ಬಾಲಿವುಡ್ (Bollywood) ನಟ ಸುಶಾಂತ್ ಸಿಂಗ್ ರಜಪೂತ್ (Sushant Singh) ನಿಧನ ಹೊಂದ ಮೂರು ವರ್ಷಗಳಾಗಿವೆ. ಪ್ರಕರಣವನ್ನು ಮುಂಬೈ ಪೊಲೀಸರು (Mumbai Police) ಹಾಗೂ ಸಿಬಿಐ ತನಿಖೆ ನಡೆಸುತ್ತಲೇ ಇದೆ. ಆದರೆ ಈವರೆಗೆ ಸುಶಾಂತ್ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಈಗ ಈ ಪ್ರಕರಣದಲ್ಲಿ ಮಹತ್ವದ ಸುಳಿವೊಂದು ತನಿಖಾ ಸಂಸ್ಥೆಗೆ ಲಭ್ಯವಾಗಿದೆಯಂತೆ. ಹೀಗೆಂದು ಸ್ವತಃ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ಣವೀಸ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ದೇವೇಂದ್ರ ಫಡ್ಣವೀಸ್ ”ದಿಶಾ ಸಾಲಿಯಾನ್ ಹಾಗೂ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಮಹತ್ವದ ಸಾಕ್ಷ್ಯಗಳು ಲಭ್ಯವಾಗಿವೆ. ಆದರೆ ಆ ಸಾಕ್ಷ್ಯಗಳು ನಿಖರವೇ, ನಂಬಲರ್ಹವೇ, ಸತ್ಯವಾದುವೇ ಎಂಬ ಪರಿಶೀಲನೆ ನಡೆಯುತ್ತಿವೆ. ಕೆಲವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ, ಕೆಲವರ ಹೇಳಿಕೆ ದಾಖಲಿಸಿಕೊಳ್ಳುವುದು ಹಾಗೂ ಸಾಕ್ಷ್ಯಗಳ ಪರಿಶೀಲನೆ ಬಾಕಿ ಇದೆ” ಎಂದಿದ್ದಾರೆ.
ಸುಶಾಂತ್ ಸಿಂಗ್ ಹಾಗೂ ದಿಶಾ ಸಾಲಿಯಾನ್ ಪ್ರಕರಣದ ತನಿಖೆಯಲ್ಲಿ ಅಂತಿಮ ವರದಿ ಇನ್ನೂ ಸಲ್ಲಿಸಿಲ್ಲ, ಈಗಲೂ ತನಿಖೆ ಚಾಲ್ತಿಯಲ್ಲಿದೆ. ಸಾಕ್ಷ್ಯಗಳನ್ನು ನೀಡುವಂತೆ ಜನರನ್ನು ಕೋರಿದ್ದೆವು ಹಲವರು ಕೊಟ್ಟಿದ್ದಾರೆ. ಅವರ ಸಾಕ್ಷ್ಯಗಳು ಸರಿಯಾಗಿವೆಯೇ ಎಂಬುದರ ತನಿಖೆ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಮಹತ್ವದ ವಿಷಯಗಳು ಗೊತ್ತಾಗಿವೆ. ಈ ಪ್ರಕರಣಗಳ ಬಗ್ಗೆ ಮಹತ್ವದ ಹೇಳಿಕೆಯನ್ನು ನೀಡುವ ಸಮಯ ಹತ್ತಿರ ಬಂದಿದೆ, ಮಾತನಾಡುವ ಸಮಯದಲ್ಲಿ ನಾನು ಆ ಬಗ್ಗೆ ಮಾತನಾಡುತ್ತೇನೆ” ಎಂದಿದ್ದಾರೆ.
ಇದನ್ನೂ ಓದಿ:ಮರಣೋತ್ತರ ಪರೀಕ್ಷೆ ವೇಳೆ ಸುಶಾಂತ್ ಸಿಂಗ್ ದೇಹದ ಮೇಲಿತ್ತು ಗಾಯ; ಸತ್ಯ ಮುಚ್ಚಿಟ್ರಾ ವೈದ್ಯರು?
ಸುಶಾಂತ್ ಸಿಂಗ್ ರಜಪೂತ್ 2020 ರ ಜೂನ್ 14ರಂದು ನಿಧನ ಹೊಂದಿದ್ದರು. ಮುಂಬೈನ ಅಪಾರ್ಟ್ಮೆಂಟ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿತ್ತು. ಅದಕ್ಕೆ ಕೆಲವು ದಿನಗಳ ಮುಂಚೆಯಷ್ಟೆ ಸುಶಾಂತ್ರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಮಹಡಿ ಮೇಲಿಂದ ಬಿದ್ದು ನಿಧನ ಹೊಂದಿದ್ದರು. ಈ ಎರಡೂ ಸಾವಿಗೆ ಪರಸ್ಪರ ಸಂಬಂಧವಿದೆ ಎನ್ನಲಾಗಿತ್ತು. ಸುಶಾಂತ್ ಸಿಂಗ್ ಸಾವು ದೇಶ, ವಿದೇಶಗಳಲ್ಲಿ ಸುದ್ದಿಯಾಯ್ತು. ಬಾಲಿವುಡ್ನಲ್ಲಿಯಂತೂ ದೊಡ್ಡ ಅಲ್ಲೋಲ-ಕಲ್ಲೋಲವನ್ನೇ ಸೃಷ್ಟಿಸಿತ್ತು.
ಸುಶಾಂತ್ ಸಿಂಗ್ ಸಾವಿನ ಬಳಿಕ ಬಾಲಿವುಡ್ನ ಡ್ರಗ್ಸ್ ಪ್ರಕರಣ ಬಹಿರಂಗವಾಗಿ ಸುಶಾಂತ್ರ ಮಾಜಿ ಗರ್ಲ್ಫ್ರೆಂಡ್ ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಬಂಧನವಾಯ್ತು. ಕರಣ್ ಜೋಹರ್, ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್, ಅರ್ಜುನ್ ರಾಮ್ಪಾಲ್, ಮಹೇಶ್ ಭಟ್, ರಕುಲ್ ಪ್ರೀತ್ ಸಿಂಗ್ ಇನ್ನು ಹಲವು ಖ್ಯಾತನಾಮರಿಗೆ ನೊಟೀಸ್ ನೀಡಿ ವಿಚಾರಣೆ ನಡೆಸಲಾಯ್ತು. ಆದರೆ ಈ ವರೆಗೆ ಸುಶಾಂತ್ ಸಿಂಗ್ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