‘ಬಲವಂತದಿಂದ ಲಸಿಕೆ ಹಾಕೋದು ಎಷ್ಟು ಸರಿ? ಹೆಚ್ಚು-ಕಮ್ಮಿ ಆದ್ರೆ ಪರಿಹಾರ ಕೊಡ್ತೀರಾ?’: ನಟಿ ಪೂಜಾ ಬೇಡಿ ಸವಾಲು

ಪೂಜಾ ಬೇಡಿ ಮಾಡಿರುವ ಈ ಟ್ವೀಟ್​ಗಳಿಗೆ ಜನರಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಆದರೆ ಈ ಯಾವ ಟ್ರೋಲ್​ಗಳಿಗೂ ಪೂಜಾ ಬೇಡಿ ಬಗ್ಗಿಲ್ಲ. ಲಸಿಕೆ ಅಭಿಯಾನದ ವಿರುದ್ಧವಾಗಿ ಅವರು ತಮ್ಮ ಟ್ವೀಟ್​ ಸರಣಿಯನ್ನು ಮುಂದುವರಿಸಿದ್ದಾರೆ.

‘ಬಲವಂತದಿಂದ ಲಸಿಕೆ ಹಾಕೋದು ಎಷ್ಟು ಸರಿ? ಹೆಚ್ಚು-ಕಮ್ಮಿ ಆದ್ರೆ ಪರಿಹಾರ ಕೊಡ್ತೀರಾ?’: ನಟಿ ಪೂಜಾ ಬೇಡಿ ಸವಾಲು
ಪೂಜಾ ಬೇಡಿ
Edited By:

Updated on: Aug 26, 2021 | 4:41 PM

ದೇಶದಿಂದ ಕೊರೊನಾ ವೈರಸ್​ಅನ್ನು ಹೊಡೆದೋಡಿಸಲು ಲಸಿಕೆಯೇ ಪರಿಹಾರ. ಆ ಕಾರಣದಿಂದ ದೇಶಾದ್ಯಂತ ಎಲ್ಲರಿಗೂ ಲಸಿಕೆ ನೀಡುವ ಕೆಲಸ ಭರದಿಂದ ಸಾಗುತ್ತಿದೆ. ಎಲ್ಲ ವರ್ಗದ ಜನರಿಗೆ ಕೊವಿಡ್​ ವ್ಯಾಕ್ಸಿನ್​ ಸಿಗಲಿ ಎಂದು ಸರ್ಕಾರಗಳು ಪ್ರಯತ್ನಿಸುತ್ತಿವೆ. ಈ ಲಸಿಕೆ ಅಭಿಯಾನದ ಬಗ್ಗೆ ಸಮಾಜದಲ್ಲಿ ಪರ-ವಿರೋಧದ ಅಭಿಪ್ರಾಯಗಳಿವೆ ಎಂಬುದು ನಿಜ. ಕೆಲವು ಸೆಲೆಬ್ರಿಟಿಗಳು ಕೂಡ ಲಸಿಕೆಯ ಕುರಿತು ಅಪಸ್ವರ ನುಡಿಯುತ್ತಿದ್ದಾರೆ. ಅದರಲ್ಲೂ ಬಾಲಿವುಡ್​ ನಟಿ ಪೂಜಾ ಬೇಡಿ ಅವರು ಕೊಂಚ ಖಾರವಾಗಿಯೇ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಇದು ಅನೇಕರ ಅಸಮಾಧಾನಕ್ಕೆ ಕಾರಣ ಆಗುತ್ತಿದೆ.

ಬಾಲಿವುಡ್​ ನಟಿ, ಮಾಜಿ ಬಿಗ್​ ಬಾಸ್​ ಸ್ಪರ್ಧಿ ಪೂಜಾ ಬೇಡಿ ಅವರು ಲಸಿಕೆ ಅಭಿಯಾನದ ವಿರುದ್ಧ ನೇರವಾಗಿಯೇ ಹರಿಹಾಯುತ್ತಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್​ ಮಾಡಿರುವ ಅವರು ಬಲವಂತವಾಗಿ ಲಸಿಕೆ ಹಾಕುವುದರ ವಿರುದ್ಧ ಗುಡುಗುತ್ತಿದ್ದಾರೆ. ‘ಹಲವು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಒತ್ತಾಯ ಹೇರುತ್ತಿವೆ. ಕೆಲಸ ಉಳಿಸಿಕೊಳ್ಳಲು ಉದ್ಯೋಗಿಗಳಿಗೆ ಇದು ಅನಿವಾರ್ಯ ಆಗುತ್ತಿದೆ. ಲಸಿಕೆಯ ಅಡ್ಡಪರಿಣಾಮದಿಂದ ಸಾವು ಅಥವಾ ವೈಕಲ್ಯ ಉಂಟಾದರೆ ಈ ಕಂಪನಿಗಳೇ ಪರಿಹಾರ ಕೊಡುತ್ತವಾ?’ ಎಂದು ಪೂಜಾ ಪ್ರಶ್ನಿಸಿದ್ದಾರೆ.

