ಇತ್ತೀಚೆಗಷ್ಟೆ ಮುಕ್ತಾಯವಾದ 94ನೇ ಆಸ್ಕರ್ (Oscars) ನಲ್ಲಿ ಭಾರತವು ಎರಡು ವಿಭಾಗದಲ್ಲಿ ಆಸ್ಕರ್ ಗೆದ್ದುಕೊಂಡಿದೆ. ಜನಪ್ರಿಯ ಸಿನಿಮಾ ಆರ್ಆರ್ಆರ್ನ (RRR) ನಾಟು-ನಾಟು ಹಾಡಿಗೆ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಆಸ್ಕರ್ ಬಂದರೆ ದಿ ಎಲಿಫೆಂಟ್ ವಿಸ್ಪರರ್ಸ್ ಹೆಸರಿನ ಕಿರು ಡಾಕ್ಯುಮೆಂಟರಿಗೆ ಸಹ ಆಸ್ಕರ್ ಒಲಿಯಿತು. ಭಾರತ ನಿರ್ಮಾಣದ ಕೃತಿಯೊಂದಕ್ಕೆ ಬಂದ ಮೊದಲ ಆಸ್ಕರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ದಿ ಎಲಿಫೆಂಟ್ ವಿಸ್ಪರರ್ಸ್ (The Elephant Whisperers) ಕಿರು ಡಾಕ್ಯುಮೆಂಟರಿ. ಕಿರು ಡಾಕ್ಯುಮೆಂಟರಿಯ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಜ್ ಹಾಗೂ ನಿರ್ಮಾಪಕಿ ಗುನೀತ್ ಮೋಂಗಾ ಆಸ್ಕರ್ ವೇದಿಕೆ ಏರಿ ಪ್ರಶಸ್ತಿ ಸ್ವೀಕರಿಸಿದರು. ಆದರೆ ವೇದಿಕೆ ಮೇಲೆ ಗುನೀತ್ ಮೋಂಗಾಗೆ ಮಾತನಾಡಲು ಅವಕಾಶ ನೀಡಲಿಲ್ಲ. ಇದು ನಿರ್ಮಾಪಕಿಯ ಸಿಟ್ಟಿಗೆ ಕಾರಣವಾಗಿದೆ.
ದಿ ಎಲಿಫೆಂಟ್ ವಿಸ್ಪರರ್ಸ್ ಕಿರು ಡಾಕ್ಯುಮೆಂಟರಿಗೆ ಪ್ರಶಸ್ತಿ ಘೋಷಿಸಿದಾಗ ನಿರ್ಮಾಪಕಿ ಗುನೀತ್ ಮೊಂಗಾ ಹಾಗೂ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಜ್ ವೇದಿಕೆ ಏರಿದರು. ಮೊದಲು ನಿರ್ದೇಶಕಿ ಕಾರ್ತಿಕಿ ಮಾತನಾಡಿದರು. ಗುನೀತ್ ಮಾತನಾಡಲು ಮುಂದೆ ಬಂದರಾದರೂ ಆ ವೇಳೆಗೆ ಭಾಷಣಕ್ಕೆ ನೀಡಿದ್ದ ಸಮಯ ಮುಗಿದಿತ್ತಾದ್ದರಿಂದ ಗುನೀತ್ ಅವರಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ಇದು ಗುನೀತ್ಗೆ ತೀವ್ರ ನಿರಾಸೆ ಮೂಡಿಸಿತು.
