ಬಾಲಿವುಡ್ನಲ್ಲಿ ನಟ ಪಂಕಜ್ ತ್ರಿಪಾಠಿ (Pankaj Tripathi) ಅವರು ಸಖತ್ ಜನಪ್ರಿಯತೆ ಗಳಿಸಿದ್ದಾರೆ. ಅವರಿಗೆ ತುಂಬ ಡಿಮ್ಯಾಂಡ್ ಇದೆ. ಎಲ್ಲ ಬಗೆಯ ಪಾತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ‘ಇಂಡಿಯಾ ಟಿವಿ’ ನಡೆಸಿದ ಸಂದರ್ಶನದಲ್ಲಿ ಪಂಕಜ್ ತ್ರಿಪಾಠಿ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬಾಲ್ಯವನ್ನು ಹಳ್ಳಿಯಲ್ಲಿ ಕಳೆದ ಅವರಿಗೆ ಕೆಲವು ವಿಶೇಷ ಅನುಭವಗಳು ಆಗಿದ್ದವು. ಅಚ್ಚರಿ ಏನೆಂದರೆ, ಈಜು ( Swimming) ಕಲಿಯಬೇಕು ಎಂದು ಪಂಕಜ್ ತ್ರಿಪಾಠಿ ಅವರು ಕೀಟಗಳನ್ನು (Insects) ತಿಂದಿದ್ದರು! ಆ ಘಟನೆಯನ್ನು ಅವರು ಈಗ ಮೆಲುಕು ಹಾಕಿದ್ದಾರೆ.
ಶಾಲಾ ದಿನಗಳಲ್ಲಿ ಈಜು ಕಲಿಯಬೇಕು ಎಂಬುದು ಪಂಕಜ್ ತ್ರಿಪಾಠಿ ಅವರ ಗುರಿ ಆಗಿತ್ತು. ಅದಕ್ಕಾಗಿ ಅವರು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದರು. ಒಮ್ಮೆ ಗೆಳೆಯರು ನೀಡಿದ ಸಲಹೆಯನ್ನು ಸ್ವೀಕರಿಸಿ ಅವರು ಕೀಟಗಳನ್ನು ನೀರಿನಲ್ಲಿ ಹಾಕಿಕೊಂಡು ಕುಡಿದಿದ್ದರು. ‘ನಮ್ಮ ಮನೆಯ ಹಿಂಬದಿಯಲ್ಲಿ ನದಿ ಇತ್ತು. ಆ ನದಿಯ ನೀರಿನ ಮೇಲೆ ಚಿಕ್ಕ ಕಪ್ಪು ಕೀಟಗಳು ಇರುತ್ತಿದ್ದವು. ಆ ಊರಿನ ಮಕ್ಕಳು ಭಾರಿ ತುಂಟರಾಗಿದ್ದರು. ಆ ಕೀಟಗಳನ್ನು ತಿಂದರೆ ಈಜು ಕಲಿಯಬಹುದು ಅಂತ ಅವರು ಸಲಹೆ ನೀಡಿದರು’ ಎಂದಿದ್ದಾರೆ ಪಂಜಕ್ ತ್ರಿಪಾಠಿ.
ಇದನ್ನೂ ಓದಿ: Pankaj Tripathi: ಸೌತ್ ಸಿನಿಮಾ ಒಪ್ಪಿಕೊಳ್ಳದೇ ಇರಲು ಬಹಿರಂಗ ವೇದಿಕೆಯಲ್ಲಿ ಕಾರಣ ತಿಳಿಸಿದ ಪಂಕಜ್ ತ್ರಿಪಾಠಿ
‘ನಾನು 10-12 ಕೀಟಗಳನ್ನು ಹಿಡಿದು, ನೀರಿನಲ್ಲಿ ಹಾಕಿಕೊಂಡು ಕುಡಿದೆ. ಪುಣ್ಯಕ್ಕೆ ನನ್ನ ಹೊಟ್ಟೆ ಹಾಳಾಗಲಿಲ್ಲ’ ಎಂದು ಆ ದಿನಗಳನ್ನು ಪಂಕಜ್ ತ್ರಿಪಾಠಿ ನೆನಪಿಸಿಕೊಂಡಿದ್ದಾರೆ. ಇನ್ನೊಂದು ಇಂಟರೆಸ್ಟಿಂಗ್ ವಿಚಾರ ಏನೆಂದರೆ, ಪಂಕಜ್ ಅವರ ಸರ್ನೇಮ್ ತ್ರಿಪಾಠಿ ಆಗಿರಲಿಲ್ಲ. ತಿವಾರಿ ಎಂಬುದು ಅವರ ಸರ್ನೇಮ್ ಆಗಿತ್ತು. ಅದನ್ನು ಬದಲಾಯಿಸಿಕೊಂಡಿದ್ದು ಯಾಕೆ ಎಂಬುದನ್ನು ಕೂಡ ಅವರೀಗ ವಿವರಿಸಿದ್ದಾರೆ.
‘ನನ್ನ ರೀತಿ ತಿವಾರಿ ಎಂದು ಹೆಸರು ಇಟ್ಟುಕೊಂಡಿದ್ದವರೆಲ್ಲ ಪೂಜಾರಿ ಆಗಿದ್ದರು ಅಥವಾ ರೈತರಾಗಿದ್ದರು. ನನಗೆ ಆ ವೃತ್ತಿ ಮಾಡಲು ಇಷ್ಟ ಇರಲಿಲ್ಲ. ನನ್ನ ಅಂಕಲ್ ಸರ್ನೇಮ್ ತ್ರಿಪಾಠಿ ಆಗಿತ್ತು. ಅವರು ಸರ್ಕಾರಿ ನೌಕರ ಆಗಿದ್ದರು. ಅದೇ ಹೆಸರಿನ ಇನ್ನೊಬ್ಬರು ಹಿಂದಿ ಪ್ರೊಫೆಸರ್ ಆಗಿದ್ದರು. ಹಾಗಾಗಿ ನಾನು ಕೂಡ ತ್ರಿಪಾಠಿ ಅಂತ ಸರ್ನೇಮ್ ಬದಲಿಸಿಕೊಂಡೆ’ ಎಂದು ಪಂಕಜ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