ರಕುಲ್ ಪ್ರೀತ್ ಸಿಂಗ್ ಹೆಸರಿನಲ್ಲಿ ವಾಟ್ಸಪ್ ಮೂಲಕ ದೋಖಾ: ಎಚ್ಚರಿಕೆ ನೀಡಿದ ನಟಿ

ಈ ಮೊದಲು ರುಕ್ಮಿಣಿ ವಸಂತ್, ಅದಿತಿ ರಾವ್ ಹೈದರಿ ಮುಂತಾದ ನಟಿಯರ ಹೆಸರು ಬಳಸಿಕೊಳ್ಳಲಾಗಿತ್ತು. ಈಗ ರುಕುಲ್ ಪ್ರೀತಿ ಸಿಂಗ್ ಹೆಸರು ಬಳಸಿಕೊಂಡು ಜನರಿಗೆ ಮೋಸ ಮಾಡುವ ಪ್ರಯತ್ನ ನಡೆದಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ರಕುಲ್ ಪ್ರೀತ್ ಸಿಂಗ್ ಅವರು ಎಲ್ಲರಿಗೂ ಎಚ್ಚರಿಗೆ ನೀಡಿದ್ದಾರೆ.

ರಕುಲ್ ಪ್ರೀತ್ ಸಿಂಗ್ ಹೆಸರಿನಲ್ಲಿ ವಾಟ್ಸಪ್ ಮೂಲಕ ದೋಖಾ: ಎಚ್ಚರಿಕೆ ನೀಡಿದ ನಟಿ
Rakul Preet Singh

Updated on: Nov 24, 2025 | 9:48 PM

ಇಂಟರ್​ನೆಟ್ ಬಳಕೆ ಹೆಚ್ಚಿದಂತೆಲ್ಲ ಸೈಬರ್ (Cyber Crime) ಖದೀಮರ ಕರಾಮತ್ತು ಜಾಸ್ತಿ ಆಗುತ್ತಿದೆ. ಸೆಲೆಬ್ರಿಟಿಗಳ ಹೆಸರಿನಲ್ಲಿ ಜನರಿಗೆ ಮೋಸ ಮಾಡುವವರ ಜಾಲ ದೊಡ್ಡದಾಗುತ್ತಿದೆ. ಇತ್ತೀಚೆಗೆ ಹಲವು ನಟಿಯರು ಈ ಬಗ್ಗೆ ದೂರು ನೀಡಿದ್ದಾರೆ. ಈಗ ಖ್ಯಾತ ನಟಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಅವರು ಕೂಡ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ರಕುಲ್ ಪ್ರೀತ್ ಸಿಂಗ್ ಅವರ ಹೆಸರು ಹೇಳಿಕೊಂಡು ಕಿಡಿಗೇಡಿಗಳು ಎಲ್ಲರಿಗೂ ಮೆಸೇಜ್ ಮಾಡುತ್ತಿದ್ದಾರೆ. ಅದು ರಕುಲ್ ಪ್ರೀತ್ ಸಿಂಗ್ ಅವರ ಗಮನಕ್ಕೆ ಬಂದಿದೆ. ಆ ಬಗ್ಗೆ ಅವರು ಸ್ಕ್ರೀನ್ ಶಾಟ್ ಸಮೇತವಾಗಿ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.

8111067586 ಮೊಬೈಲ್ ಸಂಖ್ಯೆಯಿಂದ ಕಿಡಿಗೇಡಿ ಕೃತ್ಯ ಮಾಡಲಾಗಿದೆ. ವಾಟ್ಸಪ್ ಡಿಪಿಯಲ್ಲಿ ರಕುಲ್ ಪ್ರೀತ್ ಸಿಂಗ್ ಅವರ ಫೋಟೊವನ್ನು ಹಾಕಲಾಗಿದೆ. ಬಯೋ ವಿವರದಲ್ಲಿ ಅವರ ಸಿನಿಮಾ ಹೆಸರನ್ನು ಬರೆಯಲಾಗಿದೆ. ತಾನು ರುಕುಲ್ ಪ್​ರೀತ್ ಸಿಂಗ್ ಎಂದು ಹೇಳಿಕೊಂಡು ಹಲವರಿಗೆ ಈ ನಂಬರ್​ನಿಂದ ಮೆಸೇಜ್ ಕಳಿಸಲಾಗಿದೆ. ಆ ಮೂಲಕ ವಂಚಿಸಲು ಪ್ರಯತ್ನಿಸಲಾಗಿದೆ.

