ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನೋರಾ ಫತೇಹಿ, ಜಾಕ್ವೆಲಿನ್​ ಫರ್ನಾಂಡಿಸ್​ಗೆ ಸಂಕಷ್ಟ

| Updated By: ರಾಜೇಶ್ ದುಗ್ಗುಮನೆ

Updated on: Oct 14, 2021 | 1:28 PM

ಉದ್ಯಮಿಗಳಿಗೆ 200 ಕೋಟಿ ರೂ. ವಂಚಿಸಿದ ಆರೋಪದಲ್ಲಿ ಸುಕೇಶ್​ ಚಂದ್ರಶೇಖರ್​ ವಿಚಾರಣೆ ಎದುರಿಸುತ್ತಿದ್ದಾರೆ. ಅವರ ಜೊತೆ ಸಂಪರ್ಕದಲ್ಲಿ ಇದ್ದರು ಎಂಬ ಕಾರಣಕ್ಕೆ ಜಾಕ್ವೆಲಿನ್ ಹಾಗೂ ನೋರಾ​ ಮೇಲೂ ಅನುಮಾನ ಮೂಡಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನೋರಾ ಫತೇಹಿ, ಜಾಕ್ವೆಲಿನ್​ ಫರ್ನಾಂಡಿಸ್​ಗೆ ಸಂಕಷ್ಟ
ಜಾಕ್ವೆಲಿನ್-ನೋರಾ ಫತೇಹಿ
Follow us on

ಅಕ್ರಮ ಹಣ ವರ್ಗಾವಣೆ ವಿಚಾರದಲ್ಲಿ ಅನೇಕ ನಟಿಯರ ಹೆಸರು ತಳುಕು ಹಾಕಿಕೊಳ್ಳುತ್ತಿದೆ. ಜನಪ್ರಿಯ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ಅವರಿಗೆ ಇತ್ತೀಚೆಗೆ ಸಮನ್ಸ್​ ನೀಡಲಾಗಿತ್ತು. ಈಗ ನೋರಾ ಫತೇಹಿ ಸರದಿ. ಬರೋಬ್ಬರಿ 200 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದಿದೆ. ಹೀಗಾಗಿ, ಜಾರಿ ನಿರ್ದೇಶನಾಲಯ (ಇಡಿ) ನೋರಾಗೆ ಸಮನ್ಸ್​ ನೀಡಿದೆ. ಇದರ ಜತೆ ಜಾಕ್ವೆಲಿನ್​ ಅವರನ್ನು ಮತ್ತೆ ವಿಚಾರಣೆಗೆ ಕರೆಯಲಾಗಿದೆ.

ಉದ್ಯಮಿಗಳಿಗೆ 200 ಕೋಟಿ ರೂ. ವಂಚಿಸಿದ ಆರೋಪದಲ್ಲಿ ಸುಕೇಶ್​ ಚಂದ್ರಶೇಖರ್​ ವಿಚಾರಣೆ ಎದುರಿಸುತ್ತಿದ್ದಾರೆ. ಅವರ ಜೊತೆ ಸಂಪರ್ಕದಲ್ಲಿ ಇದ್ದರು ಎಂಬ ಕಾರಣಕ್ಕೆ ಜಾಕ್ವೆಲಿನ್ ಹಾಗೂ ನೋರಾ​ ಮೇಲೂ ಅನುಮಾನ ಮೂಡಿದೆ. ಹಾಗಾಗಿ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಶ್ರೀಲಂಕಾ ಮೂಲದ ಜಾಕ್ವೆಲಿನ್​ ಅವರು ಬಾಲಿವುಡ್​ನಲ್ಲಿ ಭಾರಿ ಬೇಡಿಕೆಯ ನಟಿಯಾಗಿದ್ದಾರೆ. ಸಲ್ಮಾನ್​ ಖಾನ್​ ವಲಯದಲ್ಲಿ ಅವರು ಹೆಚ್ಚು ಗುರುತಿಸಿಕೊಂಡಿದ್ದಾರೆ. ಕಿಚ್ಚ ಸುದೀಪ್​ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ಮೂಲಕ ಅವರು ಕನ್ನಡ ಚಿತ್ರರಂಗಕ್ಕೂ ಕಾಲಿಡುತ್ತಿದ್ದಾರೆ. ನೋರಾ ಅವರು ವಿಶೇಷ ಸಾಂಗ್​ಗೆ ಹೆಕ್ಕೆ ಹಾಕುವ ಮೂಲಕ ಗುರುತಿಸಿಕೊಂಡಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈ ಹಿಂದೆ ಜಾಕ್ವೆಲಿನ್​ ಅವರನ್ನು 5 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದರು. ಸೆ.25 ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ ಅವರು ಜಾರಿ ನಿರ್ದೇಶನಾಲಯದ ಕಚೇರಿಗೆ ಬಂದಿರಲಿಲ್ಲ. ಈ ಕಾರಣಕ್ಕೆ ಅವರಿಗೆ ಮತ್ತೆ ನೋಟಿಸ್​ ನೀಡಲಾಗಿದೆ ಎನ್ನಲಾಗಿದೆ.

ಜಾಕ್ವೆಲಿನ್​​ ಫರ್ನಾಂಡಿಸ್ ಹಾಗೂ ನೋರಾ ಜತೆ ಮುಖ್ಯ ಆರೋಪಿ ಸುಕೇಶ್​ ಚಂದ್ರಶೇಖರ್​ ಹಲವು ಬಾರಿ ದೂರವಾಣಿ ಮೂಲಕ ಮಾತನಾಡಿರುವುದು ಅಧಿಕಾರಿಗಳಿಗೆ ತಿಳಿದುಬಂದಿದೆ. ಇಬ್ಬರ ನಡುವಿನ ವ್ಯವಹಾರ ಯಾವ ರೀತಿ ಇತ್ತು? 200 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಇವರ​ ಕೈವಾಡ ಇದೆಯೋ ಇಲ್ಲವೋ ಎಂಬುದನ್ನು ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ. ಸುಕೇಶ್​ ಚಂದ್ರಶೇಖರ್ ಒಡೆತನದಲ್ಲಿ ಇದ್ದ ಚೆನ್ನೈನ ಬಂಗಲೆ, 82 ಲಕ್ಷ ರೂ. ಹಣ ಹಾಗೂ 10ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಇಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ; ‘ವಿಕ್ರಾಂತ್​ ರೋಣ’ ನಟಿ ಜಾಕ್ವೆಲಿನ್​ ಫರ್ನಾಂಡಿಸ್ ವಿಚಾರಣೆ