ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿ ಫೇಮಸ್ ಆಗಿರುವ ನಿರ್ದೇಶಕ ರಾಜ್ಕುಮಾರ್ ಸಂತೋಷಿ (Rajkumar Santhoshi) ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ಆಗಿದೆ. ಚೆಕ್ ಬೌನ್ಸ್ ಕೇಸ್ನಲ್ಲಿ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟ್ ಈ ಆದೇಶ ನೀಡಿದೆ. ಆಮಿರ್ ಖಾನ್, ಸನ್ನಿ ಡಿಯೋಲ್ ಜೊತೆಗೆ ‘ಲಾಹೋರ್ 1947’ ಸಿನಿಮಾನ ಅವರು ನಿರ್ದೇಶನ ಮಾಡಬೇಕಿತ್ತು. ಈಗ ಅವರಿಗೆ ಸಂಕಷ್ಟ ಎದುರಾಗಿದೆ. ಅವರಿಗೆ ಬಂಧನ ಭೀತಿ ಎದುರಾಗಿದೆ.
ಜಾಮ್ನಗರ್ ನಿವಾಸಿ ಹಾಗೂ ಶ್ರೀಜಿ ಶಿಪ್ಪಿಂಗ್ ಮಾಲೀಕ ಅಶೋಕ್ ಲಾಲ್ ಅವರ ಬಳಿ ರಾಜ್ಕುಮಾರ್ ಸಂತೋಷಿ ಅವರು 1 ಕೋಟಿ ಹಣ ಪಡೆದಿದ್ದರು. 2015ರಲ್ಲಿ ಪಡೆದ ಹಣ ಇದಾಗಿತ್ತು. ಈ ಹಣವನ್ನು ಹಿಂದಿರುಗಿಸಲು 10 ಲಕ್ಷ ರೂಪಾಯಿಯ 10 ಚೆಕ್ನ ನಿರ್ದೇಶಕರು ಅಶೋಕ್ಲಾಲ್ಗೆ ನೀಡಿದ್ದರು. ಈ ಚೆಕ್ ಬೌನ್ಸ್ ಆಗಿತ್ತು. ಆ ಬಳಿಕ ರಾಜ್ಕುಮಾರ್ ಸಂತೋಷಿ ಅವರನ್ನು ಸಂಪರ್ಕಿಸಲು ಅಶೋಕ್ ಲಾಲ್ ಸಾಕಷ್ಟು ಪ್ರಯತ್ನಪಟ್ಟರು. ಆದರೆ ಯಾವುದೇ ಪ್ರಯೋಜನ ಆಗಲಿಲ್ಲ. ಆ ಬಳಿಕ ಅಶೋಕ್ ಲಾಲ್ ಅವರು ಕೇಸ್ ದಾಖಲು ಮಾಡಿದರು.
ಈ ಮೊದಲು ಜಾಮ್ನಗರ ನ್ಯಾಯಾಲಯ ನಿರ್ದೇಶಕ ಸಂತೋಷಿ ಅವರಿಗೆ ಪ್ರತಿ ಚೆಕ್ಗೆ 15 ಸಾವಿರ ರೂಪಾಯಿನ ಪರಿಹಾರ ಹಣ ನೀಡುವಂತೆ ಆದೇಶ ನೀಡಿತ್ತು. ಅಂದರೆ 1.50 ಲಕ್ಷ ರೂಪಾಯಿ ಪರಿಹಾರ ಹಣ ನೀಡಬೇಕಿತ್ತು. ಇದಕ್ಕೆ ಕಳೆದ ಏಪ್ರಿಲ್ 15ರವರೆಗೆ ಗಡುವು ನೀಡಲಾಗಿತ್ತು. ಆದರೆ, ರಾಜ್ಕುಮಾರ್ ಸಂತೋಷಿ ಇದಕ್ಕೆ ಬೆಲೆ ನೀಡಲಿಲ್ಲ. ಈ ಕಾರಣಕ್ಕೆ ಜಾಮ್ನಗರ್ ನ್ಯಾಯಾಲಯ ಅವರಿಗೆ ಎರಡು ವರ್ಷ ಜೈಲುಶಿಕ್ಷೆ ವಿಧಿಸಿದೆ. ಜೊತೆಗೆ ಅಶೋಕ್ ಲಾಲ್ಗೆ 2 ಕೋಟಿ ರೂಪಾಯಿ ನೀಡಬೇಕೆಂದು ಸೂಚಿಸಿದೆ.
ಇದನ್ನೂ ಓದಿ:‘ಒಂದು ಸರಳ ಪ್ರೇಮಕಥೆ’ ಸಿನಿಮಾ ನೋಡಿದ ಶಿವರಾಜ್ಕುಮಾರ್-ಗೀತಾ ದಂಪತಿ
ರಾಜ್ಕುಮಾರ್ ಸಂತೋಷಿ ಅವರು ಸನ್ನಿ ಡಿಯೋಲ್ ಹಾಗೂ ಆಮಿರ್ ಖಾನ್ ಜೊತೆ ಕೈ ಜೋಡಿಸಿದ್ದಾರೆ. ಈ ಚಿತ್ರಕ್ಕೆ ‘ಲಾಹೋರ್ 1947’ ಎಂದು ಟೈಟಲ್ ಇಡಲಾಗಿದೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಸಿನಿಮಾಗೆ ಆಮಿರ್ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಎಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ‘ಅಂದಾಜ್ ಅಪ್ನಾ ಅಪ್ನಾ’ ಸಿನಿಮಾದಲ್ಲಿ ಆಮಿರ್ ಖಾನ್ ಜೊತೆ ರಾಜ್ಕುಮಾರ್ ಸಂತೋಷಿ ಕೆಲಸ ಮಾಡಿದ್ದರು. ‘ಘಾಯಲ್’, ‘ದಾಮಿನಿ’, ‘ಘಾಟಕ್’ ಸಿನಿಮಾಗಳಲ್ಲಿ ಸನ್ನಿ ಡಿಯೋಲ್ ಜೊತೆ ರಾಜ್ಕುಮಾರ್ ಸಂತೋಷಿ ಕೆಲಸ ಮಾಡಿದ್ದರು.
1982ರಲ್ಲಿ ರಿಲೀಸ್ ಆದ ‘ಅರ್ಧ ಸತ್ಯ’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ರಾಜ್ಕುಮಾರ್ ಸಂತೋಷಿ ಕೆಲಸ ಮಾಡಿದರು. 1990ರ ‘ಘಾಯಲ್’ ಚಿತ್ರದ ಮೂಲಕ ನಿರ್ದೇಶಕನ ಕ್ಯಾಪ್ ತೊಟ್ಟರು. ನಂತರ ಹಲವು ಸಿನಿಮಾಗಳನ್ನು ಅವರು ನಿರ್ದೇಶನ ಮಾಡಿದರು. ಕೆಲವು ಸಿನಿಮಾಗಳನ್ನು ಅವರು ನಿರ್ಮಾಣ ಕೂಡ ಮಾಡಿದ್ದಾರೆ. ಈಗ ಅವರ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:08 pm, Sat, 17 February 24