ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಿಂದಾಗಿ ಭೀತಿಯ ವಾತಾವರಣ ನಿರ್ಮಾಣ ಆಗಿದೆ. ಉಕ್ರೇನ್ನ ಹಲವೆಡೆ ಬಾಂಬ್ ಸಿಡಿಯುತ್ತಿದ್ದು, ಜನರ ಭಯದಿಂದ ಬದುಕುತ್ತಿದ್ದಾರೆ. ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳ ಪ್ರಜೆಗಳು ಉಕ್ರೇನ್ನಲ್ಲಿ ಸಿಲುಕಿಕೊಂಡಿದ್ದಾರೆ. ರಷ್ಯಾ ಘೋಷಿಸಿರುವ ಈ ಯುದ್ಧದ ಬಗ್ಗೆ ವಿಶ್ವಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ಯಾವುದೇ ಸಮಸ್ಯೆಯನ್ನು ದೇಶಗಳು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕೇ ಹೊರತು ಯುದ್ಧ ಯಾವುದಕ್ಕೂ ಪರಿಹಾರವಲ್ಲ ಎಂಬ ಅಭಿಪ್ರಾಯವನ್ನು ಎಲ್ಲರೂ ವ್ಯಕ್ತಪಡಿಸುತ್ತಿದ್ದಾರೆ. ರಷ್ಯಾ ಪ್ರಜೆಗಳು ಕೂಡ ಯುದ್ಧವನ್ನು ವಿರೋಧಿಸುತ್ತಿದ್ದಾರೆ. ವಿಶ್ವಾದ್ಯಂತ ಇರುವ ಅನೇಕ ಸೆಲೆಬ್ರಿಟಿಗಳು ಸಹ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳಾದ ಸೋನು ಸೂದ್, ಸ್ವರಾ ಭಾಸ್ಕರ್, ರಿಚಾ ಚಡ್ಡಾ, ಜಾವೇದ್ ಅಖ್ತರ್, ಪ್ರಿಯಾಂಕಾ ಚೋಪ್ರಾ, ತಿಲೋತ್ತಮಾ ಶೋಮೆ ಮುಂತಾದವರು ಈ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಭಾರತದ ಅನೇಕ ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಸಿಲುಕಿಕೊಂಡಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಆದಷ್ಟು ಬೇಗ ತಮ್ಮನ್ನು ಭಾರತಕ್ಕೆ ವಾಪಸ್ ಕರೆಸಿಕೊಳ್ಳಿ ಎಂದು ಸಹಾಯಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ. ಅವರಿಗೆ ಭಾರತ ಸರ್ಕಾರದಿಂದ ಸೂಕ್ತ ಸಮಯಕ್ಕೆ ನೆರವು ಸಿಗುವಂತಾಗಲಿ ಎಂದು ಸೆಲೆಬ್ರಿಟಿಗಳು ಒತ್ತಾಯಿಸುತ್ತಿದ್ದಾರೆ. ಒಟ್ಟಿನಲ್ಲಿ ಯುದ್ಧಕ್ಕೆ ಎಲ್ಲರೂ ಖಂಡನೆ ವ್ಯಕ್ತಪಡಿಸುತ್ತಿದ್ದಾರೆ.
‘18 ಸಾವಿರ ವಿದ್ಯಾರ್ಥಿಗಳು ಮತ್ತು ಕುಟುಂಬಗಳು ಉಕ್ರೇನ್ನಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ಭಾರತಕ್ಕೆ ಕರೆತರಲು ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂಬ ನಂಬಿಕೆ ನನಗೆ ಇದೆ. ಅವರನ್ನು ಕರೆತರಲು ಪರ್ಯಾಯವಾಗಿ ಏನಾದರೂ ಮಾರ್ಗ ಕಂಡುಕೊಳ್ಳಬೇಕು ಎಂದು ನಾನು ಭಾರತೀಯ ರಾಯಭಾರ ಕಚೇರಿಯನ್ನು ಒತ್ತಾಯಿಸುತ್ತೇನೆ. ಎಲ್ಲರ ಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ’ ಎಂದು ಸೋನು ಸೂದ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
There are 18000 Indian students and many families who are struck in Ukraine, I am sure Government must be trying their best to get them back. I urge Indian Embassy to find an alternate route for their evacuation. Praying for their safety. #IndiansInUkraine
— sonu sood (@SonuSood) February 24, 2022
‘ಕೊವಿಡ್ ಜೊತೆಗೆ ಕ್ಯಾನ್ಸರ್ನಿಂದ ಬಳಲುತ್ತಿರುವ ನನ್ನ ತಾಯಿಯ ಬಗ್ಗೆ ನಾನು ಸದಾ ಚಿಂತೆ ಮಾಡುತ್ತೇನೆ. ಈ ಯುದ್ಧದ ಮಧ್ಯೆ ಕಾನ್ಸರ್ ಪೀಡಿತರು ಮತ್ತು ಅವರ ಕುಟುಂಬಗಳನ್ನು ನೆನಪಿಸಿಕೊಂಡರೆ ನೋವಾಗುತ್ತದೆ. ಯುದ್ಧಕ್ಕಿಂತ ಕೆಟ್ಟದ್ದು ಬೇರೆ ಯಾವುದೂ ಇಲ್ಲ’ ಎಂದು ಖ್ಯಾತ ನಟಿ ತಿಲೋತ್ತಮಾ ಶೋಮೆ ಹೇಳಿದ್ದಾರೆ.