‘ಲಸಿಕೆ ಪಡೆಯದೆಯೂ ಬದುಕುಳಿಯುವ ಸಾಧ್ಯತೆ ಶೇ.99ರಷ್ಟು ಇರುವಾಗ ನಿಜಕ್ಕೂ ಅಪಾಯದಲ್ಲಿ ಇರುವವರಿಗೆ ಮಾತ್ರ ಸರ್ಕಾರ ಲಸಿಕೆ ಹಾಕಿಸಬೇಕು. ಮಾಸ್ಕ್​ ಧರಿಸುವಂತೆ ಹೇಳಬೇಕು. ಐಸೋಲೇಟ್​ ಆಗುವಂತೆ ಸೂಚಿಸಬೇಕು. ಅದರ ಬದಲು ಇಡೀ ಜಗತ್ತಿಗೆ ಲಸಿಕೆ ಹಾಕಿಸುವುದಲ್ಲ. ಲಸಿಕೆ ಹಾಕಿಸಿಕೊಳ್ಳದವರನ್ನು ತಾರತಮ್ಯದಿಂದ ನೋಡಬಾರದು. ಹಾಗೆ ಮಾಡುವುದು ತರ್ಕರಹಿತ ಮತ್ತು ಅಪಾಯಕಾರಿ ಆಗುತ್ತದೆ’ ಎಂದು ಪೂಜಾ ಬೇಡಿ ಟ್ವೀಟ್​ ಮಾಡಿದ್ದಾರೆ.

ಪೂಜಾ ಮಾಡಿರುವ ಈ ಟ್ವೀಟ್​ಗಳಿಗೆ ಜನರಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ‘ಇದನ್ನು ಪೋಸ್ಟ್​ ಮಾಡುವುದಕ್ಕಿಂತ ಮುನ್ನ ನೀವು ಅಧ್ಯಯನ ಮಾಡಿದ್ದೀರಾ? ಇದು ಹುಚ್ಚುತನ. ಲಸಿಕೆಯಿಂದ ಸಾವಿನ ಪ್ರಮಾಣ ಕಡಿಮೆ ಆಗಿದೆ. ಗಂಭೀರ ಪ್ರಕರಣಗಳಲ್ಲಿ ಇಳಿಕೆ ಆಗಿದೆ. ಅಮೆರಿಕವೇ ಇದಕ್ಕೆ ಅತ್ಯುತ್ತಮ ಉದಾಹರಣೆ’ ಎಂದು ನೆಟ್ಟಿಗರೊಬ್ಬರು ಪೂಜಾಗೆ ಪಾಠ ಮಾಡಿದ್ದಾರೆ.

‘ಲಸಿಕೆ ಹಾಕಿಸಿಕೊಳ್ಳದೇ ಇರುವುದರಿಂದ ಎಲ್ಲರಿಗೂ ಅಪಾಯ ಎದುರಾಗುತ್ತದೆ. ಮೂರ್ಖತನಕ್ಕೆ ನೀವು ಬಹುಮಾನವನ್ನು ನಿರೀಕ್ಷಿಸೋಕೆ ಆಗಲ್ಲ’ ಎಂದು ಮತ್ತೊಬ್ಬರು ಕಿವಿ ಹಿಂಡಿದ್ದಾರೆ. ಈ ಯಾವ ಟ್ರೋಲ್​ಗಳಿಗೂ ಪೂಜಾ ಬೇಡಿ ಬಗ್ಗಿಲ್ಲ. ಅವರು ಲಸಿಕೆ ಅಭಿಯಾನದ ವಿರುದ್ಧವಾಗಿ ತಮ್ಮ ಟ್ವೀಟ್​ ಸರಣಿಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ:

ಕಾರ್ಮಿಕರು ಇರುವ ಸ್ಥಳದಲ್ಲೇ ಕೊವಿಡ್ ಲಸಿಕೆ, ಇ ಶ್ರಮ್ ಯೋಜನೆಯಡಿ 15 ರೂ ನೋಂದಣಿಗೆ 2 ಲಕ್ಷದವರೆಗೆ ಇನ್ಶೂರೆನ್ಸ್: ಸಚಿವ ಶಿವರಾಮ ಹೆಬ್ಬಾರ

ಕರ್ನಾಟಕಕ್ಕೆ ಹೆಚ್ಚು ಕೊವಿಡ್ ಲಸಿಕೆ ಪೂರೈಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸಿಎಂ ಬೊಮ್ಮಾಯಿ ಮನವಿ

Published On - 4:40 pm, Thu, 26 August 21