ಬೆಳ್ಳಿ ಪರದೆಯಲ್ಲಿ ಉತ್ತುಂಗಕ್ಕೆ ತೆರಳಿದ ನಟ-ನಟಿಯರಿಗೆ ಕಿರುತೆರೆ ಶೋ ನಡೆಸಿಕೊಡೋಕೆ ಬೇಡಿಕೆ ಬರುತ್ತದೆ. ಕಿಚ್ಚ ಸುದೀಪ್, ಪುನೀತ್ ರಾಜ್ಕುಮಾರ್, ಸಲ್ಮಾನ್ ಖಾನ್, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಸೇರಿ ಸಾಕಷ್ಟು ನಟರು ಈಗಾಗಲೇ ಕಿರುತೆರೆಗೆ ಕಾಲಿಟ್ಟಿದ್ದಾರೆ. ಈಗ ನಟ ರಣವೀರ್ ಸಿಂಗ್ ಸರದಿ. ಚಿತ್ರರಂಗದಲ್ಲಿ ರಣವೀರ್ ಬಹುಬೇಡಿಕೆಯ ನಟ. ಅವರ ಕೈಯಲ್ಲಿ ಸದ್ಯ ಹಲವು ಸಿನಿಮಾಗಳಿವೆ. ಹೀಗಿರುವಾಗಲೇ ಕಿರುತೆರೆಗೆ ಕಾಲಿಡುತ್ತಿದ್ದಾರೆ. ಇದು ಯಶಸ್ಸು ಪಡೆದರೆ ಅವರು ಸಲ್ಮಾನ್ ಖಾನ್ ರೀತಿಯಲ್ಲೇ ಫಾರ್ಮ್ಹೌಸ್ ಹೊಂದುತ್ತೇನೆ ಎಂದಿದ್ದಾರೆ.
ಕಲರ್ಸ್ನಲ್ಲಿ ಪ್ರಸಾರವಾಗುವ ‘ದಿ ಬಿಗ್ ಪಿಕ್ಚರ್ಸ್’ ಕ್ವಿಜ್ ಶೋಅನ್ನು ರಣವೀರ್ ಸಿಂಗ್ ನಡೆಸಿಕೊಡಲಿದ್ದಾರೆ. ರಣವೀರ್ ಸಿಂಗ್ ಈ ಶೋನ ನಿರೂಪಣೆ ಮಾಡಲಿದ್ದಾರೆ. ಈ ಕ್ವಿಜ್ ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ಬುದ್ಧಿಮಟ್ಟ ಮತ್ತು ವಿಶ್ಯುವಲ್ ಮೆಮೋರಿಯನ್ನು ಪರೀಕ್ಷೆ ಮಾಡಲಾಗುತ್ತದೆ. ಈ ಶೋನ ಬಗ್ಗೆ ಮಾತನಾಡೋಕೆ ಕರೆದ ಪ್ರೆಸ್ಮೀಟ್ನಲ್ಲಿ ರಣವೀರ್ ಮಾತನಾಡಿದ್ದಾರೆ.
ಭವಿಷ್ಯದ ‘ಬಿಗ್ ಪಿಕ್ಚರ್ಸ್’ ಏನು ಎಂದು ರಣವೀರ್ಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ಅವರು ಉತ್ತರಿಸಿದ್ದಾರೆ. ‘ನನಗೆ ಒಂದು ಸುಂದರ ಮನೆ ಬೇಕು. ಅಲ್ಲಿ ನನ್ನ ಹೆಂಡತಿ ದೀಪಿಕಾ, ನನ್ನ ಮಕ್ಕಳು ಹಾಗೂ ಕುಟುಂಬದವರು ಇರಬೇಕು. ಕೊನೆಯ ದಿನದವರೆಗೂ ನಾನು ಮನರಂಜನೆ ನೀಡಬೇಕು. ಒಂದೊಮ್ಮೆ ಈ ಶೋ ಹಿಟ್ ಆದರೆ ನಾನು ಪಾನ್ವೆಲ್ನಲ್ಲಿ ಫಾರ್ಮ್ಹೌಸ್ ಖರೀದಿಸುತ್ತೇನೆ’ ಎಂದಿದ್ದಾರೆ.
ಸಲ್ಮಾನ್ ಖಾನ್ ಈ ಭಾಗದಲ್ಲಿ ಫಾರ್ಮ್ಹೌಸ್ ಹೊಂದಿದ್ದಾರೆ. ಈ ಫಾರ್ಮ್ಹೌಸ್ಗೆ ಅರ್ಪಿತಾ ಫಾರ್ಮ್ಸ್ (ಸಲ್ಮಾನ್ ಸಹೋದರಿ) ಎಂದು ಹೆಸರು ಇಡಲಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ ಸಲ್ಮಾನ್ ಖಾನ್ ಇಲ್ಲಿಯೇ ಸಮಯ ಕಳೆದಿದ್ದರು.
ರಣವೀರ್ ಸಿಂಗ್ ನಟನೆಯ ‘83’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಕಬೀರ್ ಖಾನ್ ನಿರ್ದೇಶನದ ಈ ಸಿನಿಮಾ 1983ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದ ಕಥೆಯನ್ನು ಹೇಳಲಿದೆ. ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ನಟಿಸುತ್ತಿದ್ದಾರೆ. ಈ ಮೊದಲು ರಿಲೀಸ್ ಆದ ಪೋಸ್ಟರ್ಗಳನ್ನು ನೋಡಿ ಅಭಿಮಾನಿಗಳು ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಪಿಲ್ ದೇವ್ ಪಾತ್ರಕ್ಕೆ ರಣವೀರ್ ಸಿಂಗ್ ಲುಕ್ ಸರಿಯಾಗಿ ಹೊಂದುತ್ತಿದೆ. ಇದಲ್ಲದೆ, ‘ಸೂರ್ಯವಂಶಿ’ ಸಿನಿಮಾದಲ್ಲಿ ರಣವೀರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಸರ್ಕಸ್’ ಹಾಗೂ ‘ತಖ್ತ್’ ಸಿನಿಮಾಗಳಲ್ಲೂ ರಣವೀರ್ ಅಭಿನಯಿಸುತ್ತಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ 15ಕ್ಕೆ ಸಲ್ಮಾನ್-ರಣವೀರ್ ಕೊಟ್ರು ಅದ್ದೂರಿ ಚಾಲನೆ; ಇಲ್ಲಿದೆ ಸ್ಪರ್ಧಿಗಳ ಪಟ್ಟಿ