ಅತಿಥಿಯಾಗಿ ಕರೆದು ಕಿರುಕುಳ ನೀಡಿದ ಅಂಕಲ್ಸ್: ನಟಿ ಮೌನಿ ರಾಯ್​ಗೆ ಕೆಟ್ಟ ಅನುಭವ

ಕುಟುಂಬವೊಂದು ಮೌನಿ ರಾಯ್ ಅವರನ್ನು ಅತಿಥಿಯಾಗಿ ಕರೆಸಿಕೊಂಡಿದೆ. ಬಳಿಕ ಕಿರುಕುಳ ನೀಡಲಾಗಿದೆ. ಹಿರಿ ವಯಸ್ಸಿನ ಗಂಡಸರು ತಮ್ಮ ಜೊತೆ ಕೆಟ್ಟದಾಗಿ ನಡೆದುಕೊಂಡರು ಎಂದು ಮೌನಿ ರಾಯ್ ಹೇಳಿದ್ದಾರೆ. ಆ ಕಹಿ ಘಟನೆಯ ವಿವರವನ್ನು ಅವರು ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಅದು ವೈರಲ್ ಆಗಿದೆ.

ಅತಿಥಿಯಾಗಿ ಕರೆದು ಕಿರುಕುಳ ನೀಡಿದ ಅಂಕಲ್ಸ್: ನಟಿ ಮೌನಿ ರಾಯ್​ಗೆ ಕೆಟ್ಟ ಅನುಭವ
Mouni Roy

Updated on: Jan 25, 2026 | 9:44 AM

ಬಾಲಿವುಡ್ ನಟಿ ಮೌನಿ ರಾಯ್ ಅವರಿಗೆ ಕೆಟ್ಟ ಅನುಭವ ಆಗಿದೆ. ಮನರಂಜನಾ ಕಾರ್ಯಕ್ರಮ ನೀಡಲು ಅತಿಥಿಯಾಗಿ ಹೋಗಿದ್ದಾಗ ಅವರಿಗೆ ಕಿರುಕುಳ ನೀಡಲಾಗಿದೆ. ಬಹಿರಂಗ ವೇದಿಕೆಯಲ್ಲೇ ಈ ರೀತಿ ಆಗಿದೆ. ಹಿರಿ ವಯಸ್ಸಿನ ಅಂಕಲ್​ಗಳು ಈ ರೀತಿ ಮಾಡಿದ್ದಾರೆ ಎಂದು ಮೌನಿ ರಾಯ್ ಅವರು ಆರೋಪಿಸಿದ್ದಾರೆ. ಹರಿಯಾಣದಲ್ಲಿ ಈ ಘಟನೆ ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಮೌನಿ ರಾಯ್ (Mouni Roy) ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ. ಈ ಘಟನೆಯಿಂದ ತಮಗೆ ಬಹಳ ನೋವಾಗಿದೆ ಎಂದು ಅವರು ಹೇಳಿದ್ದಾರೆ.

‘ಕರ್ನಾಲ್​ನಲ್ಲಿ ಕಾರ್ಯಕ್ರಮಕ್ಕೆ ತೆರಳಿದ್ದಾಗ ತಾತನ ವಯಸ್ಸಿನ ಇಬ್ಬರು ಅಂಕಲ್​​ಗಳ ವರ್ತನೆಯಿಂದ ಅಸಹ್ಯ ಆಗಿದೆ. ನಾನು ವೇದಿಕೆಗೆ ಹೋದಾಗ ಆ ಕುಟುಂಬದ ಸದಸ್ಯರು ನನ್ನ ಜೊತೆ ಫೋಟೋ ತೆಗೆದುಕೊಳ್ಳಲು ಬಂದು ಸೊಂಟಕ್ಕೆ ಕೈ ಹಾಕಿದರು. ನಾನು ವಿರೋಧಿಸಿದ್ದು ಅವರಿಗೆ ಇಷ್ಟ ಆಗಲಿಲ್ಲ. ಇಬ್ಬರು ಅಂಕಲ್​ಗಳು ನನ್ನ ಎದುರು ನಿಂತು ಕೆಟ್ಟದಾಗಿ ಸನ್ನೆ ಮಾಡುತ್ತಿದ್ದರು’ ಎಂದು ಮೌನಿ ರಾಯ್ ಹೇಳಿದ್ದಾರೆ.

