Pankaj Tripathi: ಸೌತ್ ಸಿನಿಮಾ ಒಪ್ಪಿಕೊಳ್ಳದೇ ಇರಲು ಬಹಿರಂಗ ವೇದಿಕೆಯಲ್ಲಿ ಕಾರಣ ತಿಳಿಸಿದ ಪಂಕಜ್ ತ್ರಿಪಾಠಿ
South Indian Movies | IFFI Goa: ಪಂಕಜ್ ತ್ರಿಪಾಠಿ ಅವರು ದಕ್ಷಿಣ ಭಾರತದ ಹೆಚ್ಚು ಸಿನಿಮಾಗಳಲ್ಲಿ ನಟಿಸಿಲ್ಲ. ಒಂದು ವೇಳೆ ಅವರು ಸೌತ್ ಚಿತ್ರಗಳನ್ನು ಒಪ್ಪಿಕೊಳ್ಳಬೇಕು ಎಂದರೆ ಒಂದು ಕಂಡೀಷನ್ ಇದೆ.
ನಟ ಪಂಕಜ್ ತ್ರಿಪಾಠಿ (Pankaj Tripathi) ಅವರು ಸಿನಿಮಾ ಮತ್ತು ವೆಬ್ ಸೀರಿಸ್ಗಳ ಮೂಲಕ ಮನೆಮಾತಾಗಿದ್ದಾರೆ. ಪೋಷಕ ಪಾತ್ರಗಳಲ್ಲಿ ಅವರು ಮಿಂಚುತ್ತಿದ್ದಾರೆ. ಹಿಂದಿಯಲ್ಲಿ ಬಹುಬೇಡಿಕೆಯ ನಟನಾಗಿರುವ ಅವರಿಗೆ ದಕ್ಷಿಣ ಭಾರತದಿಂದಲೂ ಆಫರ್ ಹೋಗುತ್ತಿದೆ. ಆದರೆ ಅದನ್ನು ಅವರು ಒಪ್ಪಿಕೊಳ್ಳುತ್ತಿಲ್ಲ. ಸೌತ್ ಸಿನಿಮಾಗಳಲ್ಲಿ (South Indian Movies) ಕೆಲಸ ಮಾಡಲು ಅವರು ಹಿಂದೇಟು ಹಾಕುತ್ತಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಅವರು ಈಗ ಬಹಿರಂಗ ಪಡಿಸಿದ್ದಾರೆ. ಗೋವಾದಲ್ಲಿ ‘ಅಂತಾರಾಷ್ಟ್ರೀಯ ಭಾರತೀಯ ಸಿನಿಮೋತ್ಸವ’ (IFFI) ನಡೆಯುತ್ತಿದೆ. ಇದರ ಅಂಗವಾಗಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪಂಕಜ್ ತ್ರಿಪಾಠಿ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಭಾಷೆಯ ಸಮಸ್ಯೆಯಿಂದಾಗಿ ತಾವು ದಕ್ಷಿಣದ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಪಂಕಜ್ ತ್ರಿಪಾಠಿ ಅವರು ಮೂಲತಃ ಬಿಹಾರದವರು. ಹಿಂದಿ ಭಾಷೆಯ ಮೇಲೆ ಅವರಿಗೆ ಹಿಡಿತ ಇದೆ. ಆದರೆ ಬೇರೆ ಭಾಷೆಗಳು ಅವರಿಗೆ ಅಷ್ಟಾಗಿ ತಿಳಿಯುವುದಿಲ್ಲ. ಈ ಕಾರಣದಿಂದಲೇ ದಕ್ಷಿಣ ಭಾರತದ ಸಿನಿಮಾಗಳನ್ನು ಪಂಕಜ್ ತ್ರಿಪಾಠಿ ಒಪ್ಪಿಕೊಳ್ಳುತ್ತಿಲ್ಲ. ತೆಲುಗು, ತಮಿಳಿನಲ್ಲಿ ಅವರು ಒಂದೆರಡು ಚಿತ್ರಗಳನ್ನು ಮಾತ್ರ ಮಾಡಿದ್ದಾರೆ.
