ಮೋದಿ ಮತ್ತು ನಿರುದ್ಯೋಗದ ಬಗ್ಗೆ ರಣವೀರ್​ ಸಿಂಗ್​ ಮಾತಾಡಿದ್ದು ನಿಜವೇ? ಇಲ್ಲಿದೆ ಅಸಲಿ ಕಥೆ

|

Updated on: Apr 19, 2024 | 9:12 PM

ಬಾಲಿವುಡ್​ ನಟ ರಣವೀರ್​ ಸಿಂಗ್​ ಅವರು ಕಾಶಿಗೆ ತೆರಳಿದ್ದಾಗ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದರು. ಅದರಲ್ಲಿ ಒಂದಷ್ಟು ವಿಷಯಗಳ ಬಗ್ಗೆ ಅವರು ಮಾತನಾಡಿದ್ದರು. ಈಗ ಅದೇ ವಿಡಿಯೋಗೆ ಎಐ ಧ್ವನಿ ಮೂಲಕ ಬೇರೆ ರೂಪ ನೀಡಲಾಗಿದೆ. ಬೆಲೆ ಏರಿಕೆ, ನಿರುದ್ಯೋಗ ಮುಂತಾದ ಸಮಸ್ಯೆಗಳ ಬಗ್ಗೆ ರಣವೀರ್​ ಸಿಂಗ್​ ಅವರು ಟೀಕೆ ಮಾಡಿದ್ದಾರೆ ಎಂಬ ರೀತಿಯಲ್ಲಿ ವಿಡಿಯೋ ತಿರುಚಲಾಗಿದೆ.

ಮೋದಿ ಮತ್ತು ನಿರುದ್ಯೋಗದ ಬಗ್ಗೆ ರಣವೀರ್​ ಸಿಂಗ್​ ಮಾತಾಡಿದ್ದು ನಿಜವೇ? ಇಲ್ಲಿದೆ ಅಸಲಿ ಕಥೆ
ರಣವೀರ್​ ಸಿಂಗ್​
Follow us on

ಲೋಕಸಭಾ ಚುನಾವಣೆ (Lok Sabha Elections) ಕಾವು ಇಡೀ ದೇಶದಲ್ಲಿ ಹಬ್ಬಿದೆ. ಪ್ರಮುಖ ಪಕ್ಷಗಳು ಪ್ರಚಾರಕ್ಕಾಗಿ ಸೆಲೆಬ್ರಿಟಿಗಳ ಮೊರೆ ಹೋಗುತ್ತಿವೆ. ಸ್ಟಾರ್​ ನಟ-ನಟಿಯರನ್ನು ಕರೆತಂದು ಪ್ರಚಾರ ಮಾಡಿಸಲಾಗುತ್ತಿದೆ. ಆದರೆ ಅದರ ನಡುವೆ ಒಂದು ಗಿಮಿಕ್​ ಕೂಡ ನಡೆದಿದೆ. ಡೀಪ್​ಫೇಕ್​ (Deepfake) ಮತ್ತು ಕೃತಕ ಬುದ್ಧಿಮತ್ತೆಯ ಮೂಲಕ ಸೆಲೆಬ್ರಿಟಿಗಳ ವಿಡಿಯೋಗಳನ್ನು ತಿರುಚಿ, ಜನರ ಗಮನ ಸೆಳೆಯುವ ಪ್ರಯತ್ನ ಕೂಡ ಆಗಿದೆ. ಇತ್ತೀಚೆಗಷ್ಟೇ ನಟ ಆಮಿರ್​ ಖಾನ್​ ಅವರ ವಿಡಿಯೋವನ್ನು ದುರ್ಬಳಕೆ ಮಾಡಿಕೊಳ್ಳಲಾಗಿತ್ತು. ಈಗ ರಣವೀರ್​ ಸಿಂಗ್ (Ranveer Singh)​ ಅವರು ವಿಡಿಯೋವನ್ನು ತಿರುಚಲಾಗಿದೆ. ಅದರಲ್ಲಿ ಅವರು ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುವ ರೀತಿಯಲ್ಲಿ ಬಿಂಬಿಸಲಾಗಿದೆ.

