಯ್​ ಎಂಬಾತನನ್ನು ನಾವು ಮುಗಿಸುತ್ತೇವೆ. ಮತ್ತೆ ಯಾರೂ ಈ ರೀತಿ ಕೃತ್ಯ ಎಸಗಲು ಧೈರ್ಯ ತೋರಿಸಬಾರದು. ಆ ರೀತಿಯಲ್ಲಿ ಪೊಲೀಸರು ಕೆಲಸ ಮಾಡುತ್ತಾರೆ. ಇಲ್ಲಿ ಯಾರದ್ದೂ ದಾದಾಗಿರಿ ನಡೆಯಲ್ಲ. ಸಲ್ಮಾನ್​ ಖಾನ್​ ಅವರು ದೊಡ್ಡ ಸೆಲೆಬ್ರಿಟಿ. ಸಾಮಾನ್ಯ ನಾಗರಿಕರಿಗೂ ಯಾರಾದರೂ ತೊಂದರೆ ಕೊಟ್ಟರೆ ಸರ್ಕಾರ ಸುಮ್ಮಿರುವುದಿಲ್ಲ.

ಇದನ್ನೂ ಓದಿ: ಗುಂಡಿನ ದಾಳಿ ಬಳಿಕ ಮೊದಲ ಬಾರಿ ಮನೆಯಿಂದ ಹೊರಬಂದ ಸಲ್ಮಾನ್​ ಖಾನ್​; ಹೇಳಿಕೆ ಬಿಡುಗಡೆ

ಮಹಾರಾಷ್ಟ್ರದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ವಿರೋಧ ಪಕ್ಷದವರು ಆರೋಪಿಸಿದ್ದಾರೆ. ಅದಕ್ಕೆ ಉತ್ತರಿಸಿದ ಏಕನಾಥ್​ ಶಿಂಧೆ, ‘ಈ ಹಿಂದಿನ ಸರ್ಕಾರಗಳು ಏನೆಲ್ಲ ಮಾಡಿವೆ ಎಂಬುದರ ಬಗ್ಗೆ ನಾನು ಮಾತನಾಡಲ್ಲ. ಈಗ ಆಗಿರುವ ಗುಂಡಿನ ದಾಳಿಯ ಘಟನೆಯನ್ನೂ ನಾನು ಸಮರ್ಥಿಸಿಕೊಳ್ಳುತ್ತಿಲ್ಲ. ಮುಂಬೈ ಜನರ ಮೇಲೆ ಕೈ ಎತ್ತವ ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸುತ್ತೇವೆ’ ಎಂದು ಏಕನಾಥ್​ ಶಿಂಧೆ ಮಾಧ್ಯಮಗಳ ಎದುರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us