ಡ್ರಗ್ಸ್ ಪ್ರಕರಣ: ಓರಿ, ಶ್ರದ್ಧಾ ಕಪೂರ್ ಸಹೋದರನ ಹೆಸರು, ನೊಟೀಸ್ ಜಾರಿ
Bollywood Drug case: ಬಾಲಿವುಡ್ನಲ್ಲಿ ಈ ಹಿಂದೆ ಹಲವು ಬಾರಿ ಡ್ರಗ್ಸ್ ಪ್ರಕರಣ ಬೆಳಕಿಗೆ ಬಂದಿದೆ. ಕೆಲ ಸೆಲೆಬ್ರಿಟಿಗಳ ಬಂಧನವೂ ಆಗಿದೆ. ಇದೀಗ ಮತ್ತೊಮ್ಮೆ ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳ ಹೆಸರು ಕೇಳಿ ಬಂದಿದೆ. ಈ ಬಾರಿ ಓರಿ, ಶ್ರದ್ಧಾ ಕಪೂರ್, ಅವರ ಸಹೋದರ ಇನ್ನೂ ಕೆಲವು ನಟ-ನಟಿಯರ ಹೆಸರು ಕೇಳಿಬಂದಿದೆ.

ಡ್ರಗ್ಸ್ ಪ್ರಕರಣದಲ್ಲಿ ಮತ್ತೊಮ್ಮೆ ಬಾಲಿವುಡ್ಗೆ ಸಂಬಂಧಿಸಿದವರ ಹೆಸರುಗಳು ಕೇಳಿ ಬಂದಿದೆ. ಈ ಬಾರಿ ದಾವೂದ್ಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ಗೆ ಸಂಬಂಧಿಸಿದ ಕೆಲವರ ಹೆಸರು ಕೇಳಿ ಬಂದಿದ್ದು, ಮುಂಬೈ ಪೊಲೀಸರು ನೊಟೀಸ್ ಜಾರಿ ಮಾಡಿ ಕೆಲವರನ್ನು ವಿಚಾರಣೆಗೆ ಕರೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅತಿಯಾಗಿ ಸುದ್ದಿಯಲ್ಲಿರುವ ಓರಿ ಮತ್ತು ಖ್ಯಾತ ನಟಿ ಶ್ರದ್ಧಾ ಕಪೂರ್, ಹಾಗೂ ಅವರ ಸಹೋದರ. ಇನ್ನೂ ಕೆಲವರಿಗೆ ನೊಟೀಸ್ ನೀಡಲಾಗಿದೆ.
ಕುಖ್ಯಾತ ಡ್ರಗ್ ಪೆಡ್ಲರ್, ಡ್ರಗ್ ಮಾಫಿಯಾದ ಸದಸ್ಯ ಆಯೋಜಿಸಿದ್ದ ಪಾರ್ಟಿಯಲ್ಲಿ ಓರಿ ಸೇರಿದಂತೆ ಕೆಲವು ಬಾಲಿವುಡ್ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಆ ಪಾರ್ಟಿಗಳಲ್ಲಿ ಮಾದಕ ವಸ್ತು ಬಳಕೆ ಆಗಿತ್ತು ಎಂದು ಈಗಾಗಲೇ ಮುಂಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಡ್ರಗ್ ಪೆಡ್ಲರ್ ಒಬ್ಬಾತ ಹೇಳಿದ್ದಾನೆ. ಡ್ರಗ್ ಪೆಡ್ಲರ್ ಮೊಹಮ್ಮದ್ ಸಲೀಮ್ ಮೊಹಮ್ಮದ್ ಸುಹೇಲ್ ಶೇಖ್ ಇತ್ತೀಚೆಗಷ್ಟೆ ಅರಬ್ ದೇಶದಿಂದ ಮುಂಬೈಗೆ ಬಂದಿದ್ದ. ಈ ವೇಳೆ ಆತನನ್ನು ಮುಂಬೈ ಪೊಲೀಸರ ಮಾದಕ ವಸ್ತು ವಿರೋಧಿ ದಳ ಬಂಧಿಸಿತ್ತು. ಬಾಲಿವುಡ್ನ ಕೆಲವು ಎ ಲಿಸ್ಟೆಡ್ ಸೆಲೆಬ್ರಿಟಿಗಳು ಭಾಗಿಯಾದ ಪಾರ್ಟಿಗಳಲ್ಲಿ ಡ್ರಗ್ಸ್ ಸರಬರಾಜು ಮಾಡಿದ್ದಾಗಿ ಆತ ಹೇಳಿಕೊಂಡಿದ್ದಾನೆ.