‘ನನಗೆ ಭಾಷೆಯ ಗಡಿ ಇಲ್ಲ. ಆದರೆ ನಾನು ಹಿಂದಿಗೆ ಮೊದಲ ಆದ್ಯತೆ ನೀಡುತ್ತೇನೆ. ಯಾಕೆಂದರೆ ಹಿಂದಿ ನನಗೆ ತುಂಬ ಚೆನ್ನಾಗಿ ತಿಳಿಯುತ್ತದೆ. ಅದರ ಭಾವನೆಗಳನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಹಾಲಿವುಡ್ ವಿಚಾರ ಬಿಡಿ, ಮಲಯಾಳಂ ಮತ್ತು ತೆಲುಗಿನಿಂದಲೂ ನನಗೆ ಆಫರ್ ಬರುತ್ತದೆ. ಆ ಭಾಷೆಗಳನ್ನು ನಾನು ಮಾತನಾಡಲು ಸಾಧ್ಯವಿಲ್ಲದ ಕಾರಣ ಆ ಪಾತ್ರಗಳಿಗೆ ನನ್ನಿಂದ ನ್ಯಾಯ ಒದಗಿಸಲು ಆಗಲ್ಲ ಎನಿಸುತ್ತದೆ’ ಎಂದು ಪಂಕಜ್ ತ್ರಿಪಾಠಿ ಹೇಳಿದ್ದಾರೆ.
ಪಂಕಜ್ ತ್ರಿಪಾಠಿ ಅವರ ಅತ್ಯುತ್ತಮ ನಟನೆಯಿಂದಾಗಿ ಅವರು ದಕ್ಷಿಣ ಭಾರತದಲ್ಲೂ ಖ್ಯಾತಿ ಹೊಂದಿದ್ದಾರೆ. ಒಂದು ವೇಳೆ ಅವರು ಸೌತ್ ಸಿನಿಮಾಗಳಲ್ಲಿ ಅಭಿನಯಿಸಬೇಕು ಎಂದರೆ ಒಂದು ಕಂಡೀಷನ್ ಇದೆ. ‘ಹಿಂದಿಯಲ್ಲಿ ಮಾತನಾಡುವ ಪಾತ್ರವನ್ನು ಯಾರಾದರೂ ನನಗೆ ನೀಡಿದರೆ ಯಾವುದೇ ಭಾಷೆಯ ಸಿನಿಮಾದಲ್ಲಿ ನಟಿಸಲು ನಾನು ಸಿದ್ಧ’ ಎಂದು ಪಂಕಜ್ ತ್ರಿಪಾಠಿ ಹೇಳಿದ್ದಾರೆ.
‘ಸೇಕ್ರೆಡ್ ಗೇಮ್ಸ್’, ‘ಮಿರ್ಜಾಪುರ್’, ‘ಕ್ರಿಮಿನಲ್ ಜಸ್ಟೀಸ್’ ಮುಂತಾದ ವೆಬ್ ಸಿರೀಸ್ಗಳಲ್ಲಿ ಪಂಕಜ್ ತ್ರಿಪಾಠಿ ಅವರ ನಟನೆಯನ್ನು ಅಭಿಮಾನಿಗಳು ಸಖತ್ ಮೆಚ್ಚಿಕೊಂಡಿದ್ದಾರೆ. ‘ಮಿಮಿ’, ‘83’, ‘ಸ್ತ್ರೀ’ ಮುಂತಾದ ಸಿನಿಮಾಗಳಲ್ಲಿ ಅವರು ಗಮನಾರ್ಹ ಪಾತ್ರಗಳನ್ನು ನಿಭಾಯಿಸಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಂದಿ ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಕಾರಣದಿಂದಲೂ ಅವರಿಗೆ ಬೇರೆ ಭಾಷೆಯ ಚಿತ್ರಗಳನ್ನು ಒಪ್ಪಿಕೊಳ್ಳಲು ಕಷ್ಟ ಆಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:43 am, Wed, 23 November 22