ಸಲ್ಮಾನ್ ಖಾನ್ ಮನೆಯಲ್ಲಿ ವಾಸವಿದ್ದ ಅಗಂತುಕ, ಯಾರಿಗೂ ಗೊತ್ತೇ ಆಗಿರಲಿಲ್ಲ!

Salman Khan: ನಟ ಸಲ್ಮಾನ್ ಖಾನ್ ಮನೆಗೆ ಈಗ ಬಿಗಿ ಭದ್ರತೆ ಇದೆ. ಆದರೆ ಒಮ್ಮೆ ಸಲ್ಮಾನ್ ಖಾನ್ ಮನೆಯಲ್ಲಿ ಒಬ್ಬ ಅಗಂತುಕ ಸುಮಾರು ಒಂದು ವಾರಕ್ಕೂ ಹೆಚ್ಚು ಕಾಲ ವಾಸವಿದ್ದನಂತೆ. ಆತ ಯಾರೆಂಬುದು ಸಲ್ಮಾನ್ ಖಾನ್ ಕುಟುಂಬದ ಯಾರಿಗೂ ಗೊತ್ತಾಗಿರಲಿಲ್ಲವಂತೆ. ಆದರೆ ಅದು ಗೊತ್ತಾಗಿದ್ದು ಹೇಗೆ? ಈ ಬಗ್ಗೆ ಸ್ವತಃ ಸಲ್ಮಾನ್ ಖಾನ್ ಅವರೇ ವಿವರಿಸಿದ್ದರು. ಇಲ್ಲಿದೆ ನೋಡಿ ಮಾಹಿತಿ....

ಸಲ್ಮಾನ್ ಖಾನ್ ಮನೆಯಲ್ಲಿ ವಾಸವಿದ್ದ ಅಗಂತುಕ, ಯಾರಿಗೂ ಗೊತ್ತೇ ಆಗಿರಲಿಲ್ಲ!
Salman Khan

Updated on: Nov 13, 2025 | 3:32 PM

ಸಲ್ಮಾನ್ ಖಾನ್ (Salman Khan) ಮನೆಯ ಮುಂದೆ ಈಗ ಪ್ರತಿದಿನ, ಪ್ರತಿ ಗಂಟೆಯೂ ಕಾವಲಿಗೆ ಪೊಲೀಸರು, ಖಾಸಗಿ ಭದ್ರತೆಯವರು ಇದ್ದೇ ಇರುತ್ತಾರೆ. ಅವರ ಮನೆಗೆ ಹೋಗುವ ಪ್ರತಿಯೊಬ್ಬರ ತಪಾಸಣೆ ಮಾಡಲಾಗುತ್ತದೆ. ಸಲ್ಮಾನ್ ಖಾನ್​​ಗೆ ಕೊಲೆ ಬೆದರಿಕೆ ಮತ್ತು ಹತ್ಯಾ ಯತ್ನಗಳು ನಡೆದ ಬಳಿಕ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಆದರೆ ಕೆಲ ವರ್ಷಗಳ ಹಿಂದಷ್ಟೆ ಸಲ್ಮಾನ್ ಖಾನ್ ಅವರ ಮನೆಯಲ್ಲಿ ಅಗಂತುಕನೊಬ್ಬ ವಾರಗಳ ಕಾಲ ವಾಸವಿದ್ದ. ಆ ವ್ಯಕ್ತಿ ಯಾರೆಂಬುದು ಸಹ ಸಲ್ಮಾನ್ ಆಗಲಿ ಅವರ ಕುಟುಂಬಕ್ಕಾಗಲಿ ಗೊತ್ತೇ ಇರಲಿಲ್ಲ.

ಈ ಬಗ್ಗೆ ಸ್ವತಃ ಸಲ್ಮಾನ್ ಖಾನ್, ಕಪಿಲ್ ಶರ್ಮಾ ಶೋನಲ್ಲಿ ಒಮ್ಮೆ ಹೇಳಿಕೊಂಡಿದ್ದರು. ‘ಕೆಲ ವರ್ಷಗಳ ಹಿಂದಷ್ಟೆ ನಮ್ಮ ಮನೆಯಲ್ಲಿ ಒಂದು ಪಾರ್ಟಿ ಆಗಿತ್ತು. ಕೆಲವಾರು ಗೆಳೆಯರು ಪಾರ್ಟಿಗೆ ಬಂದಿದ್ದರು. ನನ್ನ ಸಹೋದರರಾದ ಅರ್ಬಾಜ್ ಖಾನ್, ಸೋಹೈಲ್ ಇನ್ನೂ ಕೆಲವರೆಲ್ಲ ಪಾರ್ಟಿಯಲ್ಲಿ ಇದ್ದರು. ಕೆಲವು ಗೆಳೆಯರು ಅಂದು ಮನೆಯಲ್ಲೇ ಉಳಿದರು. ಪಾರ್ಟಿ ಆಗಿ ಒಂದು ವಾರದ ಬಳಿಕ ಒಮ್ಮೆ ಇಡೀ ಕುಟುಂಬದವರು ಕುಳಿತು ಊಟ ಮಾಡುತ್ತಿದ್ದೆವು. ಊಟಕ್ಕೆ ಕೂತಿದ್ದ ವ್ಯಕ್ತಿಯೊಬ್ಬ, ‘ಇಂದು ಊಟ ನಿನ್ನೆಯಷ್ಟು ಚೆನ್ನಾಗಿಲ್ಲ. ಇಂದು ಸ್ವಲ್ಪ ಖಾರ ಹೆಚ್ಚಾಗಿದೆ’ ಎಂದ. ಇದು ನನಗೆ ತುಸು ಶಾಕ್ ಆಯ್ತು’ ಎಂದು ಸಲ್ಮಾನ್ ಖಾನ್ ವಿವರಿಸಿದ್ದಾರೆ.

