ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ (Ranveer Singh) ಅವರು ಈ ಹಿಂದೆ ‘ಗಲ್ಲಿ ಬಾಯ್’ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದರು. ಈಗ ಅವರು ಮತ್ತೊಮ್ಮೆ ತೆರೆಹಂಚಿಕೊಂಡಿರುವ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ (Rocky Aur Rani Ki Prem Kahani) ಸಿನಿಮಾ ಕೂಡ ಸದ್ದು ಮಾಡುತ್ತಿದೆ. ಬಜೆಟ್ಗೆ ಹೋಲಿಸಿದರೆ ನಿರೀಕ್ಷಿತ ಮಟ್ಟದಲ್ಲಿ ಈ ಚಿತ್ರಕ್ಕೆ ಕಲೆಕ್ಷನ್ ಆಗಿಲ್ಲ ಎಂಬುದು ನಿಜ. ಆದರೆ ನೂರು ಕೋಟಿ ರೂಪಾಯಿ ಕ್ಲಬ್ ಸೇರಲು ಈ ಚಿತ್ರ ಪ್ರಯತ್ನಿಸುತ್ತಿದೆ. ಹಲವು ಕಾರಣಗಳಿಂದಾಗಿ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರ ನಿರೀಕ್ಷೆ ಮೂಡಿಸಿತ್ತು. 5 ದಿನಕ್ಕೆ ಈ ಸಿನಿಮಾ 60 ಕೋಟಿ ರೂಪಾಯಿ ಗಳಿಸಿದೆ. ಇದರಿಂದ ಚಿತ್ರತಂಡದವರ ಮುಖದಲ್ಲಿ ಸಣ್ಣ ನಗು ಮೂಡಿದೆ. ಕರಣ್ ಜೋಹರ್ (Karan Johar) ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ.
‘ಪದ್ಮಾವತ್’, ‘ಬಾಜಿರಾವ್ ಮಸ್ತಾನಿ’ ಇತ್ಯಾದಿ ಸಿನಿಮಾಗಳ ಮೂಲಕ ದೊಡ್ಡ ಗೆಲುವು ಕಂಡಿದ್ದ ರಣವೀರ್ ಸಿಂಗ್ ಅವರು ನಂತರ ‘83’, ‘ಜಯೇಶ್ ಬಾಯ್ ಜೋರ್ದಾರ್’ ಮುಂತಾದ ಸಿನಿಮಾಗಳಿಂದ ಸೋಲುಂಡಿದ್ದರು. ಈಗ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಿಂದ ಅವರು ನಿಟ್ಟುಸಿರು ಬಿಡುವಂತಾಗಿದೆ. 5 ದಿನಕ್ಕೆ 60 ಕೋಟಿ ರೂಪಾಯಿ ಕಲೆಕ್ಷನ್ ಮಾಡುವುದು ಎಂದರೆ ಸಣ್ಣ ಮಾತೇನೂ ಅಲ್ಲ. ಆದರೆ, ಚಿತ್ರದ ಬಜೆಟ್ ಜಾಸ್ತಿ ಆಗಿದ್ದರಿಂದ ಅದರ ಎದುರು 60 ಕೋಟಿ ರೂಪಾಯಿ ಕಲೆಕ್ಷನ್ ಬಹಳ ಚಿಕ್ಕದು ಎನಿಸುತ್ತಿದೆ.
ಇದನ್ನೂ ಓದಿ: ವಿಡಿಯೋ ಸಮೇತ ಕರಣ್ ಜೋಹರ್ ಬಣ್ಣ ಬಯಲು ಮಾಡಿದ ನಟಿ ಕಂಗನಾ ರಣಾವತ್
ಟ್ರೇಲರ್ ಮೂಲಕ ಗಮನ ಸೆಳೆದಿದ್ದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಜುಲೈ 28ರಂದು ಬಿಡುಗಡೆ ಆಯಿತು. ಈ ಸಿನಿಮಾ ಮೊದಲ ದಿನ 11.10 ಕೋಟಿ ರೂ. ಗಳಿಸಿತು. 2ನೇ ದಿನ 16.05 ಕೋಟಿ ರೂಪಾಯಿ ಕಲೆಕ್ಷನ್ ಆಗಿದ್ದರಿಂದ ಆಶಾಭಾವ ಮೂಡಿತು. ಮೂರನೇ ದಿನವಾದ ಭಾನುವಾರ (ಜುಲೈ 30) 18.75 ಕೋಟಿ ರೂಪಾಯಿ ಆದಾಯ ಹರಿದು ಬಂತು. ಸೋಮವಾರ ಸ್ವಲ್ಪ ಕುಸಿತ (7 ಕೋಟಿ ರೂ.) ಉಂಟಾಯಿತು. ಬಾಕ್ಸ್ ಆಫೀಸ್ನಲ್ಲಿ 5ನೇ ದಿನ 7.25 ಕೋಟಿ ರೂಪಾಯಿ ಸಂಗ್ರಹ ಆಗಿದೆ. ಬುಧವಾರ ಕೂಡ ಅನೇಕ ಕಡೆಗಳಲ್ಲಿ ಚೆನ್ನಾಗಿ ಪ್ರದರ್ಶನ ಆಗುತ್ತಿದ್ದು, ಈ ಸಿನಿಮಾ 60 ಕೋಟಿ ರೂಪಾಯಿ ಗಡಿ ಮುಟ್ಟಿರುವುದು ಚಿತ್ರತಂಡಕ್ಕೆ ಸಮಾಧಾನ ಉಂಟುಮಾಡಿದೆ.
ಇದನ್ನೂ ಓದಿ: ಬಿಡುಗಡೆಗೂ ಮುನ್ನವೇ ‘ಜವಾನ್’ ಚಿತ್ರವನ್ನು ಬ್ಲಾಕ್ ಬಸ್ಟರ್ ಎಂದು ಘೋಷಿಸಿದ ಕರಣ್ ಜೋಹರ್
‘ಆಪನ್ಹೈಮರ್’, ‘ಬಾರ್ಬಿ’, ‘ಕೌಸಲ್ಯ ಸುಪ್ರಜಾ ರಾಮ’, ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’, ‘ಬೇಬಿ’, ‘ಆಚಾರ್ ಆ್ಯಂಡ್ ಕೋ’ ಮುಂತಾದ ಸಿನಿಮಾಗಳು ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರಕ್ಕೆ ಪೈಪೋಟಿ ನೀಡುತ್ತಿವೆ. ಆಗಸ್ಟ್ ತಿಂಗಳಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಒಂದಷ್ಟು ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆ ಆಗಲಿವೆ. ಆಗ ಸಹಜವಾಗಿಯೇ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದ ಹವಾ ತಣ್ಣಗಾಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.