ಬಿಡುಗಡೆ ಆಯ್ತು ‘ರಾಮಾಯಣ’ ಗ್ಲಿಂಪ್ಸ್, ಇದು ಸಾಮಾನ್ಯ ಸಿನಿಮಾ ಅಲ್ಲ

Ramayana Glimpse: ರಣ್​ಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ನಟನೆಯ ‘ರಾಮಾಯಣ’ ಸಿನಿಮಾ ಭಾರತದ ಅತಿ ದೊಡ್ಡ ಬಜೆಟ್​ನ ಸಿನಿಮಾ ಆಗಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಈ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತಿದೆ. ಇದೀಗ ಸಿನಿಮಾದ ಮೊದಲ ಭಾಗದ ಚಿತ್ರೀಕರಣ ಪೂರ್ಣವಾಗಿದ್ದು, ಸಿನಿಮಾದ ಟೀಸರ್ ಅಥವಾ ಗ್ಲಿಂಪ್ಸ್ ಅನ್ನು ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನ ನೆಕ್ಸಸ್ ಮಾಲ್ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಇಂದು ರಾಮಾಯಣ ಗ್ಲಿಂಪ್ಸ್ ಬಿಡುಗಡೆ ಮಾಡಲಾಗಿದೆ.

ಬಿಡುಗಡೆ ಆಯ್ತು ‘ರಾಮಾಯಣ’ ಗ್ಲಿಂಪ್ಸ್, ಇದು ಸಾಮಾನ್ಯ ಸಿನಿಮಾ ಅಲ್ಲ
Ramayana Glimps1

Updated on: Jul 03, 2025 | 1:39 PM

ಕೆಲ ವರ್ಷಗಳ ಹಿಂದೆ ಪ್ರಭಾಸ್ ನಟನೆಯ ರಾಮಾಯಣ ಆಧರಿಸಿದ ಸಿನಿಮಾ ‘ಆದಿಪುರುಷ್’ ಬಿಡುಗಡೆ ಆಗಿತ್ತು. ಆ ಸಿನಿಮಾ ಬಿಡುಗಡೆಗೆ ಮುಂಚೆ ಅದರ ಟೀಸರ್ ಬಿಡುಗಡೆ ಆಗಿತ್ತು. ಆಗ ಸಿನಿಮಾ ಬಹುವಾಗಿ ಟ್ರೋಲ್ ಆಗಿತ್ತು. ಅತ್ಯಂತ ಕೆಟ್ಟದಾಗಿ ತಂತ್ರಜ್ಞಾನವನ್ನು ಬಳಸಿಕೊಂಡಿರುವುದರ ಬಗ್ಗೆ ವ್ಯಂಗ್ಯ ಮಾಡಲಾಗಿತ್ತು. ಕೊನೆಗೆ ಸಿನಿಮಾದ ಸೋಲಿಗೂ ಇದೇ ಕಾರಣವಾಯ್ತು. ಇಂದು (ಜುಲೈ 3) ಅದೇ ರಾಮಾಯಣ ಕತೆ ಆಧರಿಸಿದ ‘ರಾಮಾಯಣ’ ಸಿನಿಮಾದ ಗ್ಲಿಂಪ್ಸ್ ಅಥವಾ ಟೈಟಲ್ ಟೀಸರ್ ಬಿಡುಗಡೆ ಆಗಿದೆ. ಕೇವಲ ಒಂದು ನಿಮಿಷದ ಟೀಸರ್ ಇದಾಗಿದ್ದು, ಇದರಿಂದಲೇ ತಿಳಿಯುತ್ತಿದೆ, ಇದು ಸಾಮಾನ್ಯ ಸಿನಿಮಾ ಅಂತೂ ಖಂಡಿತ ಅಲ್ಲವೆಂದು.

ಗ್ಲಿಂಪ್ಸ್ ಅನ್ನು ಬೆಂಗಳೂರಿನ ನೆಕ್ಸಸ್ ಮಾಲ್ ಸೇರಿದಂತೆ ವಿವಿಧ ನಗರಗಳಲ್ಲಿ ಬೇರೆ ಬೇರೆ ಐಮ್ಯಾಕ್ಸ್ ಪರದೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ‘ರಾಮಾಯಣ’ ಸಿನಿಮಾನಲ್ಲಿ ರಿಯಾಲಿಟಿ ಮತ್ತು ವಿಎಫ್​ಎಕ್ಸ್ ಎರಡನ್ನೂ ಬಳಸಿ ಅದ್ಭುತ ಲೋಕವೊಂದನ್ನು ಸೃಷ್ಟಿ ಮಾಡಿರುವುದು ಟೀಸರ್​​ನಿಂದ ತಿಳಿದು ಬರುತ್ತಿದೆ. ಬ್ರಹ್ಮ, ವಿಷ್ಣು, ಮಹೇಶ್ವರ ದೃಶ್ಯಗಳಿಂದ ಆರಂಭವಾಗುವ ಮೂರು ನಿಮಿಷ ಉದ್ದ ಟೀಸರ್ ಮೊದಲಿಂದ ಕೊನೆಯ ವರೆಗೂ ಅದ್ಧೂರಿತನವನ್ನು ತುಂಬಿಕೊಂಡಿದೆ. ಎಂದೂ ನೋಡಿರದ ರೀತಿಯ ಅದ್ಭುತ ವಿಎಫ್​ಎಕ್ಸ್, ಗ್ರಾಫಿಕ್ಸ್​ಗಳನ್ನು ಬಳಸಲಾಗಿದೆ.

