ಬ್ಯಾನ್ ಬಳಿಕ ರಣವೀರ್ ಸಿಂಗ್ ಮುಂದಿರುವ ಆಯ್ಕೆಗಳೇನು?

ರಣವೀರ್ ಸಿಂಗ್ 'ಡಾನ್ 3' ಚಿತ್ರದಿಂದ ದಿಢೀರ್ ಹೊರನಡೆದ ಹಿನ್ನೆಲೆಯಲ್ಲಿ, FWICE ಅಸಹಕಾರ ನಿರ್ಧಾರ ಪ್ರಕಟಿಸಿದೆ. ಇದರಿಂದ ರಣವೀರ್ ಹೊಸ ಚಿತ್ರಗಳಲ್ಲಿ ನಟಿಸುವುದನ್ನು ನಿರ್ಬಂಧಿಸಲಾಗಿದೆ. ನಿರ್ಮಾಣ ಸಂಸ್ಥೆಯು 40 ಕೋಟಿ ನಷ್ಟ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದು, ವಿವಾದ ಬಗೆಹರಿಯುವವರೆಗೂ ರಣವೀರ್ ವೃತ್ತಿಜೀವನಕ್ಕೆ ದೊಡ್ಡ ಹಿನ್ನಡೆಯಾಗಲಿದೆ. ಒಕ್ಕೂಟದ ಈ ನಿರ್ಧಾರ ಅವರ ಮುಂದಿನ ಸಿನಿ ಪಯಣಕ್ಕೆ ಸವಾಲಾಗಿದೆ.

ಬ್ಯಾನ್ ಬಳಿಕ ರಣವೀರ್ ಸಿಂಗ್ ಮುಂದಿರುವ ಆಯ್ಕೆಗಳೇನು?
ರಣವೀರ್
Image Credit source: Ranveer Singh Instagram

Updated on: May 26, 2026 | 8:54 AM

ಬಾಲಿವುಡ್‌ನ ಖ್ಯಾತ ನಟ ರಣವೀರ್ ಸಿಂಗ್ ಅವರಿಗೆ ಈಗ ದೊಡ್ಡ ಸಂಕಷ್ಟ ಎದುರಾಗಿದೆ. ಫರ್ಹಾನ್ ಅಖ್ತರ್ ನಿರ್ದೇಶನದ ಬಹುನಿರೀಕ್ಷಿತ ‘ಡಾನ್ 3’ ಚಿತ್ರದಿಂದ ರಣವೀರ್ ಸಿಂಗ್ (Ranveer Singh) ದಿಢೀರನೆ ಹೊರನಡೆದಿರುವ ಹಿನ್ನೆಲೆಯಲ್ಲಿ, ಪಶ್ಚಿಮ ಭಾರತ ಚಲನಚಿತ್ರ ನೌಕರರ ಒಕ್ಕೂಟ (FWICE) ನಟನ ವಿರುದ್ಧ ಅಸಹಕಾರದ ಕಠಿಣ ನಿರ್ಧಾರ ಪ್ರಕಟಿಸಿದೆ. ಈ ಮೂಲಕ ರಣವೀರ್ ಸಿಂಗ್ ಹೊಸ ಚಿತ್ರಗಳ ಚಿತ್ರೀಕರಣ ಮಾಡದಂತೆ ಹಾಗೂ ಚಿತ್ರರಂಗದ ಯಾರೂ ಅವರೊಂದಿಗೆ ಕೆಲಸ ಮಾಡದಂತೆ ಸೂಚಿಸಿ ಪರೋಕ್ಷವಾಗಿ ಬ್ಯಾನ್ ಮಾಡಲಾಗಿದೆ.

* ಗಂಭೀರ ಸ್ವರೂಪ ಪಡೆದ ಡಾನ್​ 3 ವಿವಾದ

* ಬ್ಯಾನ್ ಆದ ನಟ ರಣವೀರ್ ಸಿಂಗ್

* ಮುಂದಿರುವ ಆಯ್ಕಗಳೇನು?

ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ಅವರ ‘ಎಕ್ಸೆಲ್ ಎಂಟರ್‌ಟೈನ್‌ಮೆಂಟ್’ ಬ್ಯಾನರ್ ಅಡಿಯಲ್ಲಿ ‘ಡಾನ್ 3’ ಸಿನಿಮಾ ತಯಾರಾಗುತ್ತಿತ್ತು. ಆದರೆ, ಚಿತ್ರದ ಶೂಟಿಂಗ್ ಆರಂಭವಾಗಲು ಕೆಲವೇ ದಿನಗಳು ಬಾಕಿ ಇರುವಾಗ ರಣವೀರ್ ಸಿಂಗ್ ಅವರು ಈ ಚಿತ್ರದಿಂದ ಹೊರನಡೆದರು. ಇವರ ಈ ದಿಢೀರ್ ನಿರ್ಧಾರದಿಂದಾಗಿ ನಿರ್ಮಾಣ ಸಂಸ್ಥೆಗೆ ಸಾಕಷ್ಟು ನಷ್ಟ ಆಗಿದೆ. ಚಿತ್ರದ ಪ್ರಿ-ಪ್ರೊಡಕ್ಷನ್ ಮತ್ತು ಪ್ರಮುಖ ಯೋಜನೆಗಳಿಗಾಗಿ ಈಗಾಗಲೇ ಸಾಕಷ್ಟು ಹಣ ಸುರಿಯಲಾಗಿದೆ. ಹೀಗಾಗಿ ನಿರ್ಮಾಣ ಸಂಸ್ಥೆಯು ನಟನಿಂದ ಸುಮಾರು 40 ಕೋಟಿ ರೂಪಾಯಿ ನಷ್ಟ ಪರಿಹಾರಕ್ಕೆ ಬೇಡಿಕೆ ಇಟ್ಟಿದೆ.

