‘ಧುರಂಧರ್’ ಸಿನಿಮಾದ ಟಿಕೆಟ್ ಬೆಲೆ ತಗ್ಗಿಸಿದ ಚಿತ್ರತಂಡ; ಕಾರಣ ಏನು?
ಈಗ ಕೇವಲ 199 ರೂಪಾಯಿಗೆ ‘ಧುರಂಧರ್’ ಸಿನಿಮಾ ನೋಡಬಹುದು ಎಂದು ಚಿತ್ರತಂಡ ಹೇಳಿದೆ. ಆದರೆ ಪ್ರೇಕ್ಷಕರಿಗೆ ಈ ಆಫರ್ ಸಿಗುವುದು ಕೇವಲ ಒಂದೇ ದಿನ ಮಾತ್ರ ಎಂದು ಕೂಡ ಹೇಳಲಾಗಿದೆ. ಭಾರತದ ಬಾಕ್ಸ್ ಆಫೀಸ್ನಲ್ಲಿ ‘ಧುರಂಧರ್’ ಸಿನಿಮಾದ ಕಲೆಕ್ಷನ್ 800 ಕೋಟಿ ರೂಪಾಯಿ ಮೀರಲಿದೆ.

ರಿಯಲ್ ಘಟನೆಯನ್ನು ಆಧರಿಸಿ ತಯಾರಾದ ‘ಧುರಂಧರ್’ (Dhurandhar) ಸಿನಿಮಾ ಬಿಡುಗಡೆ ಆಗಿ ಒಂದು ತಿಂಗಳು ಕಳೆದಿದೆ. ಈಗಲೂ ದೇಶಾದ್ಯಂತ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ರಣವೀರ್ ಸಿಂಗ್, ಸಾರಾ ಅರ್ಜುನ್, ಅಕ್ಷಯ್ ಖನ್ನಾ (Akshaye Khanna) ಮುಂತಾದವರು ನಟಿಸಿದ ಈ ಸಿನಿಮಾಗೆ ಬಹುತೇಕ ಪಾಸಿಟಿವ್ ವಿಮರ್ಶೆ ಸಿಕ್ಕಿದೆ. ಇಷ್ಟು ದಿನಗಳ ತನಕವೂ ಈ ಸಿನಿಮಾದ ಟಿಕೆಟ್ ಬೆಲೆ ದುಬಾರಿ ಆಗಿತ್ತು. ಆದರೆ ಈಗ ಟಿಕೆಟ್ ಬೆಲೆ ಕಡಿಮೆ ಮಾಡಲಾಗಿದೆ. ಆಯ್ದ ಕೆಲವು ಚಿತ್ರಮಂದಿರಗಳಲ್ಲಿ ಈಗ ಕೇವಲ 199 ರೂಪಾಯಿಗೆ ‘ಧುರಂಧರ್’ ಸಿನಿಮಾದ ಟಿಕೆಟ್ ಸಿಗಲಿದೆ.
‘ಧುರಂಧರ್’ ಸಿನಿಮಾ ಡಿಸೆಂಬರ್ 5ರಂದು ಬಿಡುಗಡೆ ಆಗಿತ್ತು. ಆಗ ಈ ಸಿನಿಮಾದ ಟಿಕೆಟ್ ಬೆಲೆ ಮುಗಿಲು ಮುಟ್ಟಿತ್ತು. ಸಿನಿಮಾದ ಅವಧಿ 3 ಗಂಟೆ 30 ನಿಮಿಷ ಆದ್ದರಿಂದ ಚಿತ್ರಮಂದಿರಗಳಲ್ಲಿ ಒಂದೇ ದಿನ ಹೆಚ್ಚು ಶೋ ಹಾಕಲು ಕಷ್ಟಪಡಬೇಕಿತ್ತು. ಕಡಿಮೆ ಅವಧಿಯ ಎರಡು ಸಿನಿಮಾಗಳ ಜಾಗವನ್ನು ‘ಧುರಂಧರ್’ ಆಕ್ರಮಿಸಿಕೊಳ್ಳುತ್ತದೆ. ಆ ಕಾರಣದಿಂದಾಗಿ ಸಿನಿಮಾ ಟಿಕೆಟ್ ಬೆಲೆ 250ರಿಂದ ಆರಂಭ ಆಗಿ, ಒಂದೂವರೆ ಸಾವಿರ ರೂಪಾಯಿ ತನಕವೂ ಆಗಿತ್ತು. ಆದರೆ ಈಗ ಟಿಕೆಟ್ ಬೆಲೆ ಕಡಿಮೆ ಮಾಡಲು ನಿರ್ಧರಿಸಲಾಗಿದೆ.
