Salman Khan: ಸಲ್ಮಾನ್ ಖಾನ್​ಗೆ ಬೆದರಿಕೆ ಪ್ರಕರಣ, ರಾಜಸ್ಥಾನದಲ್ಲಿ ವ್ಯಕ್ತಿ ಬಂಧನ

|

Updated on: Mar 26, 2023 | 8:21 PM

ಸಲ್ಮಾನ್ ಖಾನ್​ಗೆ ಬೆದರಿಕೆ ಇ-ಮೇಲ್ ಕಳಿಸಿದ್ದ ವ್ಯಕ್ತಿಯನ್ನು ಮುಂಬೈ ಪೊಲೀಸರು ರಾಜಸ್ಥಾನದಲ್ಲಿ ಬಂಧಿಸಿದ್ದಾರೆ. ಈಗ ಬಂಧಿತವಾಗಿರುವ ವ್ಯಕ್ತಿಯೂ ಭೂಗತ ಪಾತಕಿ ಎನ್ನಲಾಗುತ್ತಿದೆ.

Salman Khan: ಸಲ್ಮಾನ್ ಖಾನ್​ಗೆ ಬೆದರಿಕೆ ಪ್ರಕರಣ, ರಾಜಸ್ಥಾನದಲ್ಲಿ ವ್ಯಕ್ತಿ ಬಂಧನ
ಸಲ್ಮಾನ್ ಖಾನ್
Follow us on

ಈಗಾಗಲೇ ಕೆಲವು ಭೂಗತ ಪಾತಕಿಗಳಿಂದ (Underworld) ಜೀವ ಬೆದರಿಕೆ (Threat) ಎದುರಿಸುತ್ತಿರುವ ಸಲ್ಮಾನ್ ಖಾನ್​ಗೆ (Salman Khan) ಕೆಲವು ದಿನಗಳ ಹಿಂದೆಯಷ್ಟೆ ವ್ಯಕ್ತಿಯೊಬ್ಬ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಕಳಿಸಿದ್ದ. ಸಲ್ಮಾನ್ ಖಾನ್​ರ ಆಪ್ತ ಹಾಗೂ ಮ್ಯಾನೇಜರ್ ಸಹ ಆಗಿರುವ ಪ್ರಶಾಂತ್ ಗುಂಜಲ್ಕರ್​ಗೆ ಈ ಬೆದರಿಕೆ ಇ-ಮೇಲ್ ಬಂದಿದ್ದು, ಈ ಕುರಿತು ಪ್ರಶಾಂತ್ ಮಾರ್ಚ್ 18 ರಂದು ಮುಂಬೈ ಪೊಲೀಸರ ಬಳಿ ದೂರು ದಾಖಲಿಸಿದ್ದರು. ತನಿಖೆ ಆರಂಭಿಸಿದ ಪೊಲೀಸರಿಗೆ ಇಮೇಲ್, ರಾಜಸ್ಥಾನದ ಜೋಧಪುರದಿಂದ ಬಂದಿದ್ದು ತಿಳಿದು ರಾಜಸ್ಥಾನಕ್ಕೆ ತೆರಳಿ ಅಲ್ಲಿನ ಸ್ಥಳೀಯ ಪೊಲೀಸರ ನೆರವಿನೊಂದಿಗೆ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

21 ವರ್ಷದ ಧಕದ್​ರಾಮ್ ಬಿಷ್ಣೋಯಿ ಎಂಬಾತನನ್ನು ಮುಂಬೈ ಪೊಲೀಸರು ಇದೀಗ ಬಂಧಿಸಿದ್ದು, ಇದೇ ವ್ಯಕ್ತಿಯೇ ಸಲ್ಮಾನ್ ಖಾನ್​ ಅನ್ನು ಕೊಲ್ಲುವುದಾಗಿ ಅವರ ಮ್ಯಾನೇಜರ್​ಗೆ ಇಮೇಲ್ ಕಳಿಸಿದ್ದ ಎನ್ನಲಾಗುತ್ತಿದೆ. ಈತ ರಾಜಸ್ಥಾನದ ಜೋದ್​ಪುರ್ ಬಳಿಯ ಸಿಯೋಗಿ ಕಿ ಧಾನಿ ಎಂಬಲ್ಲಿನ ನಿವಾಸಿವಾಗಿದ್ದು, ಈತನಿಗೂ ಸಲ್ಮಾನ್ ಖಾನ್ ಹಿಂದೆ ಬಿದ್ದಿರುವ ಬಿಷ್ಣೋಯಿ ಹಾಗೂ ಬ್ರಾರ್ ಗ್ಯಾಂಗ್​ಗೂ ಸಂಬಂಧವಿದೆ ಎನ್ನಲಾಗುತ್ತಿದೆ.

