ನಟಿ ಪೂನಂ ಪಾಂಡೆ (Poonam Pandey) ಅವರು ಕಳೆದ ವಾರ ಸಾಕಷ್ಟು ಸುದ್ದಿಯಲ್ಲಿದ್ದರು. ಇದಕ್ಕೆ ಕಾರಣ ಅವರ ಸಾವಿನ ಸುದ್ದಿ. ಈ ಸುದ್ದಿಯನ್ನು ಯಾರೋ ಕಿಡಿಗೇಡಿಗಳು ಹಬ್ಬಿಸಿದ್ದರೆ ಇಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿರಲಿಲ್ಲವೇನೋ. ತನ್ನ ಸಾವಿನ ಬಗ್ಗೆ ಸ್ವತಃ ಅವರೇ ನ್ಯೂಸ್ ಮಾಡಿದ್ದರು. ಆ ಬಳಿಕ ಫೇಕ್ ಎಂದು ಹೇಳಿಕೊಂಡರು. ‘ಗರ್ಭಕಂಠ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಈ ರೀತಿ ಮಾಡಿದೆ’ ಎಂದು ಪೂನಂ ಸ್ಪಷ್ಟನೆ ನೀಡಿದರು. ಈ ಬೆನ್ನಲ್ಲೇ ಅವರ ಬಗ್ಗೆ ಮತ್ತೊಂದು ಫೇಕ್ ನ್ಯೂಸ್ ಹಬ್ಬಿತ್ತು. ಈ ಬಗ್ಗೆ ಸರ್ಕಾರದ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ.
ಗರ್ಭಕಂಠ ಕ್ಯಾನ್ಸರ್ನಿಂದ ಅನೇಕ ಮಹಿಳೆಯರು ಮೃತಪಡುತ್ತಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂಬ ಉದ್ದೇಶದಿಂದ ಪೂನಂ ಪಾಂಡೆ ಅವರು ತಮ್ಮದೇ ಸಾವಿನ ಸುದ್ದಿಯನ್ನು ಹಬ್ಬಿಸಿದರು. ‘ಪೂನಂ ಪಾಂಡೆ ಗರ್ಭಕಂಠ ಕ್ಯಾನ್ಸರ್ನಿಂದ ಮೃತಪಟ್ಟರು’ ಎಂದು ಅವರ ಇನ್ಸ್ಟಾಗ್ರಾಮ್ ಖಾತೆ ಮೂಲಕ ಪೋಸ್ಟ್ ಮಾಡಲಾಯಿತು. ಅವರ ಮ್ಯಾನೇಜರ್ ಕೂಡ ಇದೇ ವಿಚಾರವನ್ನು ಹೇಳಿದ್ದರು. ನಂತರ ಇದರ ಹಿಂದಿನ ಉದ್ದೇಶವನ್ನು ಹೇಳಿಕೊಂಡಿದ್ದರು. ಈಗ ಅವರ ಬಗ್ಗೆ ಹೊಸ ಸುದ್ದಿ ಹರಿದಾಡಿದೆ.
‘ಕೇಂದ್ರ ಆರೋಗ್ಯ ಸಚಿವಾಲಯವು ಗರ್ಭಕಂಠ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನಕ್ಕೆ ಪೂನಂ ಪಾಂಡೆ ಅಂಬಾಸಿಡರ್ ಆಗಿದ್ದಾರೆ’ ಎನ್ನುವ ಸುದ್ದಿ ಹರಿದಾಡಿತ್ತು. ಇದಕ್ಕೆ ಕೇಂದ್ರ ಆರೋಗ್ಯ ಸಚಿವಾಲಯವು ಪಿಟಿಐಗೆ ಪ್ರತಿಕ್ರಿಯೆ ನೀಡಿದೆ. ಆ ರೀತಿಯ ಆಲೋಚನೆ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಪೂನಂ ಅವರ ತಂಡ ಕೂಡ ಕೇಂದ್ರ ಸರ್ಕಾರದ ಜೊತೆ ಮಾತುಕತೆಗೆ ಇಳಿದಿತ್ತು ಎಂದು ಹೇಳಲಾಗಿದೆ.
ಪೂನಂ ಪಾಂಡೆ ಅವರಿಗೆ ಚಿತ್ರರಂಗದಲ್ಲಿ ದೊಡ್ಡ ಗೆಲುವು ಸಿಕ್ಕಿಲ್ಲ. ರಿಯಾಲಿಟಿ ಶೋಗಳಲ್ಲೂ ಅವರು ಸ್ಪರ್ಧಿಸಿದ್ದರು. ವಿವಾದಕ್ಕೂ ಅವರಿಗೂ ಎಲ್ಲಿಲ್ಲದ ನಂಟು. ಅವರ ಸಾವಿನ ಸುದ್ದಿ ಕೂಡ ಸಾಕಷ್ಟು ವಿವಾದ ಉಂಟು ಮಾಡಿತ್ತು. ಅವರ ವಿರುದ್ಧ ಪೊಲೀಸರು ಎಫ್ಐಆರ್ ಕೂಡ ದಾಖಲು ಮಾಡಿಕೊಂಡಿದ್ದಾರೆ. ಪೂನಂ ಪಾಂಡೆ ಉದ್ದೇಶ ಒಳ್ಳೆಯದೇ ಆಗಿದೆ. ಆದರೆ, ಇದಕ್ಕೆ ಅವರು ತುಳಿದ ಮಾರ್ಗ ಸರಿ ಇಲ್ಲ ಎಂದು ಅನೇಕರು ಟೀಕೆ ಮಾಡಿದ್ದಿದೆ.
ಇದನ್ನೂ ಓದಿ: ಸಾವಿನ ಸುದ್ದಿ ಹಬ್ಬಿಸೋ ಪ್ಲ್ಯಾನ್ ಪೂನಂ ಪಾಂಡೆಯದ್ದಾಗಿರಲಿಲ್ಲ; ಇದರ ಹಿಂದಿರೋರು ಯಾರು?
ಪೂನಂ ಪಾಂಡೆ ನಿರ್ಧಾರಕ್ಕೆ ಸಾಕಷ್ಟು ಪರ-ವಿರೋಧ ಚರ್ಚೆಗಳು ನಡೆದಿವೆ. ಆರ್ಜಿವಿ ಅಂಥ ಅನೇಕರು ಪೂನಂ ಬೆಂಬಲಕ್ಕೆ ನಿಂತಿದ್ದಾರೆ. ತಮ್ಮ ಸಾವಿನ ಸುದ್ದಿ ಹಬ್ಬಿಸಿ ಈ ಬಗ್ಗೆ ಜಾಗೃತಿ ಮೂಡಿಸಿದ್ದಕ್ಕೆ ಭೇಷ್ ಎಂದಿದ್ದಾರೆ. ಕೆಲವರು ಅವರನ್ನು ಟೀಕೆ ಮಾಡಿದ್ದಾರೆ. ಸದ್ಯ ಸರ್ಕಾರ ಈ ಕ್ಯಾನ್ಸರ್ನ ತಡೆಯಲು ಕ್ರಮ ಕೈಗೊಳ್ಳುತ್ತಿದೆ. 9-14 ವರ್ಷ ವಯಸ್ಸಿನ ಬಾಲಕಿಯರು ಎಚ್ಪಿವಿ ವ್ಯಾಕ್ಸಿನ್ ಪಡೆಯುವಂತೆ ಉತ್ತೇಜಿಸಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