‘ಹಾಯ್ ಸ್ನೇಹಿತರೆ.. ಯಾರೋ ಒಬ್ಬರು ನನ್ನ ಹೆಸರಿನಲ್ಲಿ ಜನರಿಗೆ ವಾಟ್ಸಪ್ ಸಂದೇಶ ಕಳಿಸುತ್ತಿದ್ದಾರೆ. ದಯವಿಟ್ಟು ಗಮನಿಸಿ, ಇದು ನನ್ನ ನಂಬರ್ ಅಲ್ಲ. ಈ ನಂಬರ್ ಮೂಲಕ ಯಾವುದೇ ಮಾತುಕತೆ ನಡೆಸಬೇಡಿ. ದಯವಿಟ್ಟು ಬ್ಲಾಕ್ ಮಾಡಿ’ ಎಂದು ರಕುಲ್ ಪ್ರೀತ್ ಸಿಂಗ್ ಅವರು ಎಲ್ಲರಿಗೂ ಎಚ್ಚರಿಕೆ ನೀಡಿದ್ದಾರೆ. ಆ ಮೂಲಕ ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಲು ಅವರು ಪ್ರಯತ್ನಿಸಿದ್ದಾರೆ.

ಈ ಮೊದಲು ನಟಿ ಅದಿತಿ ರಾವ್ ಹೈದರಿ ಕೂಡ ಇದೇ ರೀತಿಯ ಮಾಹಿತಿ ಹಂಚಿಕೊಂಡಿದ್ದರು. ‘ನನ್ನ ಹೆಸರಿನಲ್ಲಿ ಯಾರೋ ವಾಟ್ಸಪ್ ಮಾಡುತ್ತಿದ್ದಾರೆ. ನನ್ನ ಫೋಟೋ ಬಳಸುತ್ತಿದ್ದಾರೆ. ಫೋಟೋಗ್ರಾಫರ್​​ಗಳಿಗೆ ಸಂದೇಶ ಕಳಿಸಿ ಫೋಟೋಶೂಟ್ ಬಗ್ಗೆ ವಿಚಾರಿಸುತ್ತಿದ್ದಾರೆ. ನಾನು ಈ ರೀತಿ ಮೆಸೇಜ್ ಕಳಿಸುವುದಿಲ್ಲ. ಎಲ್ಲವೂ ನನ್ನ ತಂಡದ ಮೂಲಕ ಬರುತ್ತದೆ. ಎಲ್ಲರೂ ಹುಷಾರಾಗಿರಿ’ ಎಂದು ಅದಿತಿ ರಾವ್ ಹೈದರಿ ಅವರು ಹೇಳಿದ್ದರು.

ಇದನ್ನೂ ಓದಿ: ರಕುಲ್ ಪ್ರೀತ್ ಸಿಂಗ್ ರೀತಿ ನೀವು ಕಸರತ್ತು ಮಾಡಬಲ್ಲಿರಾ? ವಿಡಿಯೋ ನೋಡಿ

‘ಕಾಂತಾರ: ಚಾಪ್ಟರ್ 1’ ಸಿನಿಮಾದ ನಟಿ ರುಕ್ಮಿಣಿ ವಸಂತ್ ಅವರಿಗೂ ಇದೇ ರೀತಿ ಆಗಿತ್ತು. 9445893273 ನಂಬರ್​ನಿಂದ ಕಿಡಿಗೇಡಿಗಳು ಹಲವರಿಗೆ ಕರೆ ಮಾಡುತ್ತಿದ್ದಾರೆ. ಅದು ರುಕ್ಮಿಣಿ ವಸಂತ್ ಅವರ ಗಮನಕ್ಕೆ ಬಂತು. ‘ಈ ಮೊಬೈಲ್ ಸಂಖ್ಯೆ ನನಗೆ ಸೇರಿದ್ದಲ್ಲ. ಇದರಿಂದ ಯಾವುದೇ ಮೆಸೇಜ್ ಅಥವಾ ಕರೆ ಬಂದರೆ ಅದು ಫೇಕ್. ಅದು ನಾನಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ದಯವಿಟ್ಟು ಅಂತಹ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ ಅಥವಾ ಅವರೊಂದಿಗೆ ತೊಡಗಿಸಿಕೊಳ್ಳಬೇಡಿ’ ಎಂದು ರುಕ್ಮಿಣಿ ವಸಂತ್ ಬರೆದುಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.