‘ಆದರೆ ನಮ್ಮೊಂದಿಗೆ ಊಟಕ್ಕೆ ಕೂತಿದ್ದ ಆ ವ್ಯಕ್ತಿ ಯಾರೆಂದು ನನಗೆ ಗೊತ್ತಿರಲಿಲ್ಲ. ನಾನು ಅರ್ಬಾಜ್ ಗೆಳೆಯ ಇರಬಹುದೆಂದು ಅಲ್ಲೇ ಇದ್ದ ಅರ್ಬಾಜ್ ಅನ್ನು ಸಂಜ್ಞೆಯಲ್ಲಿ ಯಾರೆಂದು ಕೇಳಿದೆ, ಅದಕ್ಕೆ ಅರ್ಬಾಜ್ ಗೊತ್ತಿಲ್ಲ ಎಂದ. ಬಳಿಕ ಸೋಹೆಲ್ ಅನ್ನು ಕೇಳಿದೆ ಸೋಹೆಲ್ ಸಹ ನನಗೆ ಗೊತ್ತಿಲ್ಲ ಎಂದ. ಬಳಿಕ ತಂಗಿ ಅಲ್ವೀರಾ ಗೆಳೆಯ ಇರಬೇಕೆಂದು ಆಕೆಯನ್ನೂ ಕೇಳಿದೆ ಆಕೆಯೂ ನನಗೆ ಗೊತ್ತಿಲ್ಲ ಅಣ್ಣ ಎಂದಳು. ಬಳಿಕ ಆ ವ್ಯಕ್ತಿಯನ್ನು ಯಾರಪ್ಪ ನೀನು? ಎಂದು ಕೇಳಿದಾಗ, ಆತ, ‘ಇಲ್ಲ ನಾನು ಒಂದು ವಾರದ ಹಿಂದೆ ಪಾರ್ಟಿ ನಡೆಯಿತಲ್ಲ, ಆಗ ನಿಮ್ಮ ಗೆಳೆಯರೊಬ್ಬರೊಟ್ಟಿಗೆ ಬಂದಿದ್ದೆ. ಆದರೆ ನನಗೆ ಈ ಮನೆ, ಇಲ್ಲಿನ ಆತಿಥ್ಯ ಇಷ್ಟವಾಯ್ತು. ಹಾಗಾಗಿ ನಾನು ಇಲ್ಲೇ ಉಳಿದುಬಿಟ್ಟೆ’ ಎಂದನಂತೆ.

ಇದನ್ನೂ ಓದಿ:ಸಲ್ಮಾನ್ ಖಾನ್ ಫಾರ್ಮ್​ ಹೌಸ್ ಒಳಗೆ ಪಾರ್ಟಿ ಹೇಗೆ ನಡೆಯುತ್ತೆ? ವಿವರಿಸಿದ ನಟಿ

ಆದರೆ ಮನೆಯ ಯಾರೂ ಸಹ ಒಂದು ವಾರದ ವರೆಗೆ ಆತ ಯಾರು? ಏಕೆ ಇಲ್ಲಿದ್ದಾನೆ ಎಂದು ಕೇಳಿಯೇ ಇರಲಿಲ್ಲವಂತೆ. ಸಲ್ಮಾನ್ ಖಾನ್, ಬಹುಷಃ ಆತ ಅರ್ಬಾಜ್ ಅಥವಾ ಸೋಹೆಲ್ ಗೆಳೆಯ ಇರಬೇಕು ಎಂದುಕೊಂಡಿದ್ದರಂತೆ. ಇನ್ನು ಅರ್ಬಾಜ್ ಮತ್ತು ಸೋಹೆಲ್ ಸಹ ಹೀಗೆಯೇ ಅಂದುಕೊಂಡಿದ್ದರಂತೆ. ಹಾಗಾಗಿ ಆ ವ್ಯಕ್ತಿಯನ್ನು ಯಾರು ನೀನು ಎಂದು ಯಾರೂ ಸಹ ಪ್ರಶ್ನೆ ಮಾಡದೆ, ಒಂದು ವಾರಗಳ ಕಾಲ ಚೆನ್ನಾಗಿ ಉಪಚಾರ ಮಾಡಿದ್ದಾರೆ.

ಸಲ್ಮಾನ್ ಖಾನ್ ಮನೆ ಮತ್ತು ಅವರ ಫಾರಂ ಹೌಸ್​​ನಲ್ಲಿ ಪಾರ್ಟಿಗಳು ನಡೆಯುತ್ತಲೇ ಇರುತ್ತವೆ. ಸಲ್ಮಾನ್ ಖಾನ್ ಅವರ ಪಾರ್ಟಿಗಳು ಬಾಲಿವುಡ್​ನಲ್ಲಿ ಬಹಳ ಫೇಮಸ್. ಆದರೆ ಇದೀಗ ಸಲ್ಮಾನ್ ಖಾನ್ ಅವರಿಗೆ ಕೊಲೆ ಬೆದರಿಕೆಗಳು ಬಂದ ಬಳಿಕ ಹಾಗೂ ಕೆಲ ಬಾರಿ ಹತ್ಯಾ ಪ್ರಯತ್ನ ಸಹ ನಡೆದಿವೆ. ಹಾಗಾಗಿ ಇತ್ತೀಚೆಗೆ ಸಲ್ಮಾನ್ ಖಾನ್ ಮನೆಯಲ್ಲಿ ಪಾರ್ಟಿಗಳು ಕಡಿಮೆ ಆಗಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