ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್‘ (Pathaan) ಸಿನಿಮಾದ ಗೆಲುವಿನ ನಾಗಾಲೋಟ ಸದ್ಯಕ್ಕೆ ನಿಲ್ಲುವಂತಿಲ್ಲ. ಈಗಾಗಲೇ ವಿಶ್ವದೆಲ್ಲೆಡೆ ಸಾವಿರ ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿರುವ ಪಠಾಣ್ ಸಿನಿಮಾ ಹಲವು ದಾಖಲೆಗಳನ್ನು ಮುರಿದು ಮುಂದೆ ಸಾಗುತ್ತಿದೆ. ಇತ್ತೀಚಿನ ಬ್ಲಾಕ್ ಬಸ್ಟರ್ ‘ಕೆಜಿಎಫ್ 2’, ಹಾಗೂ ರಾಜಮೌಳಿಯ ಆಲ್ಟೈಮ್ ಸೂಪರ್ ಹಿಟ್ ‘ಬಾಹುಬಲಿ 2’ ಸಿನಿಮಾಗಳ ದಾಖಲೆಯನ್ನು ಹಿಂದಿಕ್ಕಿದೆ ಪಠಾಣ್.
ಈವರೆಗೆ ಭಾರತದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಹಿಂದಿ ಸಿನಿಮಾ ಎಂಬ ಶ್ರೇಯ ಇದೀಗ ‘ಪಠಾಣ್’ ಸಿನಿಮಾದ ಪಾಲಾಗಿದೆ. ಈ ಹಿಂದೆ ಈ ದಾಖಲೆ ‘ಬಾಹುಬಲಿ 2’ ಹಿಂದಿ ಆವೃತ್ತಿಯ ಸಿನಿಮಾ ಹೆಸರಲ್ಲಿತ್ತು. ಆದರೆ ಈ ಆ ದಾಖಲೆ ಮುರಿದಿರುವ ‘ಪಠಾಣ್’ ಸಿನಿಮಾ ಭಾರತದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಹಿಂದಿ ಸಿನಿಮಾ ಎನಿಸಿಕೊಂಡಿದೆ.
‘ಪಠಾಣ್’ ಸಿನಿಮಾದ ಹಿಂದಿ ಆವೃತ್ತಿ ಭಾರತದಲ್ಲಿ ಈವರೆಗೆ 650 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಇಷ್ಟು ದೊಡ್ಡ ಮೊತ್ತದ ಹಣವನ್ನು ಹಿಂದಿಯ ಇನ್ಯಾವುದೇ ಸಿನಿಮಾ ಭಾರತದ ಮಾರುಕಟ್ಟೆಯಲ್ಲಿ ಗಳಿಸಿಲ್ಲ. ಭಾರತದ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನಿಸಿಕೊಂಡಿರುವ ಆಮಿರ್ ಖಾನ್ರ ‘ದಂಗಲ್’ ಸಹ ಭಾರತದಲ್ಲಿ ಇಷ್ಟು ದೊಡ್ಡ ಮೊತ್ತದ ಕಲೆಕ್ಷನ್ ಮಾಡಿಲ್ಲ!
‘ದಂಗಲ್’, ‘ಬಾಹುಬಲಿ 2’, ‘ಕೆಜಿಎಫ್ 2 ‘ ಸಿನಿಮಾಗಳು ಇಂದಿಗೂ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳಾಗಿವೆ, ಆದರೆ ಭಾರತದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಹಿಂದಿ ಭಾಷೆಯ ಸಿನಿಮಾ ಎಂಬ ದಾಖಲೆ ಶಾರುಖ್ ಖಾನ್ರ ‘ಪಠಾಣ್’ ಸಿನಿಮಾದ ಪಾಲಾಗಿದೆ. ವಿಶ್ವದಾದ್ಯಂತ 2200 ಕೋಟಿ ಗಳಿಸಿರುವ ಆಮಿರ್ ಖಾನ್ರ ‘ದಂಗಲ್’ ಸಿನಿಮಾ ಭಾರತದಲ್ಲಿ ಗಳಿಸಿರುವುದು 590 ಕೋಟಿಯಷ್ಟೆ. ಇನ್ನು ‘ಕೆಜಿಎಫ್ 2’ ಸಿನಿಮಾದ ಹಿಂದಿ ಆವೃತ್ತಿ ಭಾರತದಲ್ಲಿ ಗಳಿಸಿರುವುದು 509 ಕೋಟಿ. ‘ಬಾಹುಬಲಿ 2’ ಸಿನಿಮಾದ ಹಿಂದಿ ಆವೃತ್ತಿ 510 ಕೋಟಿ ಹಣ ಗಳಿಸಿತ್ತು.
‘ಪಠಾಣ್’ ಸಿನಿಮಾವು ವಿಶ್ವದಾದ್ಯಂತ ಈವರೆಗೆ 1024 ಕೋಟಿ ಗಳಿಕೆ ಮಾಡಿದ್ದು ಬ್ಲಾಕ್ ಬಸ್ಟರ್ ಎನಿಸಿಕೊಂಡಿದೆ. ಶಾರುಖ್ ಖಾನ್ರ ಈ ಹಿಂದಿನ ಯಾವ ಸಿನಿಮಾಗಳೂ ಸಹ ಇಷ್ಟು ದೊಡ್ಡ ಕಲೆಕ್ಷನ್ ಮಾಡಿರಲಿಲ್ಲ. ಇನ್ನು ಕೋವಿಡ್ ಬಳಿಕ ಸತತ ಸೋಲುಗಳಿಂದ ಬಸವಳಿದು ಹೋಗಿದ್ದ ಬಾಲಿವುಡ್ಗೆ ‘ಪಠಾಣ್’ ಪುನರ್ಜೀವನ ನೀಡಿದಂತಾಗಿದೆ.
ಪಠಾಣ್ ಸಿನಿಮಾ ಸ್ಪೈ ಥ್ರಿಲ್ಲರ್ ಆಗಿದ್ದು, ಶಾರುಖ್ ಖಾನ್ ಜೊತೆಗೆ ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಟ ಸಲ್ಮಾನ್ ಖಾನ್ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಿದ್ದು, ನಿರ್ಮಾಣ ಮಾಡಿರುವುದು ಯಶ್ ರಾಜ್ ಫಿಲಮ್ಸ್.