ಇದನ್ನೂ ಓದಿ:ದಕ್ಷಿಣದತ್ತ ಬಂದ ಮತ್ತೊಬ್ಬ ಬಾಲಿವುಡ್ ಸ್ಟಾರ್ ನಟಿಯ ಪುತ್ರಿ
ಡ್ರಗ್ ಕಿಂಗ್ಪಿನ್ ಆಗಿರುವ ಹಾಗೂ ಹಲವು ದೇಶಗಳಿಗೆ ಬೇಕಾಗಿರುವ ಸಲೀಮ್ ಡೋಲಾನ ನೆರವಿನೊಂದಿಗೆ ಈಗ ಬಂಧನಕ್ಕೆ ಒಳಗಾಗಿರುವ ಶೇಖ್, ಮುಂಬೈ ಹಾಗೂ ದುಬೈಗಳಲ್ಲಿ ಆಯೋಜಿಸಿದ್ದ ಪಾರ್ಟಿಗಳಲ್ಲಿ ಓರಿ ಸೇರಿದಂತೆ ಇನ್ನೂ ಕೆಲವು ಬಾಲಿವುಡ್ ಸೆಲೆಬ್ರಿಟಿಗಳು ಭಾಗಿ ಆಗಿದ್ದರಂತೆ. ಇದೀಗ ಆಂಟಿ ನಾರ್ಕೊಟಿಕ್ ಬ್ಯೂರೋದವರು ಓರಿಗೆ ನೊಟೀಸ್ ನೀಡಿದ್ದು, ಓರಿಯ ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ. ಈ ಪಾರ್ಟಿಗಳಲ್ಲಿ ಓರಿ ಮಾತ್ರವೇ ಅಲ್ಲದೆ, ನಟಿ ನೋರಾ ಫತೇಹಿ, ಶ್ರದ್ಧಾ ಕಪೂರ್ ಮತ್ತು ಅವರ ಸಹೋದರ ಸಿದ್ಧಾರ್ಥ್ ಕಪೂರ್, ನಿರ್ಮಾಪಕರಾದ ಅಬ್ಬಾಸ್-ಮಸ್ತಾನ್, ರ್ಯಾಪರ್ ಲೋಕ, ಎನ್ಸಿಪಿ ಪಕ್ಷದ ಮುಖಂಡ ಜೀಶಾನ್ ಸಿದ್ಧಿಖಿ ಇನ್ನೂ ಕೆಲವರು ಭಾಗಿ ಆಗಿದ್ದಾಗಿ ಬಂಧಿತ ಶೇಖ್ ಹೇಳಿದ್ದಾನೆ. ಶೇಖ್ ಆಯೋಜಿಸಿದ್ದ ಈ ಪಾರ್ಟಿಗಳಲ್ಲಿ ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಅವರ ಸಹೋದರಿ ಹಸೀನಾ ಪಾರ್ಕರ್ ಅವರ ಪುತ್ರ ಸಹ ಭಾಗಿ ಆಗಿದ್ದನಂತೆ.
ಶ್ರದ್ಧಾ ಕಪೂರ್ ಮತ್ತು ಸಿದ್ಧಾರ್ಥ್ ಕಪೂರ್ ಹೆಸರು ಈ ಹಿಂದೆಯೂ ಸಹ ಕೆಲ ಡ್ರಗ್ಸ್ ಪ್ರಕರಣಗಳಲ್ಲಿ ಕೇಳಿ ಬಂದಿತ್ತು. ವಿಶೇಷವಾಗಿ ಶ್ರದ್ಧಾ ಕಪೂರ್ ಸಹೋದರ ಸಿದ್ಧಾರ್ಥ್ ಕಪೂರ್ ಅನ್ನು ಒಮ್ಮೆ ಬೆಂಗಳೂರು ಪೊಲೀಸರು ಸಹ ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದ್ದರು. ಆದರೆ ಈಗ ಮತ್ತೊಮ್ಮೆ ಈತನ ಹೆಸರು ಡ್ರಗ್ಸ್ ಪ್ರಕರಣದಲ್ಲಿ ಕೇಳಿ ಬಂದಿದೆ. ಪ್ರಕರಣದ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ತನಿಖಾ ಸಂಸ್ಥೆಯ ಮುಖ್ಯಸ್ಥರು, ತಾವು ಮೊದಲಿಗೆ ಓರಿಯ ವಿಚಾರಣೆ ನಡೆಸಲಿದ್ದು, ಓರಿಯ ವಿಚಾರಣೆಯ ಬಳಿಕ ಇತರೆ ಸೆಲೆಬ್ರಿಟಿಗಳ ವಿಚಾರಣೆ ನಡೆಸಬೇಕೆ ಬೇಡವೆ ಎಂಬುದನ್ನು ನಿರ್ಧರಿಸುವುದಾಗಿ ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