ಟೀಸರ್​​ನಲ್ಲಿ ಸಿನಿಮಾದಲ್ಲಿ ನಟಿಸಿರುವವರ ಹೆಸರು, ತಂತ್ರಜ್ಞರ ಹೆಸರುಗಳನ್ನು ತೋರಿಸಲಾಗಿದೆ. ಇದಕ್ಕೆ ‘ಗೇಮ್ ಆಫ್ ಥ್ರೋನ್ಸ್’ ಅನ್ನು ನೆನಪಿಸುವಂತಿದೆ ಆ ಶೈಲಿ. ಸಿನಿಮಾಕ್ಕೆ ‘ರಾಮಾಯಣ’ ಎಂದು ಹೆಸರಿಡಲಾಗಿದ್ದು, ‘ನಮ್ಮ ಸತ್ಯ, ನಮ್ಮ ಇತಿಹಾಸ’ ಎಂಬ ಅಡಿಬರಹ ಕೊಡಲಾಗಿದೆ. ಟೀಸರ್​ನ ಕೊನೆಯ ಕೆಲವು ಸೆಕೆಂಡುಗಳಿದ್ದಾಗ, ರಣ್​ಬೀರ್ ಕಪೂರ್ ಮರದಿಂದ ಹಾರಿ ಬಿಲ್ಲು ಹೊಡೆಯುತ್ತಿರುವ ದೃಶ್ಯ ಕಾಣಿಸಿಕೊಳ್ಳುತ್ತದೆ. ಅದರ ಬಳಿಕ ಯಶ್ ರಾವಣನ ವೇಷದಲ್ಲಿರುವ ದೃಶ್ಯವಿದೆ. ಆದರೆ ಯಶ್ ಅವರ ಒಂದು ಕಣ್ಣನ್ನು ಮಾತ್ರವೇ ಟೀಸರ್​ನಲ್ಲಿ ತೋರಿಸಲಾಗಿದೆ. ಮಿಕ್ಕಂತೆ ಇನ್ಯಾವ ಪಾತ್ರಗಳ ದೃಶ್ಯಗಳನ್ನೂ ಸಹ ತೋರಿಸಲಾಗಿಲ್ಲ.

ಇದನ್ನೂ ಓದಿ:‘ರಾಮಾಯಣ’, ‘ಹರಿ ಹರ ವೀರ ಮಲ್ಲು’ ಟ್ರೈಲರ್ ಬಿಡುಗಡೆಗೆ ಮುಂಚೆಯೇ ಭಾರಿ ಹೈಪ್

‘ರಾಮಾಯಣ’ ಸಿನಿಮಾವನ್ನು ನಿತೀಶ್ ತಿವಾರಿ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ನಮಿತ್ ಮಲ್ಹೋತ್ರಾ ಬಂಡವಾಳ ಹೂಡಿದ್ದಾರೆ. ಇದು ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್​ನ ಸಿನಿಮಾ ಆಗಿದೆ. ಈ ಸಿನಿಮಾಕ್ಕೆ ಸುಮಾರು 800 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಲಾಗಿದೆ. ನಟ ಯಶ್ ಅವರು ಈ ಸಿನಿಮಾನಲ್ಲಿ ರಾವಣನ ಪಾತ್ರ ನಿರ್ವಹಿಸುತ್ತಿರುವ ಜೊತೆಗೆ ಸಹ ನಿರ್ಮಾಪಕರೂ ಆಗಿದ್ದಾರೆ. ಸಿನಿಮಾಕ್ಕೆ ಆಸ್ಕರ್ ವಿಜೇತ ಹನ್ಸ್​ಜೈಮರ್ ಸಂಗೀತ ನೀಡಿದ್ದಾರೆ. ಆಸ್ಕರ್ ವಿಜೇತ ಸ್ಟಂಟ್ ಕೋರಿಯೋಗ್ರಾಫರ್ ಸ್ಟಂಟ್ ಮಾಡಿದ್ದಾರೆ. ಹಾಲಿವುಡ್​ನ ಪ್ರತಿಷ್ಠಿತ ಸ್ಟುಡಿಯೋಗಳು ವಿಎಫ್​ಎಕ್ಸ್ ಕಾರ್ಯ ಮಾಡಿವೆ. ಸಿನಿಮಾ 2026ರ ದೀಪಾವಳಿಗೆ ಬಿಡುಗಡೆ ಆಗಲಿದೆ. 2027ರ ದೀಪಾವಳಿಗೆ ಸಿನಿಮಾದ ಎರಡನೇ ಭಾಗ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:18 pm, Thu, 3 July 25