ಸ್ಟಾರ್ ನಟನ ಮಗಳು ಎಂಬ ಕಾರಣಕ್ಕೆ ಬೆದರಿಕೆ; ರಿತಿ ತಿವಾರಿ ಭಾವುಕ ಮಾತು
'ಬಿಗ್ ಬಾಸ್ 20' ಸ್ಪರ್ಧಿ, ನಟ ಹಾಗೂ ರಾಜಕಾರಣಿ ಮನೋಜ್ ತಿವಾರಿ ಪುತ್ರಿ ರಿತಿ ತಿವಾರಿ, ಪ್ರಸಿದ್ಧ ವ್ಯಕ್ತಿಯ ಮಗಳಾಗಿದ್ದಕ್ಕೆ ತಮಗೆ ಬಂದ ಕೊಲೆ ಹಾಗೂ ಅತ್ಯಾಚಾರ ಬೆದರಿಕೆಗಳು ಮತ್ತು ತಮ್ಮ ವೈಯಕ್ತಿಕ ಜೀವನದ ಕಷ್ಟಗಳ ಕುರಿತು ಭಾವುಕರಾಗಿ ಮಾತನಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಬೋಜ್‌ಪುರಿ ಚಿತ್ರರಂಗದ ಖ್ಯಾತ ನಟ ಹಾಗೂ ರಾಜಕಾರಣಿ ಮನೋಜ್ ತಿವಾರಿ ಅವರ ಪುತ್ರಿ ರಿತಿ ತಿವಾರಿ ಪ್ರಸ್ತುತ ‘ಬಿಗ್ ಬಾಸ್ 20’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದಾರೆ. ಪ್ರಸಿದ್ಧ ವ್ಯಕ್ತಿಯ ಮಗಳಾಗಿ ಗುರುತಿಸಿಕೊಳ್ಳುವುದು ಸುಲಭ ಎನಿಸಿದರೂ, ಅದರ ಹಿಂದೆ ಅನುಭವಿಸುವ ಒತ್ತಡ ಮತ್ತು ಸವಾಲುಗಳ ಕುರಿತು ರಿತಿ ಅವರು ಬಿಗ್ ಬಾಸ್ ಮನೆಯಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಮನೋಜ್ ತಿವಾರಿ ಅವರ ಮಗಳಾಗಿದ್ದಕ್ಕೇ ತಮಗೆ ಅತ್ಯಾಚಾರ ಹಾಗೂ ಕೊಲೆ ಬೆದರಿಕೆಗಳು ಬಂದಿದ್ದವು ಎಂದು ಅವರು ಆಘಾತಕಾರಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಶೋನಲ್ಲಿ ಬಾಕ್ಸಿಂಗ್ ತಾರೆ ಮೇರಿ ಕೋಮ್ ಅವರೊಂದಿಗೆ ಮಾತನಾಡುತ್ತಾ ರಿತಿ ತಿವಾರಿ ಅವರು ತಮ್ಮ ಮನದ ನೋವನ್ನು ಹಂಚಿಕೊಂಡರು. ‘ನನ್ನ ಮೇಲೆ ಯಾವಾಗಲೂ ಎರಡರಷ್ಟು ಒತ್ತಡವಿರುತ್ತದೆ. ನಾನು ಯಾವುದೇ ಮಾತು ಆಡಿದರೂ ಮನೋಜ್ ತಿವಾರಿ ಮಗಳು ಹೀಗೆ ಹೇಳಿದಳು ಎಂದು ಟೀಕಿಸುತ್ತಾರೆ. ನಾನು ಅವರ ಮಗಳು ಎನ್ನುವ ಒಂದೇ ಕಾರಣಕ್ಕೆ ನನಗೆ ಕೊಲೆ ಬೆದರಿಕೆಗಳು ಮತ್ತು ಅತ್ಯಾಚಾರದ ಬೆದರಿಕೆಗಳು ಬಂದಿವೆ. ನನ್ನ ಸ್ವಂತ ಅಭಿಪ್ರಾಯಗಳನ್ನು ಜನರು ನನ್ನ ತಂದೆಯ ಅಭಿಪ್ರಾಯವೆಂದೇ ಭಾವಿಸುತ್ತಾರೆ. ಅವರ ಹೆಸರನ್ನು ಇಟ್ಟುಕೊಂಡೇ ನನ್ನನ್ನು ಗುರಿಯಾಗಿಸಿಕೊಂಡು ನಿಂದಿಸುತ್ತಾರೆ’ ಎಂದು ರಿತಿ ಅವರು ಭಾವುಕರಾದರು.