ಕೆಲವೇ ದಿನಗಳ ಹಿಂದೆ ರಣವೀರ್​ ಸಿಂಗ್​ ಅವರು ಕಾಶಿಗೆ ತೆರಳಿದ್ದರು. ಆಗ ಅವರು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಒಂದಷ್ಟು ಅಂಶಗಳನ್ನು ಹಂಚಿಕೊಂಡಿದ್ದರು. ಆ ವಿಡಿಯೋಗೆ ಎಐ ವಾಯ್ಸ್​ ಮೂಲಕ ಬೇರೆಯದೇ ಧ್ವನಿಯನ್ನು ನೀಡಲಾಗಿದೆ. ರಣವೀರ್​ ಸಿಂಗ್​ ಅವರು ಬೆಲೆ ಏರಿಕೆ, ನಿರುದ್ಯೋಗ ಮುಂತಾದ ವಿಚಾರಗಳನ್ನು ಇಟ್ಟುಕೊಂಡು ನರೇಂದ್ರ ಮೋದಿ ಅವರನ್ನು ಟೀಕಿಸಿದ್ದಾರೆ ಎನ್ನವ ಹಾಗೆ ಈ ವಿಡಿಯೋವನ್ನು ತಿರುಚಲಾಗಿದೆ.

ಇದು ರಣವೀರ್​ ಸಿಂಗ್​ ಅವರ ಗಮನಕ್ಕೆ ಬಂದಿದೆ. ಕೂಡಲೇ ಅವರು ಸೋಶಿಯಲ್​ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದಾರೆ. ‘ಡೀಪ್​ಫೇಕ್​ ವಿಡಿಯೋ ಬಗ್ಗೆ ಎಚ್ಚರದಿಂದಿರಿ ಗೆಳೆಯರೇ..’ ಎಂದು ಅವರು ಪೋಸ್ಟ್​ ಮಾಡಿದ್ದಾರೆ. ಆ ಮೂಲಕ ತಾವು ಯಾವುದೇ ಪಕ್ಷದ ಪರವಾಗಿ ಅಥವಾ ವಿರುದ್ಧವಾಗಿ ಮಾತನಾಡಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಹಾಗಿದ್ದರೂ ಸೋಶಿಯಲ್​ ಮೀಡಿಯಾದಲ್ಲಿ ನಕಲಿ ವಿಡಿಯೋ ವೈರಲ್​ ಆಗಿದೆ.

ಇದನ್ನೂ ಓದಿ: ನಟ ದ್ವಾರಕೀಶ್​ ನಿಧನಕ್ಕೆ ನರೇಂದ್ರ ಮೋದಿ ಸಂತಾಪ; ಪ್ರಧಾನಿ ಹೇಳಿದ್ದೇನು?

ಡೀಪ್​ಫೇಕ್​ ವಿಡಿಯೋಗಳ ಮೂಲಕ ಸೆಲೆಬ್ರಿಟಿಗಳ ಹೆಸರಿಗೆ ಮಸಿ ಬಳಿಯುವ ಕೃತ್ಯ ನಡೆಯುತ್ತಿದೆ. ಈ ಮೊದಲು ರಶ್ಮಿಕಾ ಮಂದಣ್ಣ, ಕಾಜೋಲ್​, ಆಲಿಯಾ ಭಟ್​ ಮುಂತಾದ ನಟಿಯರಿಗೆ ಡೀಪ್​ಫೇಕ್​ ಕಾಟ ಎದುರಾಗಿತ್ತು. ಆಮಿರ್​ ಖಾನ್​ ಅವರ ವಿಡಿಯೋವನ್ನು ಕೂಡ ದುರ್ಬಳಕೆ ಮಾಡಿಕೊಳ್ಳಲಾಯಿತು. ಆ ಘಟನೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಕೇಸ್​ ದಾಖಲಿಸಿಕೊಂಡಿದ್ದಾರೆ. ತನಿಖೆ ಪ್ರಗತಿಯಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.