‘ಪುಷ್ಪ 2’ ದಾಖಲೆ ಅಳಿಸಿ ಹಾಕಿದ ‘ಧುರಂಧರ್’; ರಣವೀರ್ ಸಿಂಗ್ ಈಗ ಬಾಕ್ಸ್ ಆಫೀಸ್ ಸುಲ್ತಾನ

ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಸಿನಿಮಾಗೆ ಭಾರತದಲ್ಲಿ ಈವರೆಗೂ 831.40 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಆ ಮೂಲಕ ‘ಪುಷ್ಪ 2’ ಸಿನಿಮಾದ ಹಿಂದಿ ವರ್ಷನ್ ಗಳಿಕೆಯನ್ನು ‘ಧುರಂಧರ್’ ಸಿನಿಮಾ ಹಿಂದಿಕ್ಕಿ ಹೊಸ ದಾಖಲೆ ಮಾಡಿದೆ. ಇಂದಿಗೂ ಹಲವು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಕಲೆಕ್ಷನ್ ಹೆಚ್ಚಾಗುತ್ತಲೇ ಇದೆ.

‘ಪುಷ್ಪ 2’ ದಾಖಲೆ ಅಳಿಸಿ ಹಾಕಿದ ‘ಧುರಂಧರ್’; ರಣವೀರ್ ಸಿಂಗ್ ಈಗ ಬಾಕ್ಸ್ ಆಫೀಸ್ ಸುಲ್ತಾನ
Dhurandhar Movie Poster

Updated on: Jan 07, 2026 | 3:20 PM

ಸೂಪರ್ ಹಿಟ್ ‘ಧುರಂಧರ್’ (Dhurandhar) ಸಿನಿಮಾ ಈಗಲೂ ಅನೇಕ ಕಡೆಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಿಂದ ರಣವೀರ್ ಸಿಂಗ್ (Ranveer Singh) ಅವರು ಬಾಕ್ಸ್ ಆಫೀಸ್ ಸುಲ್ತಾನ ಎನಿಸಿಕೊಂಡಿದ್ದಾರೆ. ಭಾರತದ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಸಿನಿಮಾ ಎಂಬ ಖ್ಯಾತಿಗೆ ಈ ಚಿತ್ರ ಪಾತ್ರವಾಗಿದೆ. ಇಷ್ಟು ದಿನಗಳ ಕಾಲ ‘ಪುಷ್ಪ 2’ (Pushpa 2) ಸಿನಿಮಾ ಹೊಂದಿದ್ದ ದಾಖಲೆಯನ್ನು ಈಗ ‘ಧುರಂಧರ್’ ಸಿನಿಮಾ ಅಳಿಸಿ ಹಾಕಿದೆ. ಭಾರತದಲ್ಲಿ ಈ ಚಿತ್ರದ ಕಲೆಕ್ಷನ್ 831 ಕೋಟಿ ರೂಪಾಯಿ ಆಗಿದೆ ಎಂದು ‘ಬಾಲಿವುಡ್ ಹಂಗಾಮಾ’ ವರದಿ ಮಾಡಿದೆ.

ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಅವರು ಈ ಬಗ್ಗೆ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ‘ಧುರಂದರ್- ಹೊಸ ಚಕ್ರವರ್ತಿ ಬಂದಿದ್ದಾನೆ. ಹಿಂದಿ ಸಿನಿಮಾದ ಬಿಸ್ನೆಸ್​​ನಲ್ಲಿ ಇದು ಐತಿಹಾಸಿಕ ಕ್ಷಣ. ಪುಷ್ಪ 2 ಚಿತ್ರವನ್ನು ಧುರಂಧರ್ ಹಿಂದಿಕ್ಕಿದೆ. ಇಷ್ಟು ದಿನಗಳ ತನಕ ಪುಷ್ಪ 2 ಚಿತ್ರದ ಹಿಂದಿ ವರ್ಷನ್ ಗಳಿಕೆಯನ್ನು ಮೀರಿಸುವುದನ್ನು ಊಹಿಸುವುದು ಕೂಡ ಕಷ್ಟ ಎಂಬಂತಿತ್ತು’ ಎಂದು ತರಣ್ ಆದರ್ಶ್ ಅವರು ಹೇಳಿದ್ದಾರೆ.

‘ಆದರೆ ದಾಖಲೆಗಳು ಇರುವುದೇ ಮುರಿಯಲು. ಧುರಂಧರ್ ಸಿನಿಮಾ ಅದನ್ನೇ ಮಾಡಿದೆ. ಕೊನೆಗೂ ಪುಷ್ಪ 2 ಚಿತ್ರದ ಹಿಂದಿ ಕಲೆಕ್ಷನ್​ ಅನ್ನು ಧುರಂಧರ್ ಸಿನಿಮಾ ಮೀರಿಸಿದೆ. ಅತಿ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಸಿನಿಮಾ ಇದಾಗಿದೆ. 33ನೇ ದಿನಕ್ಕೆ ಈ ಸಾಧನೆ ಮಾಡಿದೆ. ಸಿಂಹಾಸನದಲ್ಲಿ ಇರುವ ಹೊಸ ಚಕ್ರವರ್ತಿ ಧುರಂಧರ್’ ಎಂದು ತರಣ್ ಆದರ್ಶ್ ಅವರು ಪೋಸ್ಟ್ ಮಾಡಿದ್ದಾರೆ.

ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಹಿಂದಿಗೂ ಡಬ್ ಆಗಿ 830.10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈಗ ‘ಧುರಂಧರ್’ ಸಿನಿಮಾ 33 ದಿನಗಳಲ್ಲಿ 831.40 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈಗಲೂ ಅನೇಕ ಕಡೆಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಬರುವ ವೀಕೆಂಡ್​​ನಲ್ಲಿ ಮತ್ತೆ ಕಲೆಕ್ಷನ್ ಜಾಸ್ತಿ ಆಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ‘ಧುರಂಧರ್’ ನಿರ್ದೇಶಕ ದೇವರ ಮಗ: ಸಿಕ್ಕಾಪಟ್ಟೆ ಹೊಗಳಿದ ವಿವೇಕ್ ಅಗ್ನಿಹೋತ್ರಿ

ಆದಿತ್ಯ ಧಾರ್ ನಿರ್ದೇಶನ ಮಾಡಿರುವ ‘ಧುರಂಧರ್’ ಸಿನಿಮಾದಲ್ಲಿ ನೈಜ ಘಟನೆ ಆಧಾರಿತ ಕಥೆ ಇದೆ. ಈ ಚಿತ್ರದಲ್ಲಿ ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಸಾರಾ ಅರ್ಜುನ್, ಸಂಜಯ್ ದತ್, ಅರ್ಜುನ್ ರಾಮ್​​ಪಾಲ್ ಮುಂತಾದವರು ಅಭಿನಯಿಸಿದ್ದಾರೆ. ಈ ಸಿನಿಮಾದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗಿದೆ. ಇದೊಂದು ಪ್ರೊಪಗಾಂಡಾ ಸಿನಿಮಾ ಎಂದು ಹಲವರು ಟೀಕಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.