ನಟಿ ರಿಯಾ ಚಕ್ರವರ್ತಿ (Rhea Chakraborty) ಅವರು ಬಾಲಿವುಡ್ನಲ್ಲಿ ಮಿಂಚುವ ಕನಸು ಕಂಡಿದ್ದರು. ಆದರೆ ಅವರ ಕನಸಿನ ವೇಗಕ್ಕೆ ಅಡ್ಡಗಾಲು ಹಾಕಿದ್ದು ಸುಶಾಂತ್ ಸಿಂಗ್ ರಜಪೂತ್ (Sushanth Singh Rajput) ಅವರ ನಿಧನ. ರಿಯಾ ಚಕ್ರವರ್ತಿ ಮತ್ತು ಸುಶಾಂತ್ ಸಿಂಗ್ ರಜಪೂತ್ ಅವರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ನಂತರ ಅವರಿಬ್ಬರು ಬ್ರೇಕಪ್ ಮಾಡಿಕೊಂಡರು. ಆ ಬ್ರೇಕಪ್ ನಡೆದ ಕೆಲವೇ ದಿನಗಳ ಬಳಿಕ ಸುಶಾಂತ್ ಅವರು ಅನುಮಾನಾಸ್ಪದ ರೀತಿಯಲ್ಲಿ ಸಾವಿಗೆ ಈಡಾಗಿದ್ದರಿಂದ ರಿಯಾ ಮೇಲೆ ಅನೇಕ ಆರೋಪಗಳನ್ನು ಹೊರಿಸಲಾಯಿತು. ಅಷ್ಟೇ ಅಲ್ಲದೇ ಅವರಿಗೆ ಅನೇಕ ಹಣೆಪಟ್ಟಿ ಕಟ್ಟಲಾಗಿತ್ತು. ಆ ಬಗ್ಗೆ ಇಷ್ಟು ದಿನ ಸುಮ್ಮನಿದ್ದ ರಿಯಾ ಚಕ್ರವರ್ತಿ ಅವರು ಈಗ ಮಾತನಾಡಿದ್ದಾರೆ. ಎಂಟಿವಿ ರೋಡೀಸ್ (MTV Roadies) ಕಾರ್ಯಕ್ರಮದಲ್ಲಿ ಅವರು ಈ ಕುರಿತು ಮೌನ ಮುರಿದಿದ್ದಾರೆ.
ರಿಯಾ ಚಕ್ರವರ್ತಿ ಅವರನ್ನು ‘ಗೋಲ್ಡ್ ಡಿಗ್ಗರ್’ ಎಂದು ಕೆಲವರು ಹೀಯಾಳಿಸಿದರು. ಹಣಕ್ಕಾಗಿ ಪ್ರೀತಿ ಮಾಡುವವಳು ಎಂಬುದು ಈ ಪದದ ಅರ್ಥ. ಇದೇ ರೀತಿ ಇನ್ನೂ ಅನೇಕ ಕಳಂಕವನ್ನು ಅವರಿಗೆ ಹೊರಿಸಲಾಗಿತ್ತು. ಅದರಿಂದ ರಿಯಾಗೆ ನೋವಾಗಿದ್ದು ನಿಜ. ಆದರೆ ತಿರುಗಿ ಮಾತನಾಡುವ ಪರಿಸ್ಥಿತಿ ಅವರದ್ದಾಗಿರಲಿಲ್ಲ. ಸುಶಾಂತ್ ಮನೆಯವರು ರಿಯಾ ಮೇಲೆ ದೂರು ದಾಖಲಿಸಿದ್ದರಿಂದ ಅವರು ಜೈಲು ಸೇರಬೇಕಾಯಿತು. ಇದೆಲ್ಲ ನಡೆದು ಈಗ ಮೂರು ವರ್ಷ ಕಳೆದಿದೆ. ಪರಿಸ್ಥಿತಿ ತುಂಬ ಬದಲಾಗಿದೆ. ಆ ದಿನಗಳನ್ನು ರಿಯಾ ಚಕ್ರವರ್ತಿ ಈಗ ಮೆಲುಕು ಹಾಕಿದ್ದಾರೆ.
