ಬಾಲಿವುಡ್ನ ಖ್ಯಾತ ನಟ ಮಿಥುನ್ ಚಕ್ರವರ್ತಿ (Mithun Chakraborty) ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶನಿವಾರ (ಫೆಬ್ರವರಿ 10) ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡ ಪರಿಣಾಮ ಅವರನ್ನು ಕೊಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹಿರಿಯ ನಟನ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಆತಂಕ ಉಂಟಾಗಿತ್ತು. ಈಗ ಆಸ್ಪತ್ರೆ ಕಡೆಯಿಂದ ಮಿಥುನ್ ಚಕ್ರವರ್ತಿ ಅವರ ಹೆಲ್ತ್ ಅಪ್ಡೇಟ್ (Mithun Chakraborty Health Update) ನೀಡಲಾಗಿದೆ. ಅವರಿಗೆ ಬ್ರೇನ್ ಸ್ಟ್ರೋಕ್ (Brain Stroke) ಆಗಿದೆ ಎಂಬ ವಿಚಾರ ತಿಳಿದುಬಂದಿದೆ. ಮಿಥುನ್ ಚಕ್ರವರ್ತಿ ಅವರಿಗೆ ಈಗ 73 ವರ್ಷ ವಯಸ್ಸು. ಹಾಗಾಗಿ ಅಭಿಮಾನಿಗಳ ಚಿಂತೆ ಹೆಚ್ಚಿದೆ. ಸದ್ಯಕ್ಕೆ ಅವರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.
‘ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಮಿಥುನ್ ಚಕ್ರವರ್ತಿ ಅವರನ್ನು ನಮ್ಮ ಆಸ್ಪತ್ರೆಯ ಎಮರ್ಜೆನ್ಸಿ ವಿಭಾಗಕ್ಕೆ ಕರೆತರಲಾಯಿತು. ಎಂಆರ್ಐ ಸೇರಿದಂತೆ ಹಲವು ಪರೀಕ್ಷೆ ಮಾಡಲಾಯಿತು. ಆಗ ಅವರಿಗೆ ಬ್ರೇನ್ ಸ್ಟ್ರೋಕ್ ಆಗಿರುವುದು ತಿಳಿಯಿತು. ಈಗ ಅವರಿಗೆ ಪ್ರಜ್ಞೆ ಬಂದಿದೆ. ಮಿತವಾದ ಆಹಾರ ಸೇವಿಸಿದ್ದಾರೆ. ನ್ಯೂರೋ ಫಿಸಿಷಿಯನ್, ಹೃದ್ರೋಗ ತಜ್ಞರು ಸೇರಿದಂತೆ ಹಲವು ವೈದ್ಯರು ಅವರ ಆರೋಗ್ಯವನ್ನು ಪರಿಶೀಲಿಸುತ್ತಿದ್ದಾರೆ’ ಎಂದು ಆಸ್ಪತ್ರೆ ಕಡೆಯಿಂದ ಹೆಲ್ತ್ ಅಪ್ಡೇಟ್ ನೀಡಲಾಗಿದೆ.
ಇದನ್ನೂ ಓದಿ: ಮಿಥುನ್ ಚಕ್ರವರ್ತಿ ತೆರಳುತ್ತಿದ್ದ ಟೆಂಪೋ ನಿಲ್ಲಿಸಿ ಕಾರಿನಲ್ಲಿ ಡ್ರಾಪ್ ಕೊಟ್ಟಿದ್ದ ಅಮಿತಾಭ್ ಬಚ್ಚನ್
ನಟಿ ದೇವಶ್ರೀ ರಾಯ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ಮಿಥುನ್ ಚಕ್ರವರ್ತಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಈಗ ಮಿಥುನ್ ಚಕ್ರವರ್ತಿ ಅವರ ಆರೋಗ್ಯ ಸುಧಾರಿಸುತ್ತಿದೆ. ಅವರ ಶುಗರ್ ಲೆವೆಲ್ ಇಳಿಕೆ ಆಗಿತ್ತು. ಸದ್ಯಕ್ಕೆ ಅವರನ್ನು ಐಸಿಯುನಿಂದ ಬೇರೆ ವಾರ್ಡ್ಗೆ ಶಿಫ್ಟ್ ಮಾಡಲಾಗಿದ್ದು,. ಸುಧಾರಿಸಿಕೊಳ್ಳುತ್ತಿದ್ದಾರೆ’ ಎಂದು ದೇವಶ್ರೀ ರಾವ್ ಹೇಳಿದ್ದಾರೆ. ನಿರ್ದೇಶಕ ಪತಿಕೃತ್ ಬಸು ಕೂಡ ಮಿಥುನ್ ಚಕ್ರವರ್ತಿ ಅವರನ್ನು ಭೇಟಿ ಆಗಿ, ಅವರ ಜೊತೆ ಮಾತನಾಡಿದ್ದಾರೆ. ಆದಷ್ಟು ಬೇಗ ಚೇತರಿಕೆ ಕಂಡು ಶೂಟಿಂಗ್ನಲ್ಲಿ ತಾವು ಭಾಗಿಯಾಗುವುದಾಗಿ ಮಿಥುನ್ ಚಕ್ರವರ್ತಿ ಭರವಸೆ ನೀಡಿದ್ದಾರೆ ಎಂದು ಬಸು ಹೇಳಿದ್ದಾರೆ.
ಇದನ್ನೂ ಓದಿ: ಮಿಥುನ್ ಚಕ್ರವರ್ತಿಗೆ ತೀವ್ರ ಎದೆನೋವು; ಆಸ್ಪತ್ರೆಗೆ ದಾಖಲಾದ ಹಿರಿಯ ನಟ
ಮಿಥುನ್ ಚಕ್ರವರ್ತಿ ಅವರು 1976ರಿಂದ ಚಿತ್ರೋದ್ಯಮದಲ್ಲಿ ಸಕ್ರಿಯರಾಗಿದ್ದಾರೆ. ‘ರಾಷ್ಟ್ರ ಪ್ರಶಸ್ತಿ’ ಸೇರಿದಂತೆ ಹಲವಾರು ಪ್ರತಿಷ್ಠಿತ ಗೌರವಗಳನ್ನು ಅವರು ಪಡೆದಿದ್ದಾರೆ. ‘ಡಿಸ್ಕೋ ಡ್ಯಾನ್ಸರ್’, ‘ಜಂಗ್’, ‘ಪ್ರೇಮ್ ಪ್ರತಿಜ್ಞಾ‘, ‘ಪ್ಯಾರ್ ಜುಕ್ತಾ ನಹೀ’, ‘ಮರ್ದ್’ ಮುಂತಾದ ಸಿನಿಮಾಗಳಲ್ಲಿ ನಟಿಸಿ ಅವರು ಹೆಸರುವಾಸಿ ಆಗಿದ್ದಾರೆ. ಇತ್ತೀಚೆಗೆ, ಅವರು 2024ರ ‘ಪದ್ಮಭೂಷಣ’ ಪ್ರಶಸ್ತಿಗೆ ಭಾಜನರಾದರು. ಅದರ ಬೆನ್ನಲ್ಲೇ ಅನಾರೋಗ್ಯ ಉಂಟಾಗಿದ್ದು ಬೇಸರದ ಸಂಗತಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