ಪ್ರಿಯಾಂಕಾ ಚೋಪ್ರಾ ಈಗ ಹಾಲಿವುಡ್ ನಟಿ. ಬಾಲಿವುಡ್ನಿಂದ ಬಹುತೇಕ ದೂರ ಆಗಿಬಿಟ್ಟಿದ್ದಾರೆ. ಆದರೆ ಈಗ ಅಚಾನಕ್ಕಾಗಿ ಭಾರತಕ್ಕೆ ಬಂದಿದ್ದಾರೆ. ಸಾಮಾನ್ಯವಾಗಿ ಪ್ರಿಯಾಂಕಾ ಚೋಪ್ರಾ ಭಾರತಕ್ಕೆ ಬರುವುದು ತಮ್ಮ ಕುಟುಂಬ ಸದಸ್ಯರ ಮದುವೆ ಇನ್ನಿತರೆ ಕಾರ್ಯಕ್ರಮ ಅಥವಾ ಅಂಬಾನಿಯ ಕಾರ್ಯಕ್ರಮಗಳಿಗೆ ಮಾತ್ರ. ಹಾಗಾಗಿ ಬಂದಾಗೆಲ್ಲ ಮುಂಬೈನಲ್ಲಿ ವಿಮಾನ ಇಳಿದು ಅಲ್ಲಿಯೇ ಕೆಲ ಸಮಯ ಇದ್ದು ಕಾರ್ಯಕ್ರಮ ಮುಗಿಸಿ ಅಮೆರಿಕಕ್ಕೆ ಮರಳುತ್ತಾರೆ.
ಆದರೆ ಈ ಬಾರಿ ಪ್ರಿಯಾಂಕಾ ಚೋಪ್ರಾ ಬಿಸಿಲ ನಗರ ಹೈದರಾಬಾದ್ಗೆ ಬಂದಿದ್ದಾರೆ. ಅದೂ ಗುಟ್ಟಾಗಿ. ಪ್ರಿಯಾಂಕಾ ಚೋಪ್ರಾ, ಹೈದರಾಬಾದ್ಗೆ ಬಂದಿರುವುದು ಯಾವುದೋ ಕಾರ್ಯಕ್ರಮಕ್ಕೆ ಅಲ್ಲ ಬದಲಿಗೆ ನಿರ್ದೇಶಕ ರಾಜಮೌಳಿಯನ್ನು ಭೇಟಿ ಆಗಲು. ಮೂಲಗಳ ಪ್ರಕಾರ ರಾಜಮೌಳಿಯ ಮುಂದಿನ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿಯಂತೆ. ಅದೇ ಸಿನಿಮಾದ ಕಾರಣಕ್ಕಾಗಿ ಈಗ ಪ್ರಿಯಾಂಕಾ ಚೋಪ್ರಾ ಹೈದರಾಬಾದ್ಗೆ ಬಂದಿಳಿದಿದ್ದಾರೆ.
ಕೆಲ ದಿನಗಳ ಹಿಂದಷ್ಟೆ ರಾಜಮೌಳಿ ಹಾಗೂ ಮಹೇಶ್ ಬಾಬು ಅವರ ಹೊಸ ಸಿನಿಮಾದ ಮುಹೂರ್ತ ಕಾರ್ಯಕ್ರಮ ಹೈದರಾಬಾದ್ನಲ್ಲಿ ನೆರವೇರಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಪ್ರಿಯಾಂಕಾ ಚೋಪ್ರಾ ನಟಿಸುತ್ತಿದ್ದು, ಸಿನಿಮಾದ ಫೋಟೊಶೂಟ್ಗಾಗಿ ಈಗ ಅವರು ಹೈದರಾಬಾದ್ಗೆ ಬಂದಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದ ಚಿತ್ರೀಕರಣ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು, ಅದಕ್ಕೆ ಮುಂಚೆ ಎಲ್ಲ ನಟರಿಗೂ ತಾಲೀಮು ಮಾಡಿಸುತ್ತಿದ್ದಾರೆ ರಾಜಮೌಳಿ. ಈ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲೆಂದು ಪ್ರಿಯಾಂಕಾ ಇದೀಗ ಹೈದರಾಬಾದ್ಗೆ ಬಂದಿದ್ದಾರೆ.
ಇದನ್ನೂ ಓದಿ:ರಾಜಮೌಳಿಯನ್ನೇ ಬ್ಯಾನ್ ಮಾಡಿತ್ತು ತೆಲುಗು ಚಿತ್ರರಂಗ, ಕಾರಣ ಏನು ಗೊತ್ತೆ?
ರಾಜಮೌಳಿ ಮತ್ತು ಮಹೇಶ್ ಬಾಬು ಅವರ ಮುಂದಿನ ಸಿನಿಮಾ ಅಡ್ವೇಂಚರ್ ಕತೆಯನ್ನು ಒಳಗೊಂಡಿದ್ದು, ಸಿನಿಮಾದ ಕತೆ ಕಾಡುಗಳ ನಡುವೆ ನಡೆಯುವ ಅದ್ಭುತ ಸಾಹಸಗಳನ್ನು ಒಳಗೊಂಡಿದೆ. ಈ ಸಿನಿಮಾದ ಚಿತ್ರೀಕರಣಕ್ಕೆ ಹಲವು ಅತ್ಯುತ್ತಮ ಮತ್ತು ಹೊಸ ರೀತಿಯ ತಂತ್ರಜ್ಞಾನಗಳನ್ನು ರಾಜಮೌಳಿ ಬಳಸುತ್ತಿದ್ದು, ಇದೇ ಕಾರಣಕ್ಕೆ ಮೊದಲೇ ಸಿನಿಮಾದ ನಟ-ನಟಿಯರಿಗೆ ತರಬೇತಿ ನೀಡಿ ಬಳಿಕ ಚಿತ್ರೀಕರಣ ಪ್ರಾರಂಭ ಮಾಡಲಿದ್ದಾರೆ. ಈ ಕಾರಣಕ್ಕೆ ಸಿನಿಮಾದಲ್ಲಿ ನಟಿಸುತ್ತಿರುವ ಎಲ್ಲ ನಟರು ಹೈದರಾಬಾದ್ನಲ್ಲಿ ಇದೀಗ ತರಬೇತಿ ಪಡೆಯುತ್ತಿದ್ದಾರೆ.
ಪ್ರಿಯಾಂಕಾ ಚೋಪ್ರಾ ಇದೀಗ ಎರಡು ಹಾಲಿವುಡ್ ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದು ಆಕ್ಷನ್ ವೆಬ್ ಸೀರೀಸ್ ಒಂದರಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸುತ್ತಿದ್ದಾರೆ. ಅದರ ಜೊತೆಗೆ ಒಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾದಲ್ಲಿಯೂ ಪ್ರಿಯಾಂಕಾ ಚೋಪ್ರಾ ನಟಿಸುತ್ತಿದ್ದಾರೆ. ಇದರ ಜೊತೆಗೆ ಝೋಯಾ ಅಖ್ತರ್ ನಿರ್ದೇಶನ ಮಾಡಲಿರುವ ಸಿನಿಮಾದಲ್ಲಿ ಆಲಿಯಾ ಭಟ್, ಕರೀನಾ ಕಪೂರ್ ಅವರುಗಳ ಜೊತೆಗೆ ಸಿನಿಮಾ ಒಂದರಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