ನಟ ರಣದೀಪ್ ಹೂಡಾ (Randeep Hooda) ಅವರು ಸಿನಿಮಾಗಳಿಂದ ಮಾತ್ರವಲ್ಲದೇ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕವೂ ಜನರಿಗೆ ಇಷ್ಟ ಆಗಿದ್ದಾರೆ. ಬಾಲಿವುಡ್ನಲ್ಲಿ ಗುರುತಿಸಿಕೊಂಡಿರುವ ಅವರಿಗೆ ಸಖತ್ ಬೇಡಿಕೆ ಇದೆ. ಈಗ ಅವರು ಒಂದು ಪುಣ್ಯದ ಕೆಲಸ ಮಾಡಿ ಸುದ್ದಿ ಆಗಿದ್ದಾರೆ. ಪ್ರವಾಹ (Flood) ಪೀಡಿತ ಪ್ರದೇಶದ ಜನರಿಗೆ ರಣದೀಪ್ ಹೂಡಾ ಅವರು ಸಹಾಯ ಮಾಡಿದ್ದಾರೆ. ಈ ಸಂದರ್ಭದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ನಟನ ಈ ಕಾರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ‘ಸ್ವಾತಂತ್ರ್ಯ ವೀರ್ ಸಾವರ್ಕರ್’ (Swatantra Veer Savarkar) ಸಿನಿಮಾದಲ್ಲಿ ರಣದೀಪ್ ಹೂಡಾ ನಟಿಸುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಜನರಿಗೆ ನಿರೀಕ್ಷೆ ಇದೆ.
ಹರಿಯಾಣದಲ್ಲಿ ಪ್ರವಾಹದಿಂದ ತತ್ತರಿಸಿದ ಪ್ರದೇಶಗಳಿಗೆ ರಣದೀಪ್ ಹೂಡಾ ಭೇಟಿ ನೀಡಿದ್ದಾರೆ. ತಲೆಗೆ ಕೇಸರಿ ಬಟ್ಟೆ ಕಟ್ಟಿಕೊಂಡು, ಜನರಿಗೆ ಅಗತ್ಯ ವಸ್ತುಗಳನ್ನು ವಿತರಿಸುತ್ತಿರುವ ಅವರ ಫೋಟೋ ಮತ್ತು ವಿಡಿಯೋ ವೈರಲ್ ಆಗಿದೆ. ಜಲಾವೃತ ಪ್ರದೇಶಗಳಲ್ಲಿ ಅವರು ಸಂಚರಿಸಿದ್ದಾರೆ. ಅಲ್ಲಿನ ಜನರಿಗೆ ಕುಡಿಯುವ ನೀರು, ಅಡುಗೆ ಸಾಮಾಗ್ರಿ, ಬಟ್ಟೆ ಮುಂತಾದ ವಸ್ತುಗಳನ್ನು ನೀಡಿದ್ದಾರೆ. ರಣದೀಪ್ ಹೂಡಾ ಅವರು ಈ ರೀತಿ ಸಹಾಯ ಮಾಡಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಕೇರಳದಲ್ಲಿ ಪ್ರವಾಹ ಉಂಟಾದಾಗಲೂ ಅವರು ಜನರ ನೆರವಿಗೆ ಧಾವಿಸಿದ್ದರು.
2001ರಿಂದಲೂ ರಣದೀಪ್ ಹೂಡಾ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇಷ್ಟು ದಿನ ನಟನಾಗಿ ಗುರುತಿಸಿಕೊಂಡಿದ್ದ ಅವರು ಈಗ ನಿರ್ದೇಶನದಲ್ಲೂ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿಭಾಯಿಸುವುದರ ಜೊತೆಗೆ ನಿರ್ದೇಶನವನ್ನೂ ಅವರೇ ಮಾಡಿದ್ದಾರೆ. ಈ ಚಿತ್ರದ ಶೂಟಿಂಗ್ ಮುಗಿದಿದೆ. ಸಾವರ್ಕರ್ ಜೀವನದ ಕುರಿತು ಈ ಚಿತ್ರ ನಿರ್ಮಾಣ ಆಗುತ್ತಿರುವುದರಿಂದ ಕೌತುಕ ಮೂಡಿದೆ.
ಇದನ್ನೂ ಓದಿ: Randeep Hooda: ಮಾಯಾವತಿ ಬಗ್ಗೆ ಕೀಳು ಜೋಕ್; ‘ರಾಧೆ’ ನಟ ರಣದೀಪ್ ಹೂಡಾಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛೀಮಾರಿ
‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾ ಮಾತ್ರವಲ್ಲದೇ ರಣದೀಪ್ ಹೂಡಾ ಅವರ ಕೈಯಲ್ಲಿ ಇನ್ನೂ ಅನೇಕ ಪ್ರಾಜೆಕ್ಟ್ಗಳಿಗೆ. ‘ಅನಾರಿ ಈಸ್ ಬ್ಯಾಕ್’, ‘21: ಬ್ಯಾಟಲ್ ಆಫ್ ಸರ್ಗಡಿ’ ಮುಂತಾದ ಸಿನಿಮಾಗಳಲ್ಲಿ ಅವರು ಅಭಿನಯಿಸುತ್ತಿದ್ದಾರೆ. ಈ ಎಲ್ಲ ಸಿನಿಮಾದ ಕೆಲಸಗಳನ್ನು ಬದಿಗೊತ್ತಿ ಜನರ ಸಹಾಯಕ್ಕೆ ಬಂದಿರುವ ರಣದೀಪ್ ಹೂಡಾ ಅವರಿಗೆ ಅಭಿಮಾನಿಗಳು ಭೇಷ್ ಎನ್ನುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.