AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

99ನೇ ವಯಸ್ಸಿಗೆ ಪಂಕಜ್​ ತ್ರಿಪಾಠಿ ತಂದೆ ನಿಧನ; ‘ಒಎಂಜಿ 2’ ಗೆಲುವಿನ ನಡುವೆ ಆವರಿಸಿತು ಶೋಕ

ತಂದೆಯ ನಿಧನದ ಸುದ್ದಿ ಬಂದಾಗ ಪಂಕಜ್​ ತ್ರಿಪಾಠಿ ಅವರು ಉತ್ತರಖಂಡದಲ್ಲಿ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ಕೂಡಲೇ ಅವರು ಬಿಹಾರದ ತಮ್ಮ ಹಳ್ಳಿಗೆ ತೆರಳಿದಿದ್ದಾರೆ. ಸೋಮವಾರ ಪಂಡಿತ್​ ಬನಾರಸ್​ ತಿವಾರಿ ಅವರ ಅಂತ್ಯಕ್ರಿಯೆ ನಡೆದಿದೆ. ಅಕ್ಷಯ್​ ಕುಮಾರ್​ ಸೇರಿದಂತೆ ಅನೇಕರು ಪಂಕಜ್​ ತ್ರಿಪಾಠಿಗೆ ಸಾಂತ್ವನ ಹೇಳಿದ್ದಾರೆ.

99ನೇ ವಯಸ್ಸಿಗೆ ಪಂಕಜ್​ ತ್ರಿಪಾಠಿ ತಂದೆ ನಿಧನ; ‘ಒಎಂಜಿ 2’ ಗೆಲುವಿನ ನಡುವೆ ಆವರಿಸಿತು ಶೋಕ
ಪಂಡಿತ್​ ಬನಾರಸ್​ ತಿವಾರಿ, ಪಂಕಜ್​ ತ್ರಿಪಾಠಿ
ಮದನ್​ ಕುಮಾರ್​
|

Updated on: Aug 22, 2023 | 11:29 AM

Share

ಖ್ಯಾತ ನಟ ಪಂಕಜ್​ ತ್ರಿಪಾಠಿ (Pankaj Tripathi) ಅವರು ಬಾಲಿವುಡ್​ನಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಅವರ ಮನೆಯಲ್ಲಿ ಈಗ ಶೋಕದ ವಾತಾವರಣ ನಿರ್ಮಾಣ ಆಗಿದೆ. ಪಂಕಜ್​ ತ್ರಿಪಾಠಿ ಅವರ ತಂದೆ ಪಂಡಿತ್​ ಬನಾರಸ್​ ತಿವಾರಿ ನಿಧನರಾಗಿದ್ದಾರೆ. ಅವರಿಗೆ 99 ವರ್ಷ ವಯಸ್ಸಾಗಿತ್ತು. ಸೋಮವಾರ (ಆಗಸ್ಟ್​ 21) ಪಂಡಿತ್​ ಬನಾರಸ್​ ತಿವಾರಿ (Pandit Banaras Tiwari) ಅವರ ಅಂತ್ಯಕ್ರಿಯೆ ನೆರವೇರಿದೆ. ಸಿನಿಮಾವೊಂದರ ಶೂಟಿಂಗ್​ನಲ್ಲಿ ಭಾಗಿಯಾಗಿದ್ದ ಪಂಕಜ್​ ತ್ರಿಪಾಠಿ ಅವರು ಕೂಡಲೇ ತಮ್ಮ ಹಳ್ಳಿಗೆ ಧಾವಿಸಿದ್ದಾರೆ. ತಂದೆಯ ಅಂತ್ಯ ಸಂಸ್ಕಾರದಲ್ಲಿ ಅವರು ಭಾಗಿ ಆಗಿದ್ದಾರೆ. ಪಂಕಜ್​ ತ್ರಿಪಾಠಿಗೆ ಆಪ್ತರು ಸಾಂತ್ವನ ತಿಳಿಸುತ್ತಿದ್ದಾರೆ. ನಟ ಅಕ್ಷಯ್​ ಕುಮಾರ್​ ಕೂಡ ಕಂಬನಿ ಮಿಡಿದಿದ್ದಾರೆ. ಅಕ್ಷಯ್​ ಕುಮಾರ್​ ಮತ್ತು ಪಂಕಜ್​ ತ್ರಿಪಾಠಿ ಅವರು ‘ಒಎಂಜಿ 2’ (OMG 2) ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದಾರೆ.