ಆಸ್ಕರ್ ಪಡೆದು ಮರಳಿದ ಬಳಿಕ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಗುನೀತ್ ಮೊಂಗಾ, ”ಆಸ್ಕರ್ ವೇದಿಕೆ ಮೇಲೆ ನನ್ನ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ನೀಡಲಾಗಲಿಲ್ಲ. ಇದು ನನಗೆ ತೀವ್ರ ಆಘಾತ ಉಂಟು ಮಾಡಿತು. ಇದು ಭಾರತಕ್ಕೆ ಸಂದ ಮೊತ್ತಮೊದಲ ಆಸ್ಕರ್ ಎಂಬುದನ್ನು ನಾನು ಒತ್ತಿ ಹೇಳಬೇಕಿತ್ತು. ಅದು ನನಗೆ ಬಹಳ ಮಹತ್ವದ್ದಾಗಿತ್ತು, ನನ್ನ ಹೃದಯವಂತೂ ಇದಕ್ಕಾಗಿ ಕಾಯುತ್ತಿತ್ತು. ನಾನು ಇಷ್ಟು ದೂರ ಬಂದು ಹೇಳಬೇಕಾದುದ್ದನ್ನು ಹೇಳಲಾಗದೇ ಹೋಗಿದ್ದಕ್ಕೆ ತೀವ್ರ ಬೇಸರವಾಗಿತ್ತು. ನಾನು ಮರಳಿ ಹೋದ ಬಳಿಕ ಹೇಳಬೇಕಾಗಿದ್ದಿದ್ದನ್ನು ಹೇಳಿಯೇ ಹೇಳುತ್ತೇನೆ ಎಂದು ನಿಶ್ಚಯಿಸಿಕೊಂಡೆ” ಎಂದಿದ್ದಾರೆ.
”ನಮ್ಮ ಡಾಕ್ಯುಮೆಂಟರಿ ದಿ ಎಲಿಫೆಂಟ್ ವಿಸ್ಪರರ್ಸ್ ನಾಮಿನೇಟ್ ಆಗಿದ್ದ ಕಿರು ಡಾಕ್ಯುಮೆಂಟರಿ ವಿಭಾಗದಲ್ಲಿ ನಮಗೆ ಬಹಳ ಕಠಿಣ ಸ್ಪರ್ಧೆ ಇತ್ತು. ನೊಬೆಲ್ ವಿಜೇತೆ ಯೂಸಫ್ ಮಲಾಲ ಬೆಂಬಲಿಸಿದ್ದ ಡಾಕ್ಯುಮೆಂಟರಿ ಒಂದು ಸಹ ನಾಮಿನೇಟ್ ಆಗಿತ್ತು. ಆದರೆ ನಮ್ಮ ಡಾಕ್ಯುಮೆಂಟರಿ ವಿಶ್ವದಾದ್ಯಂತ ವೀಕ್ಷಕರ ಮನಸು ಕಲಕಿತ್ತು. ವಿಶ್ವದಾದ್ಯಂತದಿಂದ ನಮ್ಮ ಡಾಕ್ಯುಮೆಂಟರಿಗೆ ಪ್ರೀತಿ ಹರಿದು ಬಂತು” ಎಂದಿದ್ದಾರೆ ಗುನೀತ್ ಮೊಂಗಾ.
ಗುನೀತ್ ಮೊಂಗಾ ಸಿಖ್ಯ ಎಂಟರ್ಟೈನ್ಮೆಂಟ್ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದು, ಸ್ಟಾರ್ಗಳಿಲ್ಲದ, ಕಮರ್ಶಿಯಲ್ ಅಲ್ಲದ ಮೇನ್ಸ್ಟ್ರೀಮ್ ಅಲ್ಲದ ಸಿನಿಮಾಗಳಿಗೆ ಬಂಡವಾಳ ಹೂಡುತ್ತಾ ಬಂದಿದ್ದಾರೆ. ಲಂಚ್ ಬಾಕ್ಸ್, ಗ್ಯಾಂಗ್ಸ್ ಆಫ್ ವಸೇಪುರ್, ಮಸಾನ್, 1232 ಕಿಲೋಮೀಟರ್ಸ್, ದಿ ಗರ್ಲ್ ಇನ್ ದಿ ಯೆಲ್ಲೊ ಬೂಟ್ಸ್ ಇನ್ನಿತರೆ ಸಿನಿಮಾಗಳನ್ನು ನಿರ್ಮಾಣ ಹಾಗೂ ಸಹ ನಿರ್ಮಾಣ ಮಾಡಿದ್ದಾರೆ.
Published On - 5:55 pm, Fri, 17 March 23