ಇದನ್ನೂ ಓದಿ: ಕಹಿ ನೆನಪಿಂದ ಹೊರಬಂದು ಪ್ರವಾಸದಲ್ಲಿ ಮೋಜು ಮಾಡುತ್ತಿರುವ ಸುಶಾಂತ್ ಸಿಂಗ್ ಮಾಜಿ ಗೆಳತಿ ರಿಯಾ ಚಕ್ರವರ್ತಿ
‘ಜನರು ತುಂಬಾ ಮಾತನಾಡುತ್ತಾರೆ. ನನಗೆ ಅನೇಕ ಹಣೆಪಟ್ಟಿ ಕಟ್ಟಿದ್ದರು. ನನ್ನ ಬಗ್ಗೆಯೂ ಸಿಕ್ಕಾಪಟ್ಟೆ ಆಡಿಕೊಂಡಿದ್ದರು. ಅವರು ಕಟ್ಟಿದ ಹಣೆಪಟ್ಟಿಯನ್ನು ನಾನು ಒಪ್ಪಿಕೊಳ್ಳುತ್ತೇನಾ? ಅವರಿಂದಾಗಿ ನಾನು ಜೀವನದಲ್ಲಿ ಹಿಂದುಳಿಯುತ್ತೇನಾ? ಸಾಧ್ಯವೇ ಇಲ್ಲ. ಅಷ್ಟಕ್ಕೂ ಯಾರು ಅವರೆಲ್ಲ’ ಎಂದು ರಿಯಾ ಚಕ್ರವರ್ತಿ ಅವರು ಗುಡುಗಿದ್ದಾರೆ. ಒಂದು ವರ್ಗದ ಜನರು ಮೊದಲಿನಿಂದಲೂ ರಿಯಾ ಚಕ್ರವರ್ತಿಗೆ ಸಪೋರ್ಟ್ ಮಾಡುತ್ತಾ ಬಂದಿದ್ದಾರೆ. ಈಗಲೂ ಅವರ ಮಾತಿಗೆ ಅಭಿಮಾನಿಗಳು ಬೆಂಬಲ ಸೂಚಿಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ನಿಧನದ ಬಳಿಕ ರಿಯಾ ಚಕ್ರವರ್ತಿ ಅವರು ಅನೇಕ ಕಷ್ಟಗಳನ್ನು ಎದುರಿಸಿದರು. ಹಾಗಿದ್ದರೂ ಕೂಡ ಅವರಿಗೆ ಮಾಜಿ ಪ್ರಿಯಕರನ ಬಗ್ಗೆ ಇರುವ ಭಾವನೆ ಬದಲಾಗಿಲ್ಲ. ಸುಶಾಂತ್ ಜನ್ಮದಿನ ಮತ್ತು ಪುಣ್ಯಸ್ಮರಣೆಯ ಸಂದರ್ಭಗಳಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ರಿಯಾ ಅವರು ನಮನ ಸಲ್ಲಿಸುತ್ತಾರೆ. ಸುಶಾಂತ್ ಅವರ ಸಾವಿನ ರಹಸ್ಯ ಇನ್ನೂ ಬಯಲಾಗಿಲ್ಲ. ಈ ಪ್ರಕರಣದ ಅಂತಿಮ ತೀರ್ಪಿಗಾಗಿ ಅಭಿಮಾನಿಗಳು ಕಾದಿದ್ದಾರೆ. ಸುಶಾಂತ್ ಸಾವಿಗೆ ನ್ಯಾಯ ಸಿಗಬೇಕು ಎಂದು ಆಪ್ತರು ಮತ್ತು ಕುಟುಂಬದವರು ಹೋರಾಡುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.