‘ಹೌದು, ನಾನು ಬಾದ್‌ಶಾ ಪತ್ನಿ’: ಕೊನೆಗೂ ಮದುವೆ ವದಂತಿಗೆ ತೆರೆ ಎಳೆದ ನಟಿ ಇಶಾ ರಿಖಿ

ಇಶಾ ರಿಖಿ ಅವರೊಂದಿಗೆ ಮದುವೆಯಾಗುವ ಮುನ್ನ ಬಾದ್‌ಶಾ ಅವರು ಜಾಸ್ಮಿನ್ ಮಸಿಹ್ ಅವರನ್ನು ವಿವಾಹವಾಗಿದ್ದರು. ಆದರೆ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ 2020ರಲ್ಲಿ ಇವರಿಬ್ಬರು ಪರಸ್ಪರ ಒಪ್ಪಿಗೆಯಿಂದ ದೂರಾಗಿದ್ದರು. ಈ ಮಾಜಿ ದಂಪತಿಗೆ ಜೆಸ್ಸೆಮಿ ಗ್ರೇಸ್ ಮಸಿಹ್ ಸಿಂಗ್ ಎಂಬ ಮಗಳಿದ್ದು, ಬಾದ್‌ಶಾ ಮತ್ತು ಜಾಸ್ಮಿನ್ ಇಬ್ಬರೂ ಸೇರಿ ಮಗಳನ್ನು ಪೋಷಿಸುತ್ತಿದ್ದಾರೆ.

‘ಹೌದು, ನಾನು ಬಾದ್‌ಶಾ ಪತ್ನಿ’: ಕೊನೆಗೂ ಮದುವೆ ವದಂತಿಗೆ ತೆರೆ ಎಳೆದ ನಟಿ ಇಶಾ ರಿಖಿ
Isha Rikhi, Badshah

Updated on: Jun 11, 2026 | 3:19 PM

ಪ್ರಖ್ಯಾತ ಬಾಲಿವುಡ್ ರ‍್ಯಾಪ್ ಸಿಂಗರ್ ಬಾದ್‌ಶಾ (Badshah) ಮತ್ತು ಪಂಜಾಬಿ ನಟಿ, ಮಾಡೆಲ್ ಇಶಾ ರಿಖಿ (Isha Rikhi) ಮದುವೆಯಾಗಿದ್ದಾರೆ ಎಂಬ ವದಂತಿಗಳಿಗೆ ಕೊನೆಗೂ ಅಧಿಕೃತ ಮುದ್ರೆ ಬಿದ್ದಿದೆ. ಕಳೆದ ಕೆಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಮದುವೆಯ (Badshah Wedding) ಊಹಾಪೋಹಗಳಿಗೆ ಇಶಾ ರಿಖಿ ಸ್ಪಷ್ಟನೆ ನೀಡುವ ಮೂಲಕ ಎಲ್ಲ ಕುತೂಹಲಗಳಿಗೂ ತೆರೆ ಎಳೆದಿದ್ದಾರೆ. ಬಾದ್‌ಶಾ ಈ ವಿಷಯವಾಗಿ ಯಾವುದೇ ಅಧಿಕೃತ ಹೇಳಿಕೆ ನೀಡದಿದ್ದರೂ, ಇಶಾ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನಡೆಸಿದ ‘ಆಸ್ಕ್ ಮಿ ಎನಿಥಿಂಗ್’ ಸಂವಾದದಲ್ಲಿ ತಾವು ಮದುವೆಯಾಗಿರುವುದನ್ನು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡದಿರಲು ಕಾರಣವೇನು? ಇನ್‌ಸ್ಟಾಗ್ರಾಮ್ ಸಂವಾದದ ಸಮಯದಲ್ಲಿ ಅಭಿಮಾನಿಯೊಬ್ಬರು, ‘ನೀವಿಬ್ಬರು ಮದುವೆಯಾಗಿದ್ದರೂ ಸೋಶಿಯಲ್ ಮೀಡಿಯಾದಲ್ಲಿ ಒಬ್ಬರನ್ನೊಬ್ಬರು ಏಕೆ ಫಾಲೋ ಮಾಡುತ್ತಿಲ್ಲ?’ ಎಂದು ನೇರವಾಗಿ ಪ್ರಶ್ನಿಸಿದ್ದರು. ಆ ಪ್ರಶ್ನೆಗೆ ಇಶಾ ರಿಖಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಅಭಿಮಾನಿಯ ಪ್ರಶ್ನೆಗೆ ಅತ್ಯಂತ ಹಾಸ್ಯಭರಿತವಾಗಿ ಉತ್ತರಿಸಿದ ಇಶಾ, ‘ಈ ಪ್ರಶ್ನೆಗಳು ನನಗೆ ಅತಿಯಾಗಿ ಎದುರಾಗುತ್ತಿವೆ. ಹೌದು, ನನಗೆ ಮದುವೆಯಾಗಿದೆ. ಇನ್ನು ನೀವೆಲ್ಲರೂ ಕೇಳುತ್ತಿರುವ ಮುಖ್ಯ ಪ್ರಶ್ನೆಗೆ ಬರುವುದಾದರೆ, ಇದಕ್ಕೆ ನನ್ನ ಪತಿಯೇ ಸರಿಯಾದ ವಿವರಣೆ ನೀಡಬೇಕು. ಪತಿದೇವ್ (ಬಾದ್‌ಶಾ), ಜನರಿಗೆ ಸಾಕಷ್ಟು ಪ್ರಶ್ನೆಗಳಿವೆ, ದಯವಿಟ್ಟು ಆದಷ್ಟು ಬೇಗ ಇದಕ್ಕೆ ಉತ್ತರಿಸಿ’ ಎಂದು ಬರೆದುಕೊಂಡು ಬಾದ್‌ಶಾ ಅವರನ್ನೇ ಟ್ಯಾಗ್ ಮಾಡಿದ್ದಾರೆ.