32ನೇ ದಿನ ‘ಧುರಂಧರ್’ ಸಿನಿಮಾದ ಕಲೆಕ್ಷನ್ ಗಣನೀಯವಾಗಿ ತಗ್ಗಿದೆ. ಇಷ್ಟು ದಿನಗಳ ಕಾಲ ಬಹುಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತಿದ್ದ ಈ ಸಿನಿಮಾ 32ನೇ ದಿನದಲ್ಲಿ ಕೇವಲ 4.75 ಕೋಟಿ ರೂಪಾಯಿ ಗಳಿಸಿತು. ಮುಂದಿನ ದಿನಗಳಲ್ಲಿ ಕಲೆಕ್ಷನ್ ಇನ್ನಷ್ಟು ತಗ್ಗಲಿದೆ ಎಂಬುದು ಖಚಿತ ಆಗಿದೆ. ಹಾಗಾಗಿ ಟಿಕೆಟ್ ಬೆಲೆ ಕಡಿಮೆ ಮಾಡುವ ಮೂಲಕ ಪ್ರೇಕ್ಷಕರನ್ನು ಸೆಳೆಯಲು ಚಿತ್ರತಂಡ ಮುಂದಾಗಿದೆ.
Iss dhamakedar offer ko haath se jaane matt dena! Dhurandhar tickets starting ₹199 only for today. 🔥💥
Book your tickets. 🔗 – https://t.co/cXj3M5DFbc#Dhurandhar Cinemas Celebrating Worldwide.@RanveerOfficial #AkshayeKhanna @duttsanjay @ActorMadhavan @rampalarjun… pic.twitter.com/tVyk0oBgra
— Jio Studios (@jiostudios) January 6, 2026
ಗೋಲ್ಡ್ ಕ್ಲಾಸ್ ರೀತಿಯ ಟಿಕೆಟ್ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಸಾಮಾನ್ಯ ಆಸನಗಳ ಟಿಕೆಟ್ ಬೆಲೆಯನ್ನು ತಗ್ಗಿಸಲಾಗಿದೆ. ಆದರೆ ಈ ಆಫರ್ ಇರುವುದು ಒಂದು ದಿನ ಮಾತ್ರ ಹಾಗೂ ಆಯ್ದ ಕೆಲವು ಚಿತ್ರಮಂದಿರಗಳಲ್ಲಿ ಮಾತ್ರ ಎಂದು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ಇದರಿಂದ ಚಿತ್ರದ ಕಲೆಕ್ಷನ್ ಮತ್ತೆ ಹೆಚ್ಚುತ್ತಾ ಎಂಬುದನ್ನು ಕಾದು ನೋಡಬೇಕು.
ಇದನ್ನೂ ಓದಿ: ಒಂದೇ ವರ್ಷದಲ್ಲಿ ಅಕ್ಷಯ್ ಖನ್ನಾ ಸಿನಿಮಾಗಳ ಕಲೆಕ್ಷನ್ 2 ಸಾವಿರ ಕೋಟಿ ರೂಪಾಯಿ!
‘ಧುರಂಧರ್’ ಸಿನಿಮಾಗೆ ಆದಿತ್ಯ ಧಾರ್ ಅವರು ನಿರ್ದೇಶನ ಮಾಡಿದ್ದಾರೆ. ರಣವೀರ್ ಸಿಂಗ್, ಸಂಜಯ್ ದತ್, ಅಕ್ಷಯ್ ಖನ್ನಾ, ಸಾರಾ ಅರ್ಜುನ್, ಅರ್ಜುನ್ ರಾಮ್ಪಾಲ್ ಮುಂತಾದವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ‘ಜಿಯೋ ಸ್ಟುಡಿಯೋಸ್’ ಮತ್ತು ‘ಬಿ62 ಸ್ಟುಡಿಯೋಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