ಈ ನಡುವೆ ನಟ ಅರ್ಷದ್ ವಾರ್ಸಿ ಅವರು ಉಕ್ರೇನ್-ರಷ್ಯಾ ನಡುವಿನ ಯುದ್ಧದ ಕುರಿತು ಮೀಮ್ವೊಂದನ್ನು ಶೇರ್ ಮಾಡಿದ್ದರು. ತಾವು ನಟಿಸಿದ ‘ಗೋಲ್ಮಾಲ್’ ಸಿನಿಮಾದ ಸನ್ನಿವೇಶವೊಂದನ್ನು ಯುದ್ಧಕ್ಕೆ ಹೋಲಿಸಿ ಈ ಮೀಮ್ ಸಿದ್ಧಪಡಿಸಲಾಗಿತ್ತು. ಯುದ್ಧದಂತಹ ಗಂಭೀರ ವಿಚಾರದಲ್ಲಿ ತಮಾಷೆ ಮಾಡಿದ್ದಕ್ಕಾಗಿ ಅರ್ಷದ್ ವಾರ್ಸಿ ಅವರನ್ನು ‘ಪ್ರಜ್ಞಾಹೀನ ವ್ಯಕ್ತಿ’ ಎಂದು ಜನರು ಟ್ರೋಲ್ ಮಾಡಿದ್ದಾರೆ.
ಅಮೆರಿಕದಲ್ಲಿ ಸೆಟಲ್ ಆಗಿರುವ ನಟಿ ಪ್ರಿಯಾಂಕಾ ಚೋಪ್ರಾ ಅವರು ಜಾಗತಿಕವಾಗಿ ನಡೆಯುವ ಅನೇಕ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯೆ ನೀಡುತ್ತಾರೆ. ಅದೇ ರೀತಿ ಅವರು ಉಕ್ರೇನ್-ರಷ್ಯಾ ಯುದ್ಧದ ಬಗ್ಗೆ ಮಾತನಾಡಿದ್ದಾರೆ. ‘ಉಕ್ರೇನ್ನಲ್ಲಿ ನಡೆಯುತ್ತಿರುವ ಘಟನೆಗಳು ಭಯಾನಕವಾಗಿವೆ. ಅಮಾಯಕ ಜನರು ತಮ್ಮ ಮತ್ತು ತಮ್ಮ ಪ್ರೀತಿಪಾತ್ರರರ ಜೀವ ಉಳಿಸಿಕೊಳ್ಳಲು ಭಯದಲ್ಲಿ ಬದುಕುತ್ತಿದ್ದಾರೆ. ಈ ಆಧುನಿಕ ಯುಗದಲ್ಲಿ ಇಂಥ ದುರಂತ ಆಗಲು ಹೇಗೆ ಸಾಧ್ಯ ಎಂಬುದನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ ಆಗಿದೆ. ಆದರೆ ಈ ಯುದ್ಧದ ಪರಿಣಾಮದಿಂದ ಮತ್ತೆ ಮತ್ತೆ ಇಂಥ ಘಟನೆಗಳು ನಡೆಯುತ್ತವೆ. ಯುದ್ಧ ನಡೆಯುತ್ತಿರುವ ಜಾಗದಲ್ಲಿ ನಮ್ಮ-ನಿಮ್ಮಂತೆ ಅನೇಕ ಅಮಾಯಕರು ಇದ್ದಾರೆ’ ಎಂದು ಪ್ರಿಯಾಂಕಾ ಚೋಪ್ರಾ ಅವರು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: