
ಬಾಲಿವುಡ್ ನಟಿ ಕರೀನಾ ಕಪೂರ್ ವಿರುದ್ಧ ಮಧ್ಯಪ್ರದೇಶ ಕಾಂಗ್ರೆಸ್ ವಕ್ತಾರ ಅಬ್ಬಾಸ್ ಹಫೀಜ್ ದೂರು ನೀಡಿದ್ದು ಕರೀನಾ ಅವರಿಗೆ ನೋಟಿಸ್ ಕಳುಹಿಸಿದ್ದಾರೆ. ಇತ್ತೀಚೆಗಷ್ಟೆ ನಟಿ ಕರೀನಾ ತಮ್ಮ ಸಾಮಾಜಿಕ ಜಾಲತಾಣದ ಫೋಟೋಗಳಲ್ಲಿ ಕುರಾನ್‌ನ ಶ್ಲೋಕವಿರುವ ದೊಡ್ಡ ಪುರಾತನ ಪಚ್ಚೆ ಪೆಂಡೆಂಟ್ ಧರಿಸಿದ್ದರು. ಇದೇ ಕಾರಣಕ್ಕೆ ನಟಿ ಕರೀನಾ ವಿರುದ್ಧ ಅಬ್ಬಾಸ್ ಹಫೀಜ್ ದೂರು ನೀಡಿದ್ದಾರೆ. ನಟಿಯು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕರೀನಾ ಕಪೂರ್ ಧರಿಸಿದ್ದ ಆಭರಣದ ಬಗ್ಗೆ ತಮ್ಮ ಆಕ್ಷೇಪವಿಲ್ಲ, ಆದರೆ ಧಾರ್ಮಿಕ ಬರಹವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶಿಸಿದ ರೀತಿಗೆ ಆಕ್ಷೇಪವಿದೆ, ಇದರಿಂದ ಮುಸ್ಲಿಂ ಸಮುದಾಯದ ಭಾವನೆಗಳಿಗೆ ನೋವಾಗಿದೆ ಎಂದು ಅಬ್ಬಾಸ್ ಹಫೀಜ್ ದೂರಿದ್ದಾರೆ. ಹಫೀಜ್ ಅವರ ವಕೀಲ ಮೊಹಮ್ಮದ್ ಜಫರ್ ಅವರ ಪ್ರಕಾರ, ಪೆಂಡೆಂಟ್‌ನಲ್ಲಿರುವುದು ಇಸ್ಲಾಂನಲ್ಲಿ ಪವಿತ್ರವೆಂದು ಪರಿಗಣಿತವಾದ ಪವಿತ್ರ ಕುರಾನ್‌ನ ಶ್ಲೋಕ. ಪವಿತ್ರ ಗ್ರಂಥಗಳನ್ನು ಮುಟ್ಟುವ ಅಥವಾ ಪಠಿಸುವ ಮೊದಲು ವುಜೂ (ಶುದ್ಧೀಕರಣ) ಮಾಡಬೇಕೆಂದು ಧಾರ್ಮಿಕ ಪದ್ಧತಿ ಹೇಳುತ್ತದೆ ಆದರೆ ಕರೀನಾ ಅದನ್ನು ಪಾಲಿಸಿಲ್ಲ ಎಂದಿದ್ದಾರೆ.
