ಪ್ರಿಯಾಂಕಾರನ್ನು ಸಾಮಾಜಿಕ ಜಾಲತಾಣದಿಂದ ದೂರ ಮಾಡಿದ ಘಟನೆ ಯಾವುದು? ನಟಿ ಹಂಚಿಕೊಂಡ್ರು ಕಹಿ ಸತ್ಯ
Priyanka Chopra: ಬಾಲಿವುಡ್ ಹಾಗೂ ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಸಾಮಾಜಿಕ ಜಾಲತಾಣಗಳು ಹಾಗೂ ವೈಯಕ್ತಿಕ ಜೀವನದ ನಡುವೆ ಕಾಪಾಡಿಕೊಂಡಿರುವ ಅಂತರದ ಕುರಿತು ಮಾತನಾಡಿದ್ದಾರೆ. ಇದೇ ವೇಳೆ ಅವರು ಅದಕ್ಕೆ ಕಾರಣವಾದ ಘಟನೆಗಳ ಕುರಿತೂ ತಿಳಿಸಿದ್ದಾರೆ.
ಬಾಲಿವುಡ್ನಲ್ಲಿ ಮಿಂಚಿ ಪ್ರಸ್ತುತ ಹಾಲಿವುಡ್ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ನೇರ ನುಡಿಗಳಿಗೆ ಹೆಸರಾದವರು. ಅವರು ತಮ್ಮ ವೈಯಕ್ತಿಕ ಜೀವನದ ವಿವರಗಳನ್ನು ಹಂಚಿಕೊಳ್ಳುವ ಸಂದರ್ಭ ಬಂದಾಗ ಹಿಂದೆ ಮುಂದೆ ನೋಡುವುದಿಲ್ಲ. ತಾವು ಎದುರಿಸಿದ ಕಷ್ಟಗಳನ್ನು, ಅವಮಾನಗಳನ್ನು ಅವರು ಮುಚ್ಚುಮರೆಯಿಲ್ಲದೇ ಜನರೆದುರು ತೆರೆದಿಡುತ್ತಾರೆ. ಇತ್ತೀಚೆಗೆ ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಸೋಷಿಯಲ್ ಮೀಡಿಯಾದಿಂದ ಅಂತರ ಕಾಯ್ದುಕೊಳ್ಳಲು ಕಾರಣವಾದ ಕಹಿ ಘಟನೆಗಳ ಕುರಿತು ಮಾತನಾಡಿದ್ದಾರೆ.
ಇತ್ತೀಚೆಗೆ ವಿಕ್ಟೋರಿಯಾ ಸೀಕ್ರೆಟ್ನ ವಿಎಸ್ ವಾಯ್ಸಸ್ ಪಾಡ್ಕಾಸ್ಟ್ನಲ್ಲಿ ಮಾತನಾಡಿದ ಪ್ರಿಯಾಂಕಾ ಅದರಲ್ಲಿ ಹಲವು ವಿಚಾರಗಳನ್ನು ತೆರೆದಿಟ್ಟಿದ್ದಾರೆ. ಅವರು ತಮ್ಮ 17ನೇ ವಯಸ್ಸಿನಲ್ಲಿ ನಟನೆಯ ನಂಟು ಬೆಳೆಸಿಕೊಂಡವರು. ಆದರೆ ಆಗ ಆರ್ಟಿಫಿಶಿಯಲ್ (ಕೃತಕ) ಸೌಂದರ್ಯವನ್ನೇ ನಿಜವಾದ ಸೌಂದರ್ಯ ಎಂದು ಭಾವಿಸಿದ್ದರಂತೆ. ಫೋಟೋಶಾಪ್ ಮಾಡಿದ ಚಿತ್ರ, ಹಾರಾಡುತ್ತಿರುವ ಕೂದಲು, ಮೇಕಪ್ ಮಾಡಿದ ಮುಖ ಇವೆಲ್ಲವುಗಳೇ ನಿಜವಾದದ್ದು(ನಾರ್ಮಲ್) ಎಂದು ಭಾವಿಸಿದ್ದರಂತೆ.
ಆ ಕಾಲದಲ್ಲಿ ನಿಜವಾದ ಸತ್ಯ ತನಗೆ ತಿಳಿಯಲಿಲ್ಲ. ಎಲ್ಲವುಗಳೂ ಒಂದರ ಹಿಂದೆ ಬರುತ್ತಾ ಹೋಯಿತು. ತಾನು ಕಲಿಯುತ್ತಾ ಹೋದೆ ಎಂದು ಪ್ರಿಯಾಂಕಾ ನುಡಿದಿದ್ದಾರೆ. ಆದರೆ ಬಹಳ ಸಮಯದವರೆಗೆ ಈ ಹೊರಗಿನ ಘಟನೆಗಳು ಅವರ ವ್ಯಕ್ತಿತ್ವವನ್ನು ವಿಕಸನಗೊಳಿಸಲು ನೆರವಾಗಲೇ ಇಲ್ಲವಂತೆ. ಅಷ್ಟರ ಮಟ್ಟಿಗೆ ತಾರಾ ಜೀವನ ತನ್ನನ್ನು ಬ್ಯುಸಿಯಾಗಿಟ್ಟಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.