ಆದರೆ, ಇದನ್ನು ರಣವೀರ್ ಸಿಂಗ್ ಒಪ್ಪಿಲ್ಲ. ನಷ್ಟ ಪರಿಹಾರದ ಸೆಟಲ್ಮೆಂಟ್ ಕುರಿತ ಮಾತುಕತೆಗಳು ಸಫಲವಾಗದ ಕಾರಣ ಈ ವಿವಾದ FWICEಗೆ ತಲುಪಿತು. FWICE ಅಧ್ಯಕ್ಷ ಬಿ.ಎನ್ ತಿವಾರಿ ಹಾಗೂ ಮುಖ್ಯ ಸಲಹೆಗಾರ ಅಶೋಕ್ ಪಂಡಿತ್ ಅವರನ್ನೊಳಗೊಂಡ ಉನ್ನತ ಮಟ್ಟದ ಆಂತರಿಕ ಸಭೆಯ ನಂತರ ಈ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶೂಟಿಂಗ್ ಹಂತದಲ್ಲಿ ನಟರು ಹೀಗೆ ಹೊರನಡೆಯುವ ಪ್ರವೃತ್ತಿ ಸರಿಯಲ್ಲ ಎಂದು ಒಕ್ಕೂಟ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಇದನ್ನೂ ಓದಿ: ‘ಡಾನ್ 3’ ವಿವಾದ: ಚಿತ್ರರಂಗದಿಂದ ಬ್ಯಾನ್ ಆದ ಬಳಿಕ ಮೌನ ಮುರಿದ ರಣವೀರ್ ಸಿಂಗ್‌

ವೃತ್ತಿಜೀವನದ ಮೇಲೆ ಬೀರುವ ಪರಿಣಾಮ

ಈ ಬ್ಯಾನ್ ಆದೇಶದಿಂದಾಗಿ ರಣವೀರ್ ಸಿಂಗ್ ಅವರು ಭಾರತದಲ್ಲಿ ಹೊಸ ಸಿನಿಮಾಗಳ ಶೂಟಿಂಗ್ ಮಾಡಲು ಅಥವಾ ಹೊಸ ಚಿತ್ರಗಳನ್ನು ನಿರ್ಮಿಸಲು ಸಾಧ್ಯವಾಗುವುದಿಲ್ಲ. ವಿವಾದ ಬಗೆಹರಿಯುವವರೆಗೂ ಅವರು ಚಿತ್ರರಂಗದಿಂದ ದೂರ ಉಳಿಯಬೇಕಾಗುತ್ತದೆ. ‘ಧುರಂಧರ್ 2’ ಸಿನಿಮಾದ ಯಶಸ್ಸಿನ ನಂತರ ರಣವೀರ್ ಸಿಂಗ್ ಅವರಿಗೆ ಬಾಲಿವುಡ್‌ನಲ್ಲಿ ಭಾರಿ ಬೇಡಿಕೆ ಇತ್ತು. ಇಂತಹ ಪ್ರಮುಖ ಸಮಯದಲ್ಲಿ ಎದುರಾಗಿರುವ ಈ ಕಾನೂನು ಮತ್ತು ವೃತ್ತಿಪರ ಸಂಕಷ್ಟವು ಅವರ ಸಿನಿ ಪಯಣಕ್ಕೆ ದೊಡ್ಡ ಹಿನ್ನಡೆಯನ್ನು ಉಂಟುಮಾಡಿದೆ. ಅವರು ನಷ್ಟ ಪರಿಹಾರ ಮಾಡಿದರೆ ಅಥವಾ ‘ಡಾನ್ 3’ ಸಿನಿಮಾದಲ್ಲಿ ನಟಿಸಿದರೆ ವಿವಾದ ಬಗೆಹರಿಯಬಹುದು. ರಣವೀರ್ ಮುಂದಿನ ಹೆಜ್ಜೆ ಏನಿರಲಿದೆ ಎಂಬುದು ಸದ್ಯ ತೀವ್ರ ಕುತೂಹಲ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us