ಫೋಟೋಗಳು ಮತ್ತು ಸಂಬಂಧಿತ ಪೋಸ್ಟ್‌ಗಳನ್ನು ತೆಗೆಯಬೇಕು, ಕ್ಷಮೆ ಕೇಳಬೇಕು ಮತ್ತು ಧಾರ್ಮಿಕ ಬರಹವನ್ನು ಅಗೌರವವೆಂದು ಪರಿಗಣಿಸಬಹುದಾದ ರೀತಿಯಲ್ಲಿ ಪ್ರದರ್ಶಿಸುವುದಿಲ್ಲ ಎಂದು ಭರವಸೆ ನೀಡಬೇಕು ಎಂದು ನಟಿಗೆ ನೀಡಲಾಗಿರುವ ನೊಟೀಸ್ನಲ್ಲಿ ಒತ್ತಾಯಿಸಲಾಗಿದೆ. ಕರೀನಾ ಅವರು ಧರಿಸಿದ್ದ ಪೆಂಡೆಂಟ್ ಭೋಪಾಲ್‌ನ ಬೇಗಂಗಳ ಪರಂಪರೆಗೆ ಸಂಬಂಧಿಸಿದ್ದು, ಅದನ್ನು ಫ್ಯಾಷನ್ ಆಭರಣವಾಗಿ ಅಲ್ಲ, ನಂಬಿಕೆಯ ಅಭಿವ್ಯಕ್ತಿಯಾಗಿ ಧರಿಸಲಾಗುತ್ತಿತ್ತು ಎಂದು ಹಫೀಜ್ ಹೇಳಿದ್ದಾರೆ. ಆದರೆ ಇದು ತಮ್ಮ ವೈಯಕ್ತಿಕ ಕ್ರಮ, ಇದನ್ನು ಕಾಂಗ್ರೆಸ್ ಪಕ್ಷ, ಅದರ ಸಿದ್ಧಾಂತ ಅಥವಾ ರಾಜಕೀಯ ನಿಲುವಿನೊಂದಿಗೆ ಸಂಬಂಧಿಸಬಾರದು ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:15 ವರ್ಷಗಳ ಬಳಿಕ ಮತ್ತೆ ಶಾರುಖ್ ಖಾನ್ ಜೊತೆ ನಟಿಸುತ್ತಿದ್ದಾರೆ ಕರೀನಾ ಕಪೂರ್
ವಿವಾದವು ಸೆಲೆಬ್ರಿಟಿ ಸ್ಟೈಲಿಸ್ಟ್ ರಿಯಾ ಕಪೂರ್ ಅವರು ಸುಮಾರು 200 ವರ್ಷ ಹಳೆಯ ಭೋಪಾಲ್ ರಾಜಮನೆತನದ ಪರಂಪರೆಯ ಆಭರಣ ಎಂದು ವಿವರಿಸಿದ ಪಚ್ಚೆ ಪೆಂಡೆಂಟ್ ಸುತ್ತ ಇದೆ. ದೀಪಾವಳಿ ಲುಕ್‌ನ ಭಾಗವಾಗಿ ಕರೀನಾ ಆ ಆಭರಣ ಧರಿಸಿದ ಫೋಟೋಗಳನ್ನು ಕರೀನಾ ಧರಿಸಿದ್ದರು. ಭೋಪಾಲ್‌ನ ರಾಜಮನೆತನದೊಂದಿಗೆ ಕರೀನಾ ಅವರ ಪತಿ ಸೈಫ್ ಅಲಿ ಖಾನ್ ಅವರ ಪಟೌಡಿ ಕುಟುಂಬಕ್ಕೆ ನಂಟು ಇದೆ. ಇದೇ ಕಾರಣಕ್ಕೆ ಕರೀನಾ ಆ ಆಭರಣಗಳನ್ನು ಧರಿಸಿದ್ದರು.
ಇದರ ನಡುವೆ, ಹಿಂದೂ ಉತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ತಿವಾರಿ ಅವರು ಕರೀನಾಗೆ ಬೆಂಬಲ ಸೂಚಿಸಿದ್ದು, ಅವರು ಯಾರಿಗೂ ಕ್ಷಮೆ ಕೇಳುವ ಅಗತ್ಯವಿಲ್ಲ ಎಂದಿದ್ದಾರೆ. ‘ಪೆಂಡೆಂಟ್ ಅನ್ನು ಕುತ್ತಿಗೆಯಲ್ಲಿ, ಹೃದಯಕ್ಕೆ ಹತ್ತಿರ ಧರಿಸಲಾಗುತ್ತದೆ. ಅದರಲ್ಲಿ ಕುರಾನ್ ಶ್ಲೋಕಗಳಿದ್ದರೆ, ಅಗೌರವವೆಂದು ಪರಿಗಣಿಸಬಹುದಾದ ಯಾವುದೇ ಸ್ಥಳದಲ್ಲಿ ಅವರು ಅದನ್ನು ಧರಿಸುತ್ತಿರಲಿಲ್ಲ. ಅವರು ಯಾರಿಗೂ ಕ್ಷಮೆ ಕೇಳುವ ಅಗತ್ಯವಿಲ್ಲ, ಕರೀನಾ ಭೋಪಾಲ್‌ನ ಹಿಂದಿನ ರಾಜಮನೆತನದ ಸೊಸೆಯಾಗಿರುವುದರಿಂದ, ತಮ್ಮ ಅತ್ತೆಗೆ ಸೇರಿದ ಆಭರಣಗಳನ್ನು ಧರಿಸುವುದು ಸಹಜ’ ಎಂದು ತಿವಾರಿ ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