‘ನನ್ನ ಮದುವೆ ಆಗ್ತೀಯಾ’: ಈ ನಟಿಗೆ ಪ್ರಪೋಸ್​ ಮಾಡಿದ್ದರು ಸಲ್ಮಾನ್​ ಖಾನ್​

|

Updated on: May 16, 2024 | 7:47 PM

ಹಲವು ವರ್ಷಗಳ ಹಿಂದೆ ನಡೆದ ಘಟನೆಯನ್ನು ನಟಿ ಈಗ ವಿವರಿಸಿದ್ದಾರೆ. ಸಿನಿಮಾದ ಶೂಟಿಂಗ್​ ನೋಡಲು ಬಂದಿದ್ದ ಇವರಿಗೆ ಸಲ್ಮಾನ್​ ಖಾನ್​ ಪ್ರಪೋಸ್​ ಮಾಡಿದ್ದರು. ಆದರೆ ಸಲ್ಲು ಮಾಡಿದ ಪ್ರಪೋಸಲ್​ಗೆ ‘ನೋ’ ಎಂದು ಈ ಹುಡುಗಿ ಉತ್ತರಿಸಿದ್ದರು. ‘ಹೀರಾಮಂಡಿ’ ವೆಬ್​ ಸರಣಿಯಿಂದ ಈ ಸುಂದರಿಗೆ ಈಗ ಯಶಸ್ಸು ಸಿಕ್ಕಿದೆ. ಹಳೇ ದಿನಗಳನ್ನು ಅವರು ಮೆಲುಕು ಹಾಕಿದ್ದಾರೆ.

‘ನನ್ನ ಮದುವೆ ಆಗ್ತೀಯಾ’: ಈ ನಟಿಗೆ ಪ್ರಪೋಸ್​ ಮಾಡಿದ್ದರು ಸಲ್ಮಾನ್​ ಖಾನ್​
ಸಲ್ಮಾನ್​ ಖಾನ್​​, ಶರ್ಮಿನ್​ ಸೇಗಲ್​
Follow us on

ಸಲ್ಮಾನ್​ ಖಾನ್​ (Salman Khan) ಯಾವಾಗ ಮದುವೆ ಆಗ್ತಾರೆ ಎಂಬ ಪ್ರಶ್ನೆಗೆ ಸದ್ಯಕ್ಕಂತೂ ಉತ್ತರವಿಲ್ಲ. ಕೆಲವು ನಟಿಯರ ಜೊತೆ ಅವರಿಗೆ ರಿಲೇಷನ್​ಶಿಪ್​ ಇತ್ತು. ಆದರೆ ಕಂಕಣ ಭಾಗ್ಯ ಕೂಡಿ ಬರಲಿಲ್ಲ. ‘ನನಗೂ ಸಲ್ಮಾನ್​ ಖಾನ್​ ಪ್ರಪೋಸ್​ ಮಾಡಿದ್ದರು’ ಎಂದು ನಟಿಯೊಬ್ಬರು ಈಗ ಹೇಳಿಕೊಂಡಿದ್ದಾರೆ. ಸಲ್ಮಾನ್​ ಖಾನ್​ ಪ್ರಪೋಸ್​ ಮಾಡೋದು ಎಂದರೆ ಸಣ್ಣ ಮಾತಲ್ಲ. ಆದರೆ ಸ್ಟಾರ್​ ನಟನ ಪ್ರೇಮ ನಿವೇದನೆಯನ್ನು ಈ ನಟಿ ತಿರಸ್ಕರಿಸಿದ್ದರು! ಆ ಘಟನೆಯನ್ನು ಈಗ ಅವರು ನೆನಪಿಸಿಕೊಂಡಿದ್ದಾರೆ. ಅಂದಹಾಗೆ, ನಾವು ಮಾತನಾಡುತ್ತಿರುವುದು ‘ಹೀರಾಮಂಡಿ’ (Heeramandi) ವೆಬ್​ ಸರಣಿಯಲ್ಲಿ ಪ್ರಮುಖ ಪಾತ್ರ ಮಾಡಿದ ಶರ್ಮಿನ್​ ಸೇಗಲ್​ ಬಗ್ಗೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶರ್ಮಿನ್​ ಸೇಗಲ್​ (Sharmin Segal) ಅವರು ಈ ವಿಚಾರ ತಿಳಿಸಿದ್ದಾರೆ.