‘ನಿಮ್ಮ ಪತಿ ಬಾದ್‌ಶಾ ಜೊತೆ ಒಂದೇ ಒಂದು ಫೋಟೋ ಕೂಡ ಏಕೆ ಪೋಸ್ಟ್ ಮಾಡಿಲ್ಲ? ನೀವು ಅವರ ಪತ್ನಿಯಾಗಿದ್ದರೂ ಒಂದೇ ಒಂದು ಚಿತ್ರವೂ ಇಲ್ವಲ್ಲಾ?’ ಎಂದು ಮತ್ತೊಬ್ಬ ಅಭಿಮಾನಿ ಬೇಸರ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಇಶಾ, ಅಭಿಮಾನಿಗಳ ಮನಸ್ಸು ತಣಿಸಲು ತಮ್ಮಿಬ್ಬರ ಅಪರೂಪದ ಹಾಗೂ ಪ್ರೇಮಭರಿತ ಫೋಟೋ ಒಂದನ್ನು ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ. ಆ ಚಿತ್ರದಲ್ಲಿ ಇಶಾ ಅವರು ಬಾದ್‌ಶಾ ಅವರ ಮಡಲಲ್ಲಿ ಕುಳಿತು ಗಟ್ಟಿಯಾಗಿ ಆಲಂಗಿಸಿಕೊಂಡಿರುವುದನ್ನು ಕಾಣಬಹುದು. ಈ ಪ್ರೇಮಪೂರಿತ ಚಿತ್ರವನ್ನು ನೋಡಿ ದಂಪತಿಯ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಇದನ್ನೂ ಓದಿ: ಅಶ್ಲೀಲ ಹಾಡಿನ ವಿವಾದ: ಕ್ಷಮೆ ಕೇಳಿ, 50 ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಲು ಮುಂದಾದ ಬಾದ್​ಶಾ

ಇವರಿಬ್ಬರ ಮದುವೆಯ ಸುದ್ದಿ ಮೊದಲ ಬಾರಿಗೆ ಮುನ್ನೆಲೆಗೆ ಬಂದಿದ್ದು ಈ ವರ್ಷದ ಮಾರ್ಚ್ 24ರಂದು. ಇಶಾ ಅವರ ತಾಯಿ ಪೂನಂ ರಿಖಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಕೆಲವು ಮದುವೆಯ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿದ್ದವು. ಆ ಸಮಾರಂಭವು ಅತ್ಯಂತ ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ನಡೆದ ಖಾಸಗಿ ಕಾರ್ಯಕ್ರಮವಾಗಿತ್ತು. ಮದುವೆಯ ವಿಧಿವಿಧಾನಗಳ ಫೋಟೋಗಳಲ್ಲಿ ಬಾದ್‌ಶಾ ಕಂದು ಬಣ್ಣದ ಕುರ್ತಾ ಮತ್ತು ಚಿನ್ನದ ಬಣ್ಣದ ಪೇಟ ಧರಿಸಿದ್ದರೆ, ಇಶಾ ಕೆಂಪು ಬಣ್ಣದ ಸಾಂಪ್ರದಾಯಿಕ ಮದುವೆಯ ಉಡುಪಿನಲ್ಲಿ ಮಿಂಚಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us