‘ಅವರು ಮಾಡಿದ್ದು ಸರಿ ಎನಿಸಲಿಲ್ಲ. ಆ ರೀತಿ ಮಾಡಬೇಡಿ ಎಂದು ನಾನು ನಯವಾಗಿಯೇ ಹೇಳಿದೆ. ಆಗ ಅವರು ನನ್ನ ಕಡೆಗೆ ಹೂವು ಎಸೆಯಲು ಶುರು ಮಾಡಿದರು. ಮಧ್ಯದಲ್ಲೇ ನಾನು ಹೊರಟು ಹೋಗಲು ನಿರ್ಧರಿಸಿದೆ. ಆದರೆ ಕಾರ್ಯಕ್ರಮ ಪೂರ್ಣಗೊಳಿಸಬೇಕು ಅಂತ ವಾಪಸ್ ಬಂದೆ. ಆಗಲೂ ಅವರು ನಿಲ್ಲಿಸಲಿಲ್ಲ’ ಎಂದಿದ್ದಾರೆ ಮೌನಿ ರಾಯ್.

‘ನನ್ನಂಥವರಿಗೆ ಈ ರೀತಿ ಆಗುತ್ತದೆ ಎಂದರೆ, ಈಗತಾನೇ ಬಂದಿರುವ ನಟಿಯರಿಗೆ ಏನಾಗಿರಬಹುದು ಅಂತ ಊಹಿಸಿ. ನನಗೆ ಕಿರುಕುಳ ಆಗಿದೆ. ಬಹಳ ನೋವಾಗಿದೆ. ಇಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಅವರ ಮಗಳ ಜೊತೆ, ಸಹೋದರಿಯರ ಜೊತೆ ಇದೇ ರೀತಿ ಯಾರಾದರೂ ನಡೆದುಕೊಂಡರೆ ಏನು ಮಾಡುತ್ತಾರೆ ಅಂತ ನನಗೆ ಆಶ್ಚರ್ಯ ಆಗುತ್ತಿದೆ’ ಎಂದು ಮೌನಿ ರಾಯ್ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ವೇದಿಕೆಯಲ್ಲಿ ಕೆಜಿಎಫ್ ಹಾಡಿಗೆ ಮೌನಿ ರಾಯ್ ಭರ್ಜರಿ ಡ್ಯಾನ್ಸ್

‘ಆ ವೇದಿಕೆ ಬಹಳ ಎತ್ತರದಲ್ಲಿ ಇತ್ತು. ಈ ಅಂಕಲ್​​ಗಳು ಕೆಳಗಿನಿಂದ ವಿಡಿಯೋ ಮಾಡುತ್ತಿದ್ದರು. ಅದನ್ನು ನಿಲ್ಲಿಸಿ ಅಂತ ಹೇಳಲು ಬಂದವರಿಗೆ ಬೈಯ್ದರು. ನಾನು ನನ್ನ ದೇಶ ಮತ್ತು ಸಂಸ್ಕೃತಿಯನ್ನು ಪ್ರೀತಿಸುತ್ತೇನೆ. ಆದರೆ ಇದು? ಸಾಮಾನ್ಯವಾಗಿ ನೆಗೆಟಿವ್ ವಿಚಾರಗಳನ್ನು ನಾನು ಪೋಸ್ಟ್ ಮಾಡಲ್ಲ. ಆದರೆ ಈ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ. ವಧು-ವರರನ್ನು ಹರಸಲು ನಾವು ಅವರ ಅತಿಥಿಯಾಗಿ ಹೋಗಿರುತ್ತೇನೆ. ಆದರೆ ಅವರು ನಮಗೆ ಕಿರುಕುಳ ನೀಡುತ್ತಾರೆ’ ಎಂದು ಮೌನಿ ರಾಯ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.