ಮಗನ ಸಾಧನೆ ಬಗ್ಗೆ ಪಂಡಿತ್​ ಬನಾರಸ್​ ತಿವಾರಿ ಅವರಿಗೆ ಹೆಚ್ಚೇನೂ ತಿಳಿದಿರಲಿಲ್ಲ. ಆ ಬಗ್ಗೆ ಸಂದರ್ಶನವೊಂದರಲ್ಲಿ ಪಂಕಜ್​ ತ್ರಿಪಾಠಿ ಅವರು ಹೇಳಿಕೊಂಡಿದ್ದರು. ‘ನನ್ನ ಸಾಧನೆ ಬಗ್ಗೆ ನಮ್ಮ ತಂದೆಗೆ ಬಹಳ ಹೆಮ್ಮೆ ಏನಿಲ್ಲ. ಸಿನಿಮಾದಲ್ಲಿ ನಾನು ಏನು ಮಾಡುತ್ತೇನೆ ಮತ್ತು ಹೇಗೆ ನಟಿಸುತ್ತೇನೆ ಎಂಬುದು ಕೂಡ ಅವರಿಗೆ ತಿಳಿದಿಲ್ಲ. ಚಿತ್ರಮಂದಿರದ ಒಳಗೆ ಹೇಗಿರುತ್ತದೆ ಎಂಬುದನ್ನು ಕೂಡ ಅವರು ನೋಡಿಲ್ಲ. ಇತ್ತೀಚೆಗೆ ನಮ್ಮ ಮನೆಗೆ ತಂದಿರುವ ಟಿವಿಯಲ್ಲಿ ಅಥವಾ ಯಾರಾದರೂ ತಮ್ಮ ಕಂಪ್ಯೂಟರ್​ನಲ್ಲಿ ನನ್ನ ಸಿನಿಮಾವನ್ನು ತೋರಿಸಿದರೆ ಮಾತ್ರ ಅವರು ನೋಡುತ್ತಾರೆ’ ಎಂದು ಪಂಕಜ್​ ತ್ರಿಪಾಠಿ ಹೇಳಿದ್ದರು.

ಇದನ್ನೂ ಓದಿ: ಅಕ್ಷಯ್​ ಕುಮಾರ್​ಗಿಂತ ಪಂಕಜ್​ ತ್ರಿಪಾಠಿಗೆ ಹೆಚ್ಚು ಸಂಭಾವನೆ; ‘ಒಎಂಜಿ 2’ ಚಿತ್ರದ ಒಟ್ಟು ಬಜೆಟ್​ ಎಷ್ಟು?

ತಂದೆಯ ನಿಧನದ ಸುದ್ದಿ ಬಂದಾಗ ಪಂಕಜ್​ ತ್ರಿಪಾಠಿ ಅವರು ಉತ್ತರಖಂಡದಲ್ಲಿ ಹೊಸ ಸಿನಿಮಾಗಾಗಿ ಚಿತ್ರೀಕರಣ ಮಾಡುತ್ತಿದ್ದರು. ಪಂಡಿತ್​ ಬನಾರಸ್​ ತಿವಾರಿ ಅವರು ತಮ್ಮ ಪತ್ನಿಯ ಜೊತೆ ಬಿಹಾರದ ಒಂದು ಹಳ್ಳಿಯಲ್ಲಿ ವಾಸವಾಗಿದ್ದರು. ಇತ್ತ, ಪಂಕಜ್​ ತ್ರಿಪಾಠಿ ಅವರು ತಮ್ಮ ಪತ್ನಿ ಮತ್ತು ಮಗಳ ಜೊತೆ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಬಾಲಿವುಡ್​ನಲ್ಲಿ ಪಂಕಜ್​ ತ್ರಿಪಾಠಿ ಅವರು ಬ್ಯುಸಿ ಆಗಿದ್ದಾರೆ. ತಂದೆಯ ನಿಧನದ ಕಾರಣ ಅವರೀಗ ಸಿನಿಮಾ ಕೆಲಸಗಳಿಗೆ ಬಿಡುವು ನೀಡುವುದು ಅನಿವಾರ್ಯ ಆಗಿದೆ.

ಪಂಕಜ್​ ತ್ರಿಪಾಠಿ ಮತ್ತು ಅಕ್ಷಯ್​ ಕುಮಾರ್ ಒಟ್ಟಿಗೆ ನಟಿಸಿದ ‘ಒಎಂಜಿ 2’ ಸಿನಿಮಾ ಆಗಸ್ಟ್​ 11ರಂದು ಬಿಡುಗಡೆಯಾಗಿ ಉತ್ತಮ ವಿಮರ್ಶೆ ಪಡೆದುಕೊಂಡಿದೆ. ಈ ಸಿನಿಮಾಗೆ ಬಾಕ್ಸ್​ ಆಫೀಸ್​ನಲ್ಲಿ 113 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ. ಈ ಖುಷಿಯನ್ನು ಸಂಭ್ರಮಿಸುತ್ತಿರುವಾಗಲೇ ಪಂಕಜ್​ ತ್ರಿಪಾಠಿಯವರ ತಂದೆಯ ನಿಧನದ ಸುದ್ದಿ ಕೇಳಿಬಂದಿದೆ. ‘ನನ್ನ ಮಿತ್ರ ಮತ್ತು ಸಹನಟರಾದ ಪಂಕಜ್​ ತ್ರಿಪಾಠಿ ಅವರ ತಂದೆ ನಿಧನರಾದ ವಿಷಯ ತಿಳಿದು ಬಹಳ ದುಃಖ ಆಗಿದೆ. ಅಪ್ಪ-ಅಮ್ಮನ ಕೊರತೆಯನ್ನು ಬೇರೆ ಯಾವುದೂ ನೀಗಿಸಲು ಸಾಧ್ಯವಿಲ್ಲ. ಭಗವಂತನ ಪಾದದಲ್ಲಿ ಅವರ ಆತ್ಮಕ್ಕೆ ಸ್ಥಾನ ಸಿಗಲಿ. ಓಂ ಶಾಂತಿ’ ಎಂದು ಅಕ್ಷಯ್​ ಕುಮಾರ್​ ಅವರು ಟ್ವೀಟ್​ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.