ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಗೌರಿ ಖಾನ್ಗೆ ಶಾರುಖ್ ನೀಡಿದ್ದ ಮೊದಲ ಗಿಫ್ಟ್ ಏನು?
ಗೌರಿ ಖಾನ್ ಮತ್ತು ಶಾರುಖ್ ಖಾನ್ ಅವರದ್ದು ಲವ್ ಮ್ಯಾರೇಜ್. ಪ್ರೀತಿಸಿ ಮದುವೆ ಆಗುವಾಗ ಶಾರುಖ್ ಖಾನ್ ಇನ್ನೂ ಸ್ಟಾರ್ ಆಗಿರಲಿಲ್ಲ. ಆ ಸಂದರ್ಭದಲ್ಲಿ ತಾವು ನೀಡಿದ್ದ ಗಿಫ್ಟ್ ಏನು ಎಂಬುದನ್ನು ಅವರು ಈಗಲೂ ಮರೆತಿಲ್ಲ. ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಶಾರುಖ್ ಖಾನ್ ಅವರು ಈ ವಿಷಯವನ್ನು ಮೆಲುಕು ಹಾಕಿದ್ದರು. ಈ ಬಗ್ಗೆ ಇಲ್ಲಿದೆ ಮಾಹಿತಿ..
ನಟ ಶಾರುಖ್ ಖಾನ್ (Shah Rukh Khan) ಅವರು ಫ್ಯಾಮಿಲಿ ಮ್ಯಾನ್. ಕುಟುಂಬಕ್ಕೆ ಅವರು ಹೆಚ್ಚು ಸಮಯ ನೀಡುತ್ತಾರೆ. ಅವರ ವೃತ್ತಿಜೀವನಕ್ಕೆ ಪತ್ನಿ ಗೌರಿ ಖಾನ್ (Gauri Khan) ಬೆಂಬಲವಾಗಿ ನಿಂತಿದ್ದಾರೆ. ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರದ್ದು ಲವ್ ಮ್ಯಾರೇಜ್. ಈ ದಂಪತಿಗೆ ಮೂವರು ಮಕ್ಕಳು ಇದ್ದಾರೆ. ಈಗ ಶಾರುಖ್ ಖಾನ್ ಅವರು ಸೂಪರ್ ಸ್ಟಾರ್. ಆದರೆ ಮದುವೆ ಆಗುವಾಗ ಅವರು ಅಷ್ಟೆಲ್ಲ ಖ್ಯಾತಿ ಗಳಿಸಿರಲಿಲ್ಲ. ಆ ಸಮಯದಲ್ಲಿ ವ್ಯಾಲೆಂಟೈನ್ಸ್ ಡೇ (Valentine’s Day) ಪ್ರಯುಕ್ತ ಗೌರಿಗೆ ನೀಡಿದ್ದ ಮೊದಲ ಗಿಫ್ಟ್ ಏನಿರಬಹುದು ಎಂಬ ಕುತೂಹಲ ಅನೇಕರಿಗೆ ಇದೆ. ಆ ಬಗ್ಗೆ ಸ್ವತಃ ಶಾರುಖ್ ಖಾನ್ ನೀಡಿದ ಉತ್ತರ ಇಂಟರೆಸ್ಟಿಂಗ್ ಆಗಿತ್ತು.
ಶಾರುಖ್ ಖಾನ್ ಅವರು ಸೋಶಿಯಲ್ ಮೀಡಿಯಾ ಮೂಲಕ ಆಗಾಗ ಪ್ರಶ್ನೋತ್ತರ ನಡೆಸುತ್ತಾರೆ. ಆಗ ಅಭಿಮಾನಿಗಳು ಅವರಿಗೆ ಹಲವು ಬಗೆಯ ಪ್ರಶ್ನೆಗಳನ್ನು ಕೇಳುತ್ತಾರೆ. 2023ರಲ್ಲಿ ಇದೇ ರೀತಿ ಪ್ರಶ್ನೋತ್ತರ ನಡೆಸಿದಾಗ ಅಭಿಮಾನಿಯೊಬ್ಬರಿಂದ ಈ ಬಗ್ಗೆ ಪ್ರಶ್ನೆ ಎದುರಾಗಿತ್ತು. ‘ಗೌರಿ ಮೇಡಂ ಅವರಿಗೆ ನೀವು ನೀಡಿದ ಮೊದಲ ವ್ಯಾಲೆಂಟೈನ್ಸ್ ಡೇ ಉಡುಗೊರೆ ಏನು’ ಎಂದು ಕೇಳಿದ ಪ್ರಶ್ನೆಗೆ ಶಾರುಖ್ ಉತ್ತರ ನೀಡಿದ್ದರು.