ಪ್ರಿಯಾಂಕಾರ ತಂದೆಯ ನಿಧನಾನಂತರ ಅವರಿಗೆ ಸೌಂದರ್ಯದ ಕುರಿತು ಹಲವು ಟೀಕೆಗಳು ವ್ಯಕ್ತವಾಗಿದ್ದವು. ಆ ಸಂದರ್ಭವನ್ನು ಪ್ರಿಯಾಂಕಾ ವಿವರಿಸಿದ್ದಾರೆ. ‘‘ಆ ಸಮಯದಲ್ಲಿ ನಾನು 30ರ ವಯಸ್ಸಿನ ಸಮೀಪ ಬಂದೆ. ಜೊತೆಗೆ ಜನರೂ ನಿಮಗೆ ವಯಸ್ಸಾಯಿತು. ನಿಮ್ಮ ಮುಖ ಬದಲಾಗಿದೆ ಎಂಬಿತ್ಯಾದಿ ಹಲವು ಕಟು ಟೀಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಮಾಡಲು ಪ್ರಾರಂಭಿಸಿದರು. ಆಗ ಮೊದಲೇ ಹಾಳಾಗಿದ್ದ ನನ್ನ ಮನಸ್ಸು, ಇವುಗಳಿಂದ ಸಂಪೂರ್ಣವಾಗಿ ಕದಡಿಹೋಯಿತು. ಅದನ್ನು ಸ್ವೀಕರಿಸಲು ನಾನು ತಯಾರಿಗಿರಲಿಲ್ಲ. ಆ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ಕುರಿತ, ಇಂಟರ್ನೆಟ್ ಕುರಿತ ನನ್ನ ಅಭಿಪ್ರಾಯ ಬದಲಾಯಿತು. ನಾನು ಈ ಎಲ್ಲವುಗಳಿಂದ ದೂರ ಉಳಿದೆ. ನನಗೆ ಸಮಾಧಾನ ಸಿಗುವಂತಹ ಸ್ಥಳವನ್ನು ಮನಸ್ಸಿನಲ್ಲಿ ಸೃಷ್ಟಿಸಿಕೊಂಡೆ’’ ಎಂದು ಅವರು ಹೇಳಿದರು.
ಅಲ್ಲಿಂದ ತನ್ನ ಜೀವನದಲ್ಲಿ ಹಲವು ಬದಲಾವಣೆಗಳಾದವು ಎಂದು ಪ್ರಿಯಾಂಕಾ ಹೇಳಿಕೊಂಡಿದ್ದಾರೆ. ಅವರ ಬದುಕಿನ ಇತ್ತೀಚಿನ ಎರಡು ವರ್ಷಗಳು ಜೀವನದ ಅತ್ಯಂತ ಸಂತಸದ ಕ್ಷಣಗಳು ಎಂದು ಅವರು ಹೇಳಿಕೊಂಡಿದ್ದಾರೆ. ಈಗ ಅವರು ಸಾಮಾಜಿಕ ಜಾಲತಾಣದಲ್ಲಿ ಪತಿ, ಕುಟುಂಬ ಹಾಗೂ ತಮ್ಮ ಚಿತ್ರಗಳನ್ನು ಹಾಕುತ್ತಾರಾದರೂ ಅದರಾಚೆಗಿನ ವೈಯಕ್ತಿಕ ಜೀವನವನ್ನು ಖಾಸಗಿಯಾಗಿಯೇ ಇಟ್ಟಿದ್ದಾರಂತೆ. ಇದು ತನಗೆ ಬಹಳ ನೆಮ್ಮದಿಯನ್ನು ನೀಡುತ್ತದೆ ಎಂಬುದು ಅವರ ಅಭಿಪ್ರಾಯ. ಹೀಗೆ ಸಾಮಾಜಿಕ ಜಾಲತಾಣದಿಂದ ಅಂತರ ಕಾಯ್ದುಕೊಳ್ಳಲು ಕಾರಣವಾದ ನೈಜ ಸಂಗತಿಗಳ ಕುರಿತು ಪ್ರಿಯಾಂಕಾ ಮನಬಿಚ್ಚಿ ಮಾತನಾಡಿದ್ದಾರೆ.
ಪ್ರಿಯಾಂಕಾ ಫರ್ಹಾನ್ ಅಖ್ತರ್ ನಿರ್ದೇಶನದ ಟ್ರಾವೆಲ್ ಚಿತ್ರವಾದ ‘ಜೀಲೇ ಜರಾ’ ಚಿತ್ರದ ಮುಖಾಂತರ ಮತ್ತೆ ಬಾಲಿವುಡ್ ಪ್ರವೇಶಿಸಲು ಸಿದ್ಧತೆ ನಡೆಸಿದ್ದಾರೆ. ಆ ಚಿತ್ರದಲ್ಲಿ ಆಲಿಯಾ ಭಟ್, ಕತ್ರೀನಾ ಕೈಫ್ ಕೂಡ ಬಣ್ಣ ಹಚ್ಚುತ್ತಿದ್ದಾರೆ.
ಇದನ್ನೂ ಓದಿ:
‘ಶೀಘ್ರವೇ ಮಹತ್ವದ ಘೋಷಣೆ ಮಾಡುತ್ತೇನೆ ಎಂದ ಕಾಜಲ್ ಅಗರ್ವಾಲ್’; ನಟಿ ಪ್ರೆಗ್ನೆಂಟ್ ಎಂದ ಅಭಿಮಾನಿಗಳು
Shruti Hassan: ಫೋಟೋಶೂಟ್ಗಾಗಿ ಟಾಪ್ಲೆಸ್ ಆದ ಶ್ರುತಿ ಹಾಸನ್
Madhagaja: ‘ಮದಗಜ’ ಚಿತ್ರದ ಹೊಸ ಹಾಡಿನಲ್ಲಿ ಮಿಂಚುತ್ತಿರುವ ಶ್ರೀ ಮುರಳಿ, ಆಶಿಕಾ ರಂಗನಾಥ್; ವಿಡಿಯೋ ನೋಡಿ
Published On - 5:02 pm, Thu, 7 October 21