ಸಲ್ಮಾನ್​ ಖಾನ್​ ಅವರು ಶರ್ಮಿನ್​ ಸೇಗಲ್​ಗೆ ಪ್ರಪೋಸ್​ ಮಾಡಿದ್ದು ಒಂದು ತಮಾಷೆಯ ಪ್ರಸಂಗ. ಅದು ನಡೆದಿತ್ತು ಅಂದಾಜು 25 ವರ್ಷಗಳ ಹಿಂದೆ. ಆಗ ಶರ್ಮಿನ್​ ಸೇಗಲ್​ ಅವರು ಪುಟ್ಟ ಬಾಲಕಿ. ಅವರಿಗೆ ಆಗ ಎರಡು ಅಥವಾ ಮೂರು ವರ್ಷ ವಯಸ್ಸು ಇದ್ದಿರಬಹುದು. ಸಿನಿಮಾದ ಶೂಟಿಂಗ್​ ಸೆಟ್​ನಲ್ಲಿ ಸಲ್ಮಾನ್​ ಖಾನ್​ ಅವರನ್ನು ನೋಡಲು ಅವರು ಹೋಗಿದ್ದರು. ಆಗ ‘ನನ್ನನ್ನು ಮದುವೆ ಆಗ್ತೀಯಾ’ ಅಂತ ಸಲ್ಮಾನ್​ ಖಾನ್​ ಅವರು ಆ ಪುಟಾಣಿಗೆ ಕೇಳಿದ್ದರಂತೆ. ಅದಕ್ಕೆ ‘ಇಲ್ಲ’ ಎಂದು ಶರ್ಮಿನ್​ ಸೇಗಲ್​ ಉತ್ತರ ನೀಡಿದ್ದರು.

ಈಗ ಶರ್ಮಿನ್​ ಸೇಗಲ್​ ಅವರಿಗೆ 28 ವರ್ಷ ವಯಸ್ಸು. ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿ ಅವರ ಸಂಬಂಧಿ ಆಗಿರುವ ಅವರು ‘ಹೀರಾಮಂಡಿ’ ವೆಬ್ ಸರಣಿಯಲ್ಲಿ ಆಲಂಝೇಬ್​ ಎಂಬ ಪಾತ್ರ ಮಾಡಿದ್ದಾರೆ. ಅದಿತಿ ರಾವ್​ ಹೈದರಿ, ಮನಿಷಾ ಕೊಯಿರಾಲಾ, ರಿಚಾ ಚಡ್ಡಾ, ಸೋನಾಕ್ಷಿ ಸಿನ್ಹಾ ಮುಂತಾದ ನಟಿಯರ ಜೊತೆ ಅವರು ತೆರೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ‘ಹೀರಾಮಂಡಿ’ ವೆಬ್​ ಸಿರೀಸ್​ ಯಶಸ್ಸಿಗೆ ಗೌರವ ಸಲ್ಲಿಸಿದ ‘ಅಮುಲ್​’

‘ಹೀರಾಮಂಡಿ’ ವೆಬ್​ ಸರಣಿ ಹಿಟ್​ ಆಗಿದೆ. ಆದರೆ ಶರ್ಮಿನ್​ ಸೇಗಲ್​ ಅವರನ್ನು ನೆಟ್ಟಿಗರು ಟ್ರೋಲ್​ ಮಾಡಿದ್ದಾರೆ. ‘ನಿರ್ದೇಶಕರ ಸಂಬಂಧಿ ಎಂಬ ಕಾರಣಕ್ಕೆ ಅವರಿಗೆ ಈ ಪಾತ್ರ ಸಿಕ್ಕಿದೆ. ನಟನೆ ಸರಿಯಾಗಿ ಮಾಡಿಲ್ಲ. ಇದು ನೆಪೋಟಿಸಂ’ ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಟ್ರೋಲ್​ ಕಾಟ ಜಾಸ್ತಿ ಆದ ಬಳಿಕ ಶರ್ಮಿನ್​ ಸೇಗಲ್​ ಅವರು ತಮ್ಮ ಇನ್​ಸ್ಟಾಗ್ರಾಮ್​ ಪೋಸ್ಟ್​ಗಳಿಗೆ ಕಮೆಂಟ್​ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.