ಸೋರಬ್ ಬೇಡಿ ಜೊತೆಗಿನ ಡೇಟಿಂಗ್ ವದಂತಿಗೆ ಸ್ಪಷ್ಟನೆ ನೀಡಿದ ಮಲೈಕಾ ಅರೋರಾ

ಮಲೈಕಾ ಅರೋರಾ ಮತ್ತು ಸೋರಬ್ ಬೇಡಿ ಅವರ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಅದಕ್ಕೆ ಈಗಾಗಲೇ ಸೋರಬ್ ಬೇಡಿ ಅವರು ಪ್ರತಿಕ್ರಿಯೆ ನೀಡಿದ್ದಾಗಿದೆ. ಈಗ ಮಲೈಕಾ ಸರದಿ. ತಮ್ಮ ಬಗ್ಗೆ ಕೇಳಿಬಂದ ಡೇಟಿಂಗ್ ವದಂತಿಗೆ ಮಲೈಕಾ ಅರೋರಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಸೋರಬ್ ಬೇಡಿ ಜೊತೆಗಿನ ಡೇಟಿಂಗ್ ವದಂತಿಗೆ ಸ್ಪಷ್ಟನೆ ನೀಡಿದ ಮಲೈಕಾ ಅರೋರಾ
Malaika Arora, Sorab Bedi

Updated on: Mar 26, 2026 | 8:54 PM

ಬಾಲಿವುಡ್‌ನ ಸ್ಟೈಲಿಶ್ ನಟಿ ಮಲೈಕಾ ಅರೋರಾ (Malaika Arora) ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ವೈಯಕ್ತಿಕ ಜೀವನ, ಒಂಟಿತನ ಮತ್ತು ಹರಿದಾಡುತ್ತಿರುವ ಡೇಟಿಂಗ್ ವದಂತಿಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಸಿನಿಮಾ ರಂಗದಲ್ಲಿ ಯಾರ ಜೊತೆ ಕಂಡರೂ ಲಿಂಕ್-ಅಪ್ ವದಂತಿಗಳು ಹರಡುವುದು ಸಾಮಾನ್ಯ. ಇತ್ತೀಚೆಗೆ ಮಲೈಕಾ ಅವರು ಸೋರಬ್ ಬೇಡಿ (Sorab Bedi) ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಈಗ ಇವೆಲ್ಲವೂ ಕಿರಿಕಿರಿ ಎನಿಸುತ್ತದೆ. ನಾನು ಇವುಗಳನ್ನು ಕೇವಲ ಒಂದು ಜೋಕ್ ಎಂದು ಪರಿಗಣಿಸುತ್ತೇನೆ’ ಎಂದಿದ್ದಾರೆ.

ಅಚ್ಚರಿಯ ವಿಷಯವೆಂದರೆ, ಈ ವದಂತಿಗಳನ್ನು ನೋಡಿ ಮಲೈಕಾ ಮತ್ತು ಅವರ ಪುತ್ರ ಅರ್ಹಾನ್ ಖಾನ್ ಇಬ್ಬರೂ ಒಟ್ಟಾಗಿ ನಗುತ್ತಾರಂತೆ. ‘ಅರ್ಹಾನ್ ಮತ್ತು ನಾನು ಇಂತಹ ವಿಷಯಗಳ ಬಗ್ಗೆ ಸಾಕಷ್ಟು ತಮಾಷೆ ಮಾಡುತ್ತೇವೆ’ ಎಂದು ಮಲೈಕಾ ಅರೋರಾ ಅವರು ಹೇಳಿದ್ದಾರೆ. ಈಗಾಗಲೇ ಸೋರಬ್ ಬೇಡಿ ಕೂಡ ‘ನಾವು ಜಸ್ಟ್ ಫ್ರೆಂಡ್ಸ್’ ಎಂದು ಸ್ಪಷ್ಟನೆ ನೀಡಿದ್ದಾರೆ.

ಒಬ್ಬ ಸಿಂಗಲ್ ಮದರ್ ಆಗಿ ಹೊಸ ಸಂಗಾತಿಯನ್ನು ಹುಡುಕುವುದು ಕಷ್ಟವೇ ಎಂಬ ಪ್ರಶ್ನೆಗೆ ಉತ್ತರಿಸಿದ ಮಲೈಕಾ, ‘ಯಾರೋ ಒಬ್ಬ ಪುರುಷ ನನ್ನ ಜೀವನಕ್ಕೆ ಬಂದು ನನ್ನ ಅಸ್ತಿತ್ವವನ್ನು ಸಾಬೀತುಪಡಿಸುವ ಅಗತ್ಯವಿಲ್ಲ. ಮೊದಲು ನಾನು ಒಬ್ಬ ವ್ಯಕ್ತಿಯಾಗಿ ನನ್ನನ್ನು ನಾನು ಕಂಡುಕೊಳ್ಳಬೇಕು. ನನ್ನ ಎಲ್ಲಾ ಸಂಬಂಧಗಳು ನನ್ನದೇ ಆದ ರೀತಿಯಲ್ಲಿ ಇರಬೇಕು’ ಎಂದು ತಿಳಿಸಿದ್ದಾರೆ.

ಮಲೈಕಾ ಅರೋರಾ ಅವರು ಅರ್ಬಾಜ್ ಖಾನ್ ಅವರೊಂದಿಗೆ 19 ವರ್ಷಗಳ ವೈವಾಹಿಕ ಜೀವನದ ನಂತರ 2017ರಲ್ಲಿ ವಿಚ್ಛೇದನ ಪಡೆದಿದ್ದರು. ಬಳಿಕ ನಟ ಅರ್ಜುನ್ ಕಪೂರ್ ಜೊತೆ 6 ವರ್ಷಗಳ ಕಾಲ ಡೇಟಿಂಗ್ ನಡೆಸಿದ್ದರು. ಆದರೆ 2024ರಲ್ಲಿ ಇವರಿಬ್ಬರೂ ಬೇರ್ಪಟ್ಟಿದ್ದಾರೆ ಎಂಬುದು ಖಚಿತವಾಯಿತು. ಈಗ ಮಲೈಕಾ ಸಿಂಗಲ್ ಆಗಿದ್ದಾರೆ. ಹಾಗಾಗಿ ಅವರು ಯಾರ ಜೊತೆ ಕಾಣಿಸಿಕೊಂಡರೂ ಸುದ್ದಿ ಆಗುತ್ತದೆ.

ಇದನ್ನೂ ಓದಿ: ಮಲೈಕಾ ಅರೋರಾ ಜೊತೆ ಇರೋ ಈ ಹೊಸ ಹುಡುಗ ಯಾರು?

ಮಲೈಕಾ ಅರೋರಾ ಅವರಿಗೆ ಈಗ 52 ವರ್ಷ ವಯಸ್ಸು. ಅವರಿಗೆ ಇಷ್ಟ ವಯಸ್ಸು ಆಗಿದೆ ಎಂದು ಯಾರೂ ಕೂಡ ಹೇಳಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಅವರು ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ. ಹಾಗಾಗಿ ಅವರಿಗೆ ಚಿತ್ರರಂಗದಲ್ಲಿ ಈಗಲೂ ಬೇಡಿಕೆ ಇದೆ. ಅನೇಕ ಬ್ರ್ಯಾಂಡ್​ಗಳಿಗೆ ಅವರು ಪ್ರಚಾರ ರಾಯಭಾರಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us