
ವಿಶ್ವದ ಏಳನೇ ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲ್ ಅನ್ನು ಭಾರತದ ಹಲವಾರು ಸಿನಿಮಾಗಳಲ್ಲಿ ತೋರಿಸಲಾಗಿದೆ. ತಾಜ್ ಮಹಲ್ ಅನ್ನು ಪ್ರೇಮದ ಸಂಕೇತವಾಗಿಯೇ ಬಹುತೇಕ ಈ ವರೆಗಿನ ಎಲ್ಲ ಸಿನಿಮಾಗಳಲ್ಲಿ ತೋರಿಸಲಾಗಿದೆ. ಆದರೆ ಇದೀಗ ಸ್ವತಃ ತಾಜ್ ಮಹಲ್ ಬಗ್ಗೆಯೇ ಸಿನಿಮಾ ಒಂದು ಮೂಡಿ ಬಂದಿದ್ದು, ಸಿನಿಮಾನಲ್ಲಿ ತಾಜ್ ಮಹಲ್ ಬಗ್ಗೆ ಪ್ರಶ್ನೆ ಮಾಡಲಾಗಿದೆ. ತಾಜ್ ಮಹಲ್ನ ಡಿಎನ್ಎ ಪರೀಕ್ಷೆ ಆಗಬೇಕು ಎನ್ನಲಾಗಿದೆ. ಸಿನಿಮಾದ ಹೆಸರು ‘ದಿ ತಾಜ್ ಸ್ಟೋರಿ’ ಸಿನಿಮಾದ ಟ್ರೈಲರ್ ಇಂದು (ಅಕ್ಟೋಬರ್ 16) ಬಿಡುಗಡೆ ಆಗಿದೆ.
‘ದಿ ತಾಜ್ ಸ್ಟೋರಿ’ ಸಿನಿಮಾ ತಾಜ್ ಮಹಲ್ನ ಮೂಲ ಕುರಿತು ಪ್ರಶ್ನೆ ಮಾಡುವ ಸಿನಿಮಾ ಆಗಿದೆ. ಇತ್ತೀಚೆಗಿನ ವರ್ಷಗಳಲ್ಲಿ ತಾಜ್ ಮಹಲ್ ಮೂಲದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ, ಕೆಲವು ಮಾಧ್ಯಮಗಳಲ್ಲಿ ಆಗಾಗ್ಗೆ ಚರ್ಚೆಗಳು ಕಾಣಿಸಿಕೊಳ್ಳುತ್ತಲೇ ಇರುತ್ತವೆ. ತಾಜ್ ಮಹಲ್ ಅನ್ನು ನಿಜವಾಗಿಯೂ ಷಹಜಾನ್ ಕಟ್ಟಿಸಿಲ್ಲ ಬದಲಿಗೆ ಅದೊಂದು ಶಿವ ಮಂದಿರ ಎಂಬ ವಾದಗಳು ಕೇಳಿ ಬರುತ್ತಲೇ ಇರುತ್ತವೆ. ಇದೀಗ ಇದನ್ನೇ ಇರಿಸಿಕೊಂಡು ‘ದಿ ತಾಜ್ ಸ್ಟೋರಿ’ ಹೆಸರಿನ ಸಿನಿಮಾ ಮಾಡಲಾಗಿದೆ.
ಇದನ್ನೂ ಓದಿ:ಬಾಲಿವುಡ್ ಸ್ಟಾರ್ ಜೊತೆ ಸಿನಿಮಾ, ಏಜೆಂಟ್ ಮಿರ್ಚಿ ಆದ ಶ್ರೀಲೀಲಾ
‘ದಿ ತಾಜ್ ಸ್ಟೋರಿ’ ಸಿನಿಮಾನಲ್ಲಿ ಪರೇಶ್ ರಾವಲ್, ತಾಜ್ ಮಹಲ್ ಗೆ ಪ್ರವಾಸಿಗರಿಗೆ ಮಾರ್ಗದರ್ಶನ ನೀಡುವ ಟೂರಿಸ್ಟ್ ಗೈಡ್ ಆಗಿ ನಟಿಸಿದ್ದಾರೆ. ತಾಜ್ ಮಹಲ್ ಅನ್ನು ಷಹಜಹಾನ್ ಕಟ್ಟಿಸಿಲ್ಲ ಬದಲಿಗೆ ಅದೊಂದು ಶಿವ ಮಂದಿರ ಎಂಬುದು ಅವರ ನಂಬಿಕೆ. ಇದೇ ಕಾರಣಕ್ಕೆ ಅವರು ನ್ಯಾಯಾಲಯದ ಮೊರೆ ಹೋಗುತ್ತಾರೆ ತಾಜ್ ಮಹಲ್ ಮೂಲದ ಬಗ್ಗೆ ಪ್ರಕರಣ ದಾಖಲಿಸುತ್ತಾರೆ. ನ್ಯಾಯಾಲಯದಲ್ಲಿ ತಾಜ್ ಮಹಲ್ ವಾಸ್ತು ಶಿಲ್ಪ ಇತ್ಯಾದಿ ವಿವರಗಳನ್ನು ಇರಿಸಿಕೊಂಡು ತಾಜ್ ಮಹಲ್ ಷಹಜಾನ್ ಕಟ್ಟಿಸಿದ್ದಲ್ಲವೆಂದು ವಾದಿಸುತ್ತಾರೆ. ಕೊನೆಗೆ ನ್ಯಾಯಾಲಯದ ತೀರ್ಪು ಏನಾಗುಗಿರುತ್ತದೆ ಎಂಬುದು ತಿಳಿಯಲು ಸಿನಿಮಾ ವೀಕ್ಷಿಸಬೇಕು.
ಸಿನಿಮಾ ಅನ್ನು ತುಷಾರ್ ಅಮರೀಶ್ ಘೋಯಲ್ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ಸಿಎ ಸುರೇಶ್ ಝಾ. ಸಿನಿಮಾನಲ್ಲಿ ಪರೇಷ್ ರಾವಲ್ ಜೊತೆಗೆ ಝಾಕಿರ್ ಹುಸೇನ್, ಅಮೃತಾ ಖಾನ್ವಿಲ್ಕರ್ ಇನ್ನೂ ಹಲವರು ನಟಿಸಿದ್ದು, ಸಿನಿಮಾ ಅಕ್ಟೋಬರ್ 31 ರಂದು ಬಿಡುಗಡೆ ಆಗಲಿದೆ. ಇತ್ತೀಚೆಗಿನ ಕೆಲ ಸಿನಿಮಾಗಳಿಗೆ ಸಿಕ್ಕಂತೆ ಈ ಸಿನಿಮಾಕ್ಕೂ ಕೆಲ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ದೊರೆಯುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:21 pm, Thu, 16 October 25