
ರಶ್ಮಿಕಾ ಮಂದಣ್ಣ (Rashmika Mandanna) ಈಗ ಪ್ಯಾನ್ ಇಂಡಿಯಾ ಸ್ಟಾರ್ ನಟಿ. ಅವರು ಮುಟ್ಟಿದ್ದೆಲ್ಲ ಚಿನ್ನ ಆಗುತ್ತಿದೆ. ಒಂದರ ಹಿಂದೊಂದು ಮೂರು ಅಲ್ಟ್ರಾ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರ ಬೆನ್ನಿಗಿದೆ. ರಶ್ಮಿಕಾ ಖಾತೆಯಲ್ಲಿ ಗೆಲುವುಗಳೇ ಹೆಚ್ಚಾಗಿವೆ. ಇದೇ ಕಾರಣಕ್ಕೆ ಎಲ್ಲ ಚಿತ್ರರಂಗದ ದೊಡ್ಡ ನಿರ್ಮಾಣ ಸಂಸ್ಥೆಗಳು, ಸ್ಟಾರ್ ನಾಯಕರು ಸಹ ರಶ್ಮಿಕಾರನ್ನು ಸಿನಿಮಾಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಬಾಲಿವುಡ್ನ ಸ್ಟಾರ್ ನಟ ರಣ್ಬೀರ್ ಕಪೂರ್ ಜೊತೆಗೆ ಈಗಾಗಲೇ ‘ಅನಿಮಲ್’ ಸಿನಿಮಾನಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ, ಇದೀಗ ಮತ್ತೊಮ್ಮೆ ಅವರೊಟ್ಟಿಗೆ ಹೊಸ ಪ್ರಾಜೆಕ್ಟ್ಗೆ ಜೊತೆಯಾಗಿದ್ದಾರೆ.
ರಣ್ಬೀರ್ ಕಪೂರ್ ಮತ್ತು ರಶ್ಮಿಕಾ ಅವರು ‘ಅನಿಮಲ್’ ಸಿನಿಮಾನಲ್ಲಿ ಒಟ್ಟಿಗೆ ನಟಿಸಿದ್ದರು. ಆ ಸಿನಿಮಾ ಭಾರಿ ದೊಡ್ಡ ಹಿಟ್ ಆದರೂ ಸಹ ರಶ್ಮಿಕಾ ಪಾತ್ರ ದೊಡ್ಡ ಮಟ್ಟದಲ್ಲಿ ಕ್ಲಿಕ್ ಆಗಲಿಲ್ಲ, ಬದಲಿಗೆ ಅದೇ ಸಿನಿಮಾನಲ್ಲಿ ಸಣ್ಣ ಪಾತ್ರ ಮಾಡಿದ್ದ ತೃಪ್ತಿ ದಿಮ್ರಿ ಸ್ಟಾರ್ ಆಗಿಬಿಟ್ಟರು. ಇದೀಗ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ರಣ್ಬೀರ್ ಕಪೂರ್ಗೆ ಜೋಡಿ ಆಗುತ್ತಿದ್ದಾರೆ. ಆದರೆ ಈ ಬಾರಿ ಸಿನಿಮಾಕ್ಕಾಗಿ ಅಲ್ಲ.
ರಣ್ಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಜಾಹೀರಾತಿಗಾಗಿ ಜೊತೆಯಾಗಿದ್ದಾರೆ. ಎಯು ಸ್ಮಾಲ್ ಫೈನ್ಯಾನ್ಸ್ ಬ್ಯಾಂಕ್ ನ ರಾಯಭಾರಿಯಾಗಿ ರಶ್ಮಿಕಾ ಮಂದಣ್ಣ ಮತ್ತು ರಣ್ಬೀರ್ ಕಪೂರ್ ಅವರುಗಳನ್ನು ನೇಮಿಸಿಕೊಳ್ಳಲಾಗಿದ್ದು, ಇಬ್ಬರೂ ಸಹ ಎಯು ಸ್ಮಾಲ್ ಫೈನ್ಯಾನ್ಸ್ ಬ್ಯಾಂಕಿನ ಜಾಹೀರಾತುಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಎಯು ಸ್ಮಾಲ್ ಫೈನ್ಯಾನ್ಸ್ ಬ್ಯಾಂಕ್ ನ ಡಿಜಿಟಲ್, ಟಿವಿ, ಪ್ರಿಂಟ್ ಎಲ್ಲ ರೀತಿಯ ಜಾಹೀರಾತುಗಳಲ್ಲಿ ರಣ್ಬೀರ್ ಮತ್ತು ರಶ್ಮಿಕಾ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ‘ಅನಿಮಲ್’ನಲ್ಲಿ ದೂರಾಗಿದ್ದ ಈ ಜೋಡಿ ಈಗ ಜಾಹೀರಾತಿನ ಮೂಲಕ ಒಂದಾಗುತ್ತಿದೆ.
ಇದನ್ನೂ ಓದಿ:ಗೆಳತಿಯೊಟ್ಟಿಗೆ ಕೈ-ಕೈ ಹಿಡಿದು ಸುತ್ತಾಡಿದ ರಶ್ಮಿಕಾ ಮಂದಣ್ಣ
ಈ ಹಿಂದೆ ಆಮಿರ್ ಖಾನ್ ಮತ್ತು ಕಿಯಾರಾ ಅಡ್ವಾಣಿ ಅವರುಗಳು ಈ ಬ್ಯಾಂಕಿನ ರಾಯಭಾರಿ ಆಗಿದ್ದರು. ಕೆಲವು ಒಳ್ಳೆಯ ಜಾಹೀರಾತುಗಳಲ್ಲಿ ಈ ಇಬ್ಬರು ಕಾಣಿಸಿಕೊಂಡಿದ್ದರು. ಮದುವೆಯ ಬಳಿಕ ವರ, ವಧುವಿನ ಮನೆಗೆ ಹೋಗುವ ಜಾಹೀರಾತು ಸಾಕಷ್ಟು ಚರ್ಚೆಯನ್ನೂ ಸಹ ಹುಟ್ಟು ಹಾಕಿತ್ತು. ಆದರೆ ಬ್ಯಾಂಕಿನ ಆಡಳಿತ ಮಂಡಳಿ ಆಮಿರ್ ಹಾಗೂ ಕಿಯಾರಾ ಅವರ ಒಪ್ಪಂದವನ್ನು ಕೊನೆಗೊಳಿಸಿ, ರಶ್ಮಿಕಾ ಮತ್ತು ರಣ್ಬೀರ್ ಕಪೂರ್ ಅವರೊಟ್ಟಿಗೆ ಒಪ್ಪಂದ ಮಾಡಿಕೊಂಡಿದೆ.
ಈ ಹೊಸ ಅವಕಾಶದ ಬಗ್ಗೆ ಮಾತನಾಡಿರುವ ರಶ್ಮಿಕಾ ಮಂದಣ್ಣ, ‘ಒಳ್ಳೆಯ ಬ್ಯಾಂಕು ಎಂದರೆ ಕೇವಲ ಹಣಕಾಸಿನ ವ್ಯವಹಾರ ಮಾತ್ರವಲ್ಲ. ನಂಬಿಕೆ ಮತ್ತು ಜೀವನವನ್ನು ಸರಳ ಮತ್ತು ಸುರಕ್ಷಿತ ಗೊಳಿಸುವಿಕೆ ಆಗಿದೆ. ಗ್ರಾಹಕರನ್ನು ಕೇಂದ್ರ ಭಾಗದಲ್ಲಿ ಇರಿಸಿಕೊಂಡು ಎಯು ಬ್ಯಾಂಕ್ ದೇಶದಾದ್ಯಂತ ಸೇವೆಯನ್ನು ವಿಸ್ತರಿಸುತ್ತಿದೆ. ಎಯು ಕುಟುಂಬದ ಭಾಗ ಆಗುತ್ತಿರುವುದಕ್ಕೆ ಸಂತೋಷವಿದೆ’ ಎಂದಿದ್ದಾರೆ. ರಣ್ಬೀರ್ ಕಪೂರ್ ಸಹ ಎಯು ಬ್ಯಾಂಕಿನ ಭಾಗ ಆಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