ಇನ್ನೊಬ್ಬ ಸ್ಪರ್ಧಿ ಕನಿಕಾ ಮಾನ್ ಅವರೊಂದಿಗಿನ ಸಂಭಾಷಣೆಯಲ್ಲಿ ರಿತಿ ಅವರು ತಮ್ಮ ವೈಯಕ್ತಿಕ ಜೀವನದ ಹಿನ್ನೆಲೆಯನ್ನು ಹಂಚಿಕೊಂಡರು. ತಮ್ಮ ತಂದೆ-ತಾಯಿಯ ವಿಚ್ಛೇದನದ ನಂತರ ತಾಯಿ ಒಬ್ಬಂಟಿಯಾಗಿ ತಮ್ಮನ್ನು ಬೆಳೆಸಿದ ರೀತಿಯು, ಸಂಬಂಧಗಳನ್ನು ನೋಡುವ ತಮ್ಮ ದೃಷ್ಟಿಕೋನವನ್ನೇ ಬದಲಿಸಿತು ಎಂದು ಅವರು ಹೇಳಿದರು.
‘ನಾನು ಸ್ವತಂತ್ರವಾಗಿ ಕೆಲಸ ಮಾಡಿ, ಹಣಗಳಿಸಿ ನನಗಾಗಿಯೇ ಪ್ರತ್ಯೇಕ ಗುರುತನ್ನು ರೂಪಿಸಿಕೊಳ್ಳಲು ಬಯಸುತ್ತೇನೆ. ನನ್ನ ಜೀವನದಲ್ಲಿ ನನ್ನನ್ನು ನಿಯಂತ್ರಿಸಲು ಯತ್ನಿಸುವ ಪುರುಷರನ್ನೇ ನಾನು ಹೆಚ್ಚು ಎದುರಿಸಿದ್ದೇನೆ. ಆದರೆ ನನಗೆ ಯಾರ ಹಸ್ತಕ್ಷೇಪವೂ ಇಲ್ಲದ ಸ್ವತಂತ್ರ ಜೀವನ ಬೇಕು. ನಾನು 20 ವರ್ಷಗಳಿಂದ ಪರಿಚಿತನಾಗಿದ್ದ ನನ್ನ ಬೆಸ್ಟ್ ಫ್ರೆಂಡ್‌ನನ್ನು ಗಾಢವಾಗಿ ಪ್ರೀತಿಸಿದ್ದೆ. ಆದರೆ ಇತ್ತೀಚೆಗಷ್ಟೇ ಆ ಪ್ರೇಮಕಥೆ ಬ್ರೇಕಪ್‌ನಲ್ಲಿ ಕೊನೆಗೊಂಡಿತು’ ಎಂದು ತಮ್ಮ ಖಾಸಗಿ ವಿಚಾರವನ್ನು ರಿತಿ ತಿವಾರಿ ಬಿಚ್ಚಿಟ್ಟರು.
ಇದನ್ನೂ ಓದಿ: ಬಿಜೆಪಿ ಸಂಸದ ಮನೋಜ್ ತಿವಾರಿ ಮನೆಯಲ್ಲಿ ಕಳ್ಳತನ
ರಿತಿ ತಿವಾರಿ ಯಾರು?
ರಿತಿ ತಿವಾರಿ ಅವರು ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಗೀತರಚನೆಗಾರ್ತಿ, ಸಂಗೀತ ಸಂಯೋಜಕಿ ಹಾಗೂ ನಿರ್ಮಾಪಕಿಯೂ ಆಗಿದ್ದಾರೆ. ಯೂಟ್ಯೂಬ್ ಮತ್ತು ಸ್ಪಾಟಿಫೈನಲ್ಲಿ ಅವರ ಬಾರಿಶ್, ಮಾನಸಿಕ್ ಸಂತುಲನ್, ಝೂಟಿ ಬೇಬಿ ಹಾಗೂ ಘುಮ್ ಚುಕೆ ಮುಂತಾದ ಹಲವು ಸ್ವತಂತ್ರ ಆಲ್ಬಂ ಹಾಡುಗಳು ಬಿಡುಗಡೆಯಾಗಿ ಗಮನ ಸೆಳೆದಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