ಇದನ್ನೂ ಓದಿ: ಶಾರುಖ್ ಖಾನ್ ಬಗ್ಗೆ ‘ಅನಿಮಲ್’ ನಿರ್ದೇಶಕನಿಗೆ ಇರುವ ಅಪಾರ ಗೌರವಕ್ಕೆ ಈ ಮಾತು ಸಾಕ್ಷಿ
‘ನನಗೆ ಸರಿಯಾಗಿ ನೆನಪಿರುವುದಾದರೆ.. ಈಗಾಗಲೇ 34 ವರ್ಷಗಳು ಕಳೆದಿವೆ. ನನಗೆ ಅನಿಸಿದ ಹಾಗೆ, ಒಂದು ಜೊತೆ ಗುಲಾಬಿ ಬಣ್ಣದ ಪ್ಲಾಸ್ಟಿಕ್ ಇಯರ್ ರಿಂಗ್ಸ್ ನೀಡಿದ್ದೆ’ ಎಂದು ಶಾರುಖ್ ಖಾನ್ ಹೇಳಿದ್ದರು. ಅದಕ್ಕೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದರು. ‘ವಾವ್ ತುಂಬ ಕ್ಯೂಟ್ ಆಗಿದೆ ಸರ್. ನೀವು ನೀಡಿದ್ದು ಪ್ಲಾಸ್ಟಿಕ್ ಗಿಫ್ಟ್ ಆಗಿದ್ದರೂ ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಈಗ ಬೇಕಿದ್ದರೆ ನೀವು ಡೈಮಂಡ್ ರಿಂಗ್ ನೀಡಬಲ್ಲಿರಿ’ ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದರು.
If I remember correctly it’s been what 34 years now….a pair of pink plastic earrings I think… https://t.co/pRY2jxl41B
— Shah Rukh Khan (@iamsrk) February 14, 2023
ಶಾರುಖ್ ಖಾನ್ ಅವರು ವೃತ್ತಿಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಆ ಎಲ್ಲ ಸಂದರ್ಭಗಳಲ್ಲೂ ಅವರಿಗೆ ಗೌರಿ ಖಾನ್ ಬೆಂಬಲವಾಗಿ ನಿಂತಿದ್ದಾರೆ. ನಿರ್ಮಾಪಕಿಯಾಗಿ, ಇಂಟೀರಿಯರ್ ಡಿಸೈನರ್ ಆಗಿ ಅವರು ಗುರುತಿಸಿಕೊಂಡಿದ್ದಾರೆ. ಶಾರುಖ್ ಖಾನ್ ಅವರು 2023ರಲ್ಲಿ ಮತ್ತೆ ಗೆಲುವಿನ ಟ್ರ್ಯಾಕ್ಗೆ ಮರಳಿದರು. ಅವರು ನಟಿಸಿದ ‘ಜವಾನ್’, ‘ಪಠಾಣ್’ ಸಿನಿಮಾಗಳು ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದವು. ‘ಡಂಕಿ’ ಸಿನಿಮಾ ಉತ್ತಮ ವಿಮರ್ಶೆ ಪಡೆದುಕೊಂಡಿತು. ಶಾರುಖ್ ಮಕ್ಕಳಾದ ಸುಹಾನಾ ಖಾನ್ ಮತ್ತು ಆರ್ಯನ್ ಖಾನ್ ಕೂಡ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಮಗಳು ನಟನೆಯಲ್ಲಿ ಆಸಕ್ತಿ ಹೊಂದಿದ್ದರೆ, ಪುತ್ರ ಆರ್ಯನ್ ಖಾನ್ಗೆ ನಿರ್ದೇಶನದಲ್ಲಿ ಆಸಕ್ತಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