ಇದೇ ಆರೋಪಿಯು ಗಾಯಕ ಸಿಧು ಮೂಸೆವಾಲ ತಂದೆಗೂ ಇ-ಮೇಲ್ ಕಳಿಸಿದ್ದು ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು ಸಹ ಜೋಧ್​ಪುರ ಪೊಲೀಸರಿಗೆ ಮಾಹಿತಿ ಹಂಚಿಕೊಂಡು ಆತನ ಬಂಧನಕ್ಕೆ ಯತ್ನಿಸಿದ್ದರು ಎಂದು ಜೋಧ್​ಪುರದ ಲೂನಿ ಪೊಲೀಸ್ ಠಾಣೆಯ ಇನ್​ಸ್ಪೆಕ್ಟರ್ ಮಾಹಿತಿ ನೀಡಿದ್ದಾರೆ. ಗಾಯಕ ಸಿಧು ಮೂಸೆವಾಲ ಅನ್ನು ಗೋಲ್ಡಿ ಬ್ರಾರ್ ಗ್ಯಾಂಗಿನ ಕಡೆಯವರು ಕಳೆದ ವರ್ಷ ಹತ್ಯೆ ಮಾಡಿದ್ದರು.

ಬಂಧಿತನಾಗಿರುವ ಧಕದ್​ರಾಮ್ ಬಿಷ್ಣೋಯಿ ಬಳಿ ಶಸ್ತ್ರಾಸ್ತ್ರಗಳು ಸಹ ಪತ್ತೆಯಾಗಿದ್ದು, ಕೊಲೆ ಬೆದರಿಕೆ ಜೊತೆಗೆ ಅಕ್ರಮ ಶಸ್ತ್ರಾಸ್ತ್ರ ಪ್ರಕರಣವನ್ನು ಸಹ ಆತನ ಮೇಲೆ ದಾಖಲಿಸಲಾಗಿದೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಮುಂಬೈಗೆ ಕರೆತರಲಾಗಿದ್ದು, ಆತ ಇಮೇಲ್ ಕಳಿಸಿದ್ದು ಏಕೆ? ಯಾರ ಸೂಚನೆ ಮೇರೆಗೆ ಇ-ಮೇಲ್ ಕಳಿಸಿದ್ದ. ಸಲ್ಮಾನ್ ಖಾನ್ ಅನ್ನು ಕೊಲ್ಲಲು ಯತ್ನಿಸಿದ್ದನೆ ಇನ್ನಿತರೆ ಮಾಹಿತಿಗಳನ್ನು ಹೊರಗೆಳೆಯಲಿದ್ದಾರೆ.

”ಗೋಲ್ಡಿ ಅಣ್ಣ (ಗೋಲ್ಡಿ ಬ್ರಾರ್) ನಿನ್ನ ಬಾಸ್​ (ಸಲ್ಮಾನ್ ಖಾನ್) ಜೊತೆ ಮಾತನಾಡಬೇಕಂತೆ. ಲಾರೆನ್ಸ್ ನ ಸಂದರ್ಶನ ನೋಡಿಯೇ ಇರಬೇಕು ಅವನು. ಸಂದರ್ಶನ ನೋಡಿಲ್ಲ ಎಂದಾದರೆ ತೋರಿಸು ಅವನಿಗೆ. ಈ ವಿಷಯ ಇಲ್ಲಿಗೆ ಮುಗಿಸಬೇಕು ಎಂದರೆ ಗೋಲ್ಡಿ ಅಣ್ಣನ ಜೊತೆ ಮಾತನಾಡಲು ಹೇಳು. ಅದೂ ನೇರಾ-ನೇರಾ. ಈಗಿನ್ನೂ ಸಮಯ ಇದೆ ಅದಕ್ಕೆ ಹೇಳುತ್ತಿದ್ದೇನೆ. ಇಲ್ಲವಾದರೆ ಹೊಡೆಯುವೆ ಅಷ್ಟೆ” ಎಂದು ಸಲ್ಮಾನ್ ಖಾನ್​ರ ಮ್ಯಾನೇಜರ್​ಗೆ ಇಮೇಲ್ ಬಂದಿತ್ತು.

ಸಲ್ಮಾನ್ ಖಾನ್ ಅನ್ನು ಕೊಲ್ಲಲು ಬಹಳ ವರ್ಷಗಳಿಂದ ಸತತ ಪ್ರಯತ್ನಗಳು ಆಗುತ್ತಲೇ ಇವೆ ಎಂಬುದು ಇತ್ತೀಚೆಗಿನ ಮುಂಬೈ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಬಂಧಿತನಾಗಿರುವ ಪಾತಕಿ ಲಾರೆನ್ಸ್ ಬಿಷ್ಣೋಯಿ, ಇತ್ತೀಚೆಗಷ್ಟೆ ಜೈಲಿನಿಂದ ನೀಡಿರುವ ಸಂದರ್ಶನದಲ್ಲಿ, ತನ್ನ ಜೀವನದ ಉದ್ದೇಶವೇ ಸಲ್ಮಾನ್ ಖಾನ್ ಅನ್ನು ಕೊಲ್ಲುವುದು ಎಂದಿದ್ದಾನೆ. ವಿದೇಶದಲ್ಲಿ ಕೂತು ಭಾರತದಲ್ಲಿ ಕೊಲೆ, ಸುಲಿಗೆ ಮಾಡಿಸುತ್ತಿರುವ ಬ್ರಾರ್ ಸಹೋದರರು ಸಹ ಸಲ್ಮಾನ್ ಖಾನ್ ಅನ್ನು ಕೊಲ್ಲಲು ಹೊಂಚು ಹಾಕುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