ನಟ ರಣಬೀರ್ ಕಪೂರ್ ಅವರು ‘ಅನಿಮಲ್’ ಸಿನಿಮಾದ ಯಶಸ್ಸಿನ ಖುಷಿಯಲ್ಲಿ ಇದ್ದಾರೆ. ಅದಕ್ಕೆ ತಕ್ಕಂತೆ ಅವರಿಗೆ ಹಲವು ಅವಕಾಶಗಳು ಬರುತ್ತಿವೆ. ಈಗಾಗಲೇ ‘ರಾಮಾಯಣ’ ಸಿನಿಮಾದಲ್ಲಿ ರಾಮನ ಪಾತ್ರ ಮಾಡುವ ಅವಕಾಶ ರಣಬೀರ್ ಕಪೂರ್ ಅವರಿಗೆ ಸಿಕ್ಕಿದೆ. ‘ಅನಿಮಲ್’ ಸಿನಿಮಾದಲ್ಲಿ ಅವರು ಹೀರೋ ಆಗಿದ್ದರೂ ಕೂಡ ಆ ಪಾತ್ರಕ್ಕೆ ನೆಗೆಟಿವ್ ಶೇಡ್ ಇತ್ತು. ಆ ಕಾರಣದಿಂದಲೋ ಏನೋ ಅವರಿಗೆ ಅಂಥ ಪಾತ್ರಗಳೇ ಹುಡುಕಿಕೊಂಡು ಬರುತ್ತಿವೆ. ವರದಿಗಳ ಪ್ರಕಾರ, ‘ಧೂಮ್ 2’ ಸಿನಿಮಾಗೆ ರಣಬೀರ್ ಕಪೂರ್ ವಿಲನ್ ಆಗಲಿದ್ದಾರೆ.
ಹಿಂದಿ ಚಿತ್ರರಂಗದಲ್ಲಿ ‘ಧೂಮ್’ ಸರಣಿಯ ಸಿನಿಮಾಗಳು ಪ್ರೇಕ್ಷಕರ ಮನ ಗೆದ್ದಿವೆ. ‘ಧೂಮ್’ ಸಿನಿಮಾದಲ್ಲಿ ಜಾನ್ ಅಬ್ರಾಹಂ ಅವರು ನೆಗೆಟಿವ್ ರೋಲ್ ಮಾಡಿದ್ದರು. ‘ಧೂಮ್ 2’ ಚಿತ್ರದಲ್ಲಿ ಹೃತಿಕ್ ರೋಷನ್ ಅವರಿಗೆ ವಿಲನ್ ಪಾತ್ರ ಸಿಕ್ಕಿತು. ‘ಧೂಮ್ 3’ ಸಿನಿಮಾದಲ್ಲಿ ಆಮಿರ್ ಖಾನ್ ಅವರಿಗೆ ಆ ಪಾತ್ರ ಒಲಿಯಿತು. ಈಗ ‘ಧೂಮ್ 4’ ಸಿನಿಮಾದಲ್ಲಿ ರಣಬೀರ್ ಕಪೂರ್ ಅವರು ವಿಲನ್ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.
ಲೂಟಿಯ ಕಾನ್ಸೆಪ್ಟ್ ಇರುವ ಧೂಮ್ ಕಹಾನಿಯಲ್ಲಿ ಪೊಲೀಸ್ ಪಾತ್ರಕ್ಕೂ ಅಷ್ಟೇ ಮಹತ್ವ ಇದೆ. ‘ಧೂಮ್ 4’ ಸಿನಿಮಾದಲ್ಲಿ ರಣಬೀರ್ ಕಪೂರ್ ಎದುರು ಪೊಲೀಸ್ ಪಾತ್ರವನ್ನು ಯಾರು ಮಾಡಲಿದ್ದಾರೆ ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಸದ್ಯಕ್ಕೆ ಯಾವ ನಟ ಆ ಪಾತ್ರಕ್ಕೆ ಸೂಕ್ತ ಆಗುತ್ತಾರೆ ಎಂಬುದು ತೀರ್ಮಾನ ಆಗಿಲ್ಲ ಎನ್ನಲಾಗಿದೆ. ಇನ್ನು, ಈ ಸಿನಿಮಾವನ್ನು ಯಾರು ನಿರ್ದೇಶಿಸುತ್ತಾರೆ ಎಂಬುದು ಗೊತ್ತಾಗಿದೆ.
ಇದನ್ನೂ ಓದಿ: ರಣಬೀರ್-ಆಲಿಯಾ ಭಟ್ ಮಗಳು ರಹಾ ಕಪೂರ್ ಕ್ಯೂಟ್ ವಿಡಿಯೋ
ಈತನಕ ‘ಧೂಮ್’ ಸರಣಿಯ ಎಲ್ಲ ಸಿನಿಮಾಗಳಿಗೆ ವಿಜಯ್ ಕೃಷ್ಣ ಆಚಾರ್ಯ ಅಲಿಯಾಸ್ ವಿಕ್ಟರ್ ಅವರು ಸ್ಕ್ರಿಪ್ಟ್ ಬರೆದಿದ್ದರು. ‘ಧೂಮ್ 3’ ಸಿನಿಮಾವನ್ನು ಅವರು ನಿರ್ದೇಶನ ಮಾಡಿದ್ದಾರೆ. ಆ ಸಿನಿಮಾ ಕೂಡ ಸೂಪರ್ ಹಿಟ್ ಆಯಿತು. ಇಷ್ಟೆಲ್ಲ ಅನುಭವ ಇರುವ ಅವರಿಗೆ ‘ಧೂಮ್ 4’ ಸಿನಿಮಾವನ್ನು ಕೂಡ ನಿರ್ದೇಶಿಸುವ ಅವಕಾಶ ನೀಡಲಾಗುತ್ತಿದೆ ಎಂಬ ಮಾತು ಬಿ-ಟೌನ್ ಅಂಗಳದಲ್ಲಿ ಕೇಳಿಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.